‘ವಚನ ಮತ್ತು ಸಂತ ಪರಂಪರೆ ಮುಗಿಸಲು ಸಂಚು’
ಎಂಟೂವರೆ ನೂರು ವರ್ಷಗಳ ಹಿಂದೆ ವೇದ, ಪುರಾಣ, ಮೌಢ್ಯವನ್ನು ತಿರಸ್ಕರಿಸಿದ ಬಸವಣ್ಣನವರು ‘ದೇಹವೇ ದೇಗುಲ’ ಎಂದು ಹೇಳಿ ದೇವಾಲಯ ಸಂಸ್ಕೃತಿಯನ್ನೇನಿರಾಕರಿಸಿದರು. ಯಾರನ್ನೂ ಅನ್ಯರೆಂದು ಭಾವಿಸದೇ ‘ಇವ ನಮ್ಮವ, ಇವ ನಮ್ಮವ’ ಎಂದು ಎಲ್ಲರನ್ನೂ ಒಪ್ಪಿಕೊಂಡರು, ಅಪ್ಪಿಕೊಂಡರು. ‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ, ಆಗಮದ ಮೂಗ ಕೊಯ್ಯುವೆ’ ಎಂದು ವೇದ ಮತ್ತು ಅರ್ಥಹೀನ ಕರ್ಮಕಾಂಡಗಳನ್ನು ಖಂಡಿಸಿದರು. ಜಾತಿಯ ಹೊಲಸನ್ನು ಯಾವ ಪರಿ ಕಿತ್ತು ಹಾಕಿದರೆಂದರೆ ‘ಮಾದಾರ ಚೆನ್ನಯ್ಯನ ಮಗ’ ಎಂದು ತಮ್ಮನ್ನು ಕರೆದುಕೊಂಡರು.
ಭಾರತದ ಇತಿಹಾಸದಲ್ಲಿ ಬುದ್ಧ, ಮಹಾವೀರರ ಹಾಗೂ ಚಾರ್ವಾಕರ ನಂತರ ಮೌಢ್ಯ ಮತ್ತು ಅಸಮಾನತೆಗೆ ಎದುರಾಗಿ ನಿಂತದ್ದು ಕರ್ನಾಟಕದ ವಚನ ಚಳವಳಿ. ವಾಸ್ತವವಾಗಿ ಇದೊಂದೇ ಅಲ್ಲ,ಅದೇ ಕಾಲಘಟ್ಟದಲ್ಲಿ ಮಹಾರಾಷ್ಟ್ರದಲ್ಲಿ ತುಕಾರಾಮ ಮತ್ತು ಜ್ಞಾನೇಶ್ವರರ ಸಂತ ಚಳವಳಿ ಕೂಡ ಸನಾತನಿಗೆ ಸವಾಲಾಗಿ ನಿಂತಿತು.ಇಲ್ಲಿ ಬಸವಣ್ಣನವರು ಮತ್ತು ಅವರ ಸಹಚರರಿಗೆ ಯಾವ ರೀತಿ ಚಿತ್ರಹಿಂಸೆ ಯನ್ನು ನೀಡಲಾಯಿತೋ ಅದೇ ರೀತಿ ಮಹಾರಾಷ್ಟ್ರದಲ್ಲಿ ಸಂತ ತುಕಾರಾಮ ಮತ್ತು ಅವರ ಸಮಕಾಲೀನ ಸಂತರಿಗೆ ಕಿರುಕುಳ ನೀಡಲಾಯಿತು.
ಮನುವಾದಿಗಳು ಮತ್ತು ಅವರ ಬೆಂಬಲಿಗ ರಾಜ ಮಹಾರಾಜರಿಂದ ಈ ನೆಲದ ಸಮಾಜ ಸುಧಾರಣಾ ಚಳವಳಿಗಳು ಯಾವ ರೀತಿ ಚಿತ್ರಹಿಂಸೆಯನ್ನು ಅನುಭವಿಸಿದವು ಎಂಬುದು ಬಯಲಿಗೆ ಬರುತ್ತಲೇ ಇದೆ. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾಗಿದೆ.ಶ್ರೇಣೀಕೃತ ಜಾತಿ ವ್ಯವಸ್ಥೆಯ ಫಲಾನುಭವಿಗಳು ಸಮಾನತೆ,ಸಹೋದರತ್ವವನ್ನು ಎಂದೂ ಒಪ್ಪುವುದಿಲ್ಲ. ‘ಮನುಷ್ಯರೆಲ್ಲ ಒಂದೇ’ ಎಂಬ ಸಂದೇಶವನ್ನು ಇವರೆಂದೂ ಒಪ್ಪುವುದಿಲ್ಲ. ತಮ್ಮ ಅಳಿವು ಉಳಿವಿನ ಪ್ರಶ್ನೆ ಎದುರಾದರೆ ಯಾರನ್ನು ಬೇಕಾದರೂ ಮುಗಿಸಲು ಇವರೆಂದೂ ಹಿಂಜರಿಯುವುದಿಲ್ಲ. ಬುದ್ಧ, ಬಸವಣ್ಣ, ತುಕಾರಾಮರಿಂದ ಹಿಡಿದು ದಾಭೋಲ್ಕರ್, ಪನ್ಸಾರೆ, ಡಾ.ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್‌ರವರೆಗೆ ಯಾರನ್ನೂ ಇವರು ಉಳಿಯಲು ಬಿಟ್ಟಿಲ್ಲ. ತಮ್ಮ ವೈಚಾರಿಕ ವಿರೋಧಿಗಳನ್ನು ಮುಗಿಸಲು ಮನುವಾದಿಗಳು ಮತ್ತು ಕೋಮುವಾದಿಗಳು ಮುಖ್ಯವಾಗಿ ಎರಡು ತಂತ್ರಗಳನ್ನು ಅನುಸರಿಸುತ್ತಾರೆ. ಮೊದಲನೆಯದು ನೇರವಾಗಿ ದಾಳಿಗಿಳಿಯುವುದು. ನಂತರ ಇದು ಪ್ರಯೋಜನಕ್ಕೆ ಬಾರದ ಸಂದರ್ಭಗಳಲ್ಲಿ ಮತ್ತೊಂದು ತಂತ್ರವನ್ನು ಅನುಸರಿಸುತ್ತಾರೆ. ಅದು ತಮ್ಮ ವೈಚಾರಿಕ ವಿರೋಧಿಗಳ ಒಳಗೆ ನುಸುಳಿ ಅದನ್ನು ನಿಯಂತ್ರಿಸಲು ಮುಂದಾಗುತ್ತಾರೆ. ಕ್ರಾಂತಿಕಾರಿ ಐಕಾನ್‌ಗಳಾದ ಬುದ್ಧ, ಬಸವಣ್ಣ, ಸಂತ ತುಕಾರಾಮ, ಡಾ.ಅಂಬೇಡ್ಕರ್, ವಿವೇಕಾನಂದ, ಭಗತ್ ಸಿಂಗ್ ಮೊದಲಾದ ಸಮಾಜ ಸುಧಾರಕ, ಕ್ರಾಂತಿಕಾರಿ ಚೇತನಗಳನ್ನು ತಮ್ಮವರನ್ನಾಗಿ ಮಾಡಿಕೊಳ್ಳಲು ಮುಂದಾಗುತ್ತಾರೆ. ಈ ಸಮಾಜ ಸುಧಾರಕರು ಮತ್ತು ಕ್ರಾಂತಿಕಾರರ ಜಯಂತಿಯನ್ನು ಆಚರಿಸುವ ಹೊಸ ನಾಟಕ ಆರಂಭಿಸುತ್ತಾರೆ.
ಬ್ರಿಟಿಷ್ ಆಡಳಿತದ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದಿರುವುದು ಮಾತ್ರವಲ್ಲ, ಅನೇಕ ಸಂದರ್ಭಗಳಲ್ಲಿ ಸ್ವಾತಂತ್ರ್ಯಾ ಚಳವಳಿಗೆ ಬಗೆದಿರುವ ದ್ರೋಹ, ನಂತರ ಅಂದರೆ, ಸ್ವಾತಂತ್ರ್ಯ ನಂತರ ಗಾಂಧಿ ಹತ್ಯೆ ಇವರ ಇತಿಹಾಸ. ಅಂತಲೇ ಭಾರತದ ಜನರು ಇವರನ್ನು ದೂರವಿಟ್ಟಿದ್ದರು. ಆದರೆ ಜೆಪಿ ಚಳವಳಿಯಲ್ಲಿ ಒಳಗೆ ನುಸುಳಿ ಕಳೆದುಕೊಂಡಿದ್ದ ಸಾಮಾಜಿಕ ಮಾನ್ಯತೆಯನ್ನು ಮತ್ತೆ ಮರು ಸಂಪಾದಿಸಿದರು.
ನಂತರ ಅಣ್ಣಾ ಹಝಾರೆ ಮತ್ತು ಬಾಬಾ ರಾಮ್‌ದೇವ್ ನೇತೃತ್ವದಲ್ಲಿ ಲೋಕಪಾಲ ಸ್ಥಾಪನೆಗಾಗಿ ನಡೆದ ಹೋರಾಟದಲ್ಲಿ ಒಳ ನುಸುಳಿದ ಇವರು ಅಣ್ಣಾ ಹಝಾರೆ ಮತ್ತು ರಾಮ್‌ದೇವ್‌ರ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲದಿಂದ ದೇಶ ವ್ಯಾಪಿ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡರು. ಇದು ರಾಜಕೀಯ ತಂತ್ರವಾದರೆ ಸಾಮಾಜಿಕವಾಗಿ ಭಾರತೀಯ ಸಮಾಜದಲ್ಲಿ ಇನ್ನಷ್ಟು ಆಳವಾಗಿ ಬೇರು ಬಿಡಲು ಸಮಾಜ ಸುಧಾರಣಾ ಚಳವಳಿಗಳಲ್ಲಿ ನುಸುಳುತ್ತಿರುವ ಇವರು ಕರ್ನಾಟಕದ ಬಸವಣ್ಣನವರ ವಚನ ಚಳವಳಿ ಹಾಗೂ ಮಹಾರಾಷ್ಟ್ರದ ವಾರಕರಿ( ಸಂತ ಪರಂಪರೆ) ಸಂಪ್ರದಾಯದಲ್ಲಿ ನುಸುಳಿ ತಮ್ಮ ಕಾರ್ಯಸೂಚಿಯ ಜಾರಿಗೆ ಮುಂದಾಗಿದ್ದಾರೆ.
‘ಲಿಂಗಾಯತ ಎಂಬುದು ಜೈನ, ಬೌದ್ಧ, ಸಿಖ್ ಧರ್ಮಗಳಂತೆ ಪ್ರತ್ಯೇಕ ಧರ್ಮ. ಅದು ಹಿಂದೂ ಧರ್ಮದ ಭಾಗವಲ್ಲ’ ಎಂದು ಪ್ರತಿಪಾದಿಸಿ ರಾಜ್ಯದಲ್ಲಿ ಎಲ್ಲ ಕಡೆ ಸಭೆ, ಮೆರವಣಿಗೆಗಳು ನಡೆದಾಗ ಒಮ್ಮಲೆ ಬೆಚ್ಚಿ ಬಿದ್ದ ಸಂಘಪರಿವಾರ ಶರಣರ ವಚನಗಳನ್ನು ತಿರುಚಿ ‘ವಚನ ದರ್ಶನ’ ಎಂಬ ಪುಸ್ತಕವನ್ನು ಸಿದ್ಧಪಡಿಸಿ ಕರ್ನಾಟಕದ ವಿವಿಧ ಕಡೆ ಬಿಡುಗಡೆ ಮಾಡಿತು. ಅದನ್ನು ಲಿಂಗಾಯತರು ವಿರೋಧಿಸಿದರು. ಇದರಿಂದ ಹತಾಶವಾದ ಈ ಸಂಘಟನೆಗಳು ಈ ವರ್ಷ ಬಸವಾದಿ ಶರಣರ ಹಿಂದೂ ಸಮಾವೇಶಗಳನ್ನು ಎಲ್ಲೆಡೆ ನಡೆಸುತ್ತಿವೆ. ಇದಕ್ಕೆ ಗದಗ, ಬಸವ ಕಲ್ಯಾಣ ಮೊದಲಾದ ಕಡೆ ಲಿಂಗಾಯತರಿಂದ ಪ್ರಬಲ ವಿರೋಧ ಬರುತ್ತಿದೆ. ಆರೆಸ್ಸೆಸ್ ಶಾಖೆಯಲ್ಲಿ ತಯಾರಾಗಿ ಬಂದ ಮಹಾರಾಷ್ಟ್ರದ ಕನೇರಿ ( ಸಿದ್ದಗಿರಿ) ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿ ಈ ಸಮಾವೇಶಗಳಲ್ಲಿ ಮಾತನಾಡುತ್ತಿದ್ದಾರೆ. ಮುಸಲ್ಮಾನರು, ಕ್ರೈಸ್ತರು ಮತ್ತು ಕಮ್ಯುನಿಸ್ಟ್ ಪಕ್ಷಗಳ ಬಗ್ಗೆ ನೇರವಾಗಿ ಟೀಕಿಸಿ ಅತ್ಯಂತ ಅಸಭ್ಯ ವಾಗಿ ಮಾತನಾಡುತ್ತಿದ್ದಾರೆ. ಸಮಾಜದಲ್ಲಿ ಸರ್ವ ಧರ್ಮೀಯರು ಸೌಹಾರ್ದದಿಂದ ಬದುಕಲು ಸಂದೇಶ ನೀಡುವುದು ಯಾವುದೇ ಸ್ವಾಮಿ, ಮಠಾಧೀಶರ,ಧರ್ಮ ಗುರುಗಳ ಕರ್ತವ್ಯ. ಆದರೆ ಈ ಕನೇರಿ ಸ್ವಾಮಿ ಹಿಂದೂ ಮುಸಲ್ಮಾನರು ಹೊಡೆದಾಟಕ್ಕೆ ಕರೆ ಕೊಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಈತನಿಗೆ ಛೀಮಾರಿ ಹಾಕಿದೆ. ಕರ್ನಾಟಕದ ಯೋಗಿ ಆದಿತ್ಯನಾಥ್ ಆಗಲು ಹೊರಟಿರುವ ಈ ಕನೇರಿ ಸ್ವಾಮಿ ವೀರಶೈವ, ಲಿಂಗಾಯತ ಸ್ವಾಮಿಗಳ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ.
ಎಂಟೂವರೆ ನೂರು ವರ್ಷಗಳ ಹಿಂದೆ ವೇದ, ಪುರಾಣ, ಮೌಢ್ಯವನ್ನು ತಿರಸ್ಕರಿಸಿದ ಬಸವಣ್ಣನವರು ‘ದೇಹವೇ ದೇಗುಲ’ ಎಂದು ಹೇಳಿ ದೇವಾಲಯ ಸಂಸ್ಕೃತಿಯನ್ನೇನಿರಾಕರಿಸಿದರು. ಯಾರನ್ನೂ ಅನ್ಯರೆಂದು ಭಾವಿಸದೇ ‘ಇವ ನಮ್ಮವ, ಇವ ನಮ್ಮವ’ ಎಂದು ಎಲ್ಲರನ್ನೂ ಒಪ್ಪಿಕೊಂಡರು, ಅಪ್ಪಿಕೊಂಡರು. ‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ, ಆಗಮದ ಮೂಗ ಕೊಯ್ಯುವೆ’ ಎಂದು ವೇದ ಮತ್ತು ಅರ್ಥಹೀನ ಕರ್ಮಕಾಂಡಗಳನ್ನು ಖಂಡಿಸಿದರು. ಜಾತಿಯ ಹೊಲಸನ್ನು ಯಾವ ಪರಿ ಕಿತ್ತು ಹಾಕಿದರೆಂದರೆ ‘ಮಾದಾರ ಚೆನ್ನಯ್ಯನ ಮಗ’ ಎಂದು ತಮ್ಮನ್ನು ಕರೆದುಕೊಂಡರು. ಇಂಥ ಬಸವಣ್ಣನವರ ಬಗ್ಗೆ ಬಾಯಿಗೆ ಬಂದಂತೆ ಮಾತಾಡುತ್ತಿರುವ ಕನೇರಿ ಸ್ವಾಮಿ ವೇದ, ಆಗಮಗಳನ್ನು ಬಸವಣ್ಣ ವಿರೋಧಿಸಿಲ್ಲ. ವೇದಗಳ ಬಗ್ಗೆ ಯಾರೋ ವಚನ ಬರೆದು ಬಸವಣ್ಣ ನ ಹೆಸರು ಹಾಕಿದ್ದಾರೆ ಎಂದು ಕನೇರಿ ಸುಳ್ಳು ಪ್ರಚಾರ ನಡೆಸಿದ್ದಾರೆ.
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರನ್ನು ಕೂಡಲ ಸಂಗಮದಲ್ಲಿ ಮುಗಿಸಿದವರು. ಈಗ ಅವರ ಚರಿತ್ರೆಯನ್ನು ಅಳಿಸಿ ಹಾಕಲು, ವಿರೂಪಗೊಳಿಸಲು ಮಸಲತ್ತು ನಡೆಸಿದ್ದಾರೆ. ಇದು ಇದೇ ಮೊದಲ ಸಲವಲ್ಲ. ಎಂಟೂವರೆ ನೂರು ವರ್ಷಗಳ ಹಿಂದೆ ಬಸವಣ್ಣನವರನ್ನು ಮುಗಿಸಿದವರು ಮುಂದಿನ ಶತಮಾನಗಳಿಗೆ, ಪೀಳಿಗೆಗೆ ವಚನ ಸಾಹಿತ್ಯದ ಕ್ರಾಂತಿಕಾರಿ ಸಂದೇಶ ತಲುಪಬಾರದೆಂದು ನಾಶ ಮಾಡಲು ಹೊರಟರು. ಬಸವಣ್ಣನವರನ್ನು ಎತ್ತನ್ನಾಗಿ ಮಾಡಿದರು. ಕಲ್ಯಾಣದಲ್ಲಿ ರಕ್ತಪಾತ ನಡೆಯಿತು. ಆಗ ಚೆನ್ನಬಸವಣ್ಣ ಮತ್ತು ಇತರ ಶರಣರು ವಚನ ಸಾಹಿತ್ಯದ ಗಂಟುಗಳನ್ನು ಹೊತ್ತುಕೊಂಡು ಕಲ್ಯಾಣದಿಂದ ಎಂಟು ನೂರು ಕಿ.ಮೀ. ದೂರದಲ್ಲಿ ಇರುವ ಉಳವಿಗೆ ಹೊರಟರು. ದಾರಿಯಲ್ಲಿ ಅಡ್ಡ ಬಂದ ಬಿಜ್ಜಳನ ಸೈನ್ಯದ ಎದುರು ಸೆಣಸಾಡುತ್ತ ಅನೇಕರು ಹುತಾತ್ಮರಾದರು. ಇನ್ನು ಕೆಲವು ವಚನದ ಗಂಟುಗಳನ್ನು ಶರಣರು ಅಲ್ಲಲ್ಲಿ ಬಚ್ಚಿಟ್ಟರು. ಮುಂದೆ ಬಿಜಾಪುರದ ಫ.ಗು.ಹಳಕಟ್ಟಿಯವರು ಹಳ್ಳಿ, ಹಳ್ಳಿಗೆ, ಮನೆ ಮನೆಗೆ ಹೋಗಿ ವಚನ ಸಾಹಿತ್ಯದ ಗಂಟುಗಳನ್ನು ಸಂಗ್ರಹಿಸಿ ಬೆಳಕಿಗೆ ತಂದರು. ಆಗ ನಿಜವಾದ ಬಸವಣ್ಣನವರು ಅನಾವರಣಗೊಂಡರು.
ಇದು ವಚನ ಸಾಹಿತ್ಯದ ಇತಿಹಾಸವಾದರೆ ಮಹಾರಾಷ್ಟ್ರದ ಸಂತ ಚಳವಳಿಯ ಇತಿಹಾಸ ಇನ್ನೂ ಅದ್ಭುತವಾಗಿದೆ. ವರ್ಷಕ್ಕೊಮ್ಮೆ ವಿಠ್ಠಲನ ದರ್ಶನಕ್ಕಾಗಿ ಪುಣೆ ಮತ್ತಿತರ ಕಡೆಗಳಿಂದ ಕಾಲ್ನಡಿಗೆಯಲ್ಲಿ ಪಂಢರಾಪುರಕ್ಕೆ ಹೋಗುವ ಇವರನ್ನು ಮಹಾರಾಷ್ಟ್ರ ದಲ್ಲಿ ವಾರಕರಿಗಳು ಎಂದು ಕರೆಯುತ್ತಾರೆ. ಈ ವಾರಕರಿಗಳಿಗೆ ಜಾತಿ ಭೇದವಿಲ್ಲ. ಸಂತ ತುಕಾರಾಮರ ಕಾಲದಿಂದಲೂ ಪುರೋಹಿತ ಶಾಹಿಯನ್ನು ವಿರೋಧಿಸುತ್ತ ಬಂದ ವಾರಕರಿಗಳ ನಡುವೆ ನುಸುಳಿಕೊಂಡು ಇಡೀ ಸಂತ ಚಳವಳಿಗೆ ಹಿಂದುತ್ವದ ಬಣ್ಣ ಬಳಿಯಲು ಹೊರಟಿದ್ದಾರೆ.
ಸಂತ ಸಂಪ್ರದಾಯದ ವಾರಕರಿಗಳ ನಡುವೆ ಮನುವಾದಿ ವಿಕೃತಿ ನುಸುಳುವುದರ ಬಗ್ಗೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶರದ್ ಪವಾರ್ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ವಾರಕರಿ ಸಂಪ್ರದಾಯ ಕೇವಲ ಮಹಾರಾಷ್ಟ್ರ ಕ್ಕೆ ಸೀಮಿತವಾದ ಧಾರ್ಮಿಕ ಪರಂಪರೆ ಅಲ್ಲ. ಇದು ಸಂತರು ರೂಪಿಸಿದ ಮಾನವತೆ, ಸಮಾನತೆ, ಸಾಮಾಜಿಕ ಏಕತೆಯ ಕ್ರಾಂತಿ. ಜ್ಞಾನೇಶ್ವರ, ತುಕಾರಾಮರ ಪರಂಪರೆ ದ್ವೇಷಕ್ಕೆ ವಿರೋಧವಾಗಿದೆ. ಇಂಥ ಪರಂಪರೆ ಈಗ ಅಪಾಯದ ಅಂಚಿನಲ್ಲಿದೆ. ಎಲ್ಲರನ್ನೂ ಒಳಗೊಳ್ಳುವ ಪರಂಪರೆ ಈಗ ಮನುವಾದಿಗಳಿಂದ ಕಲಬೆರಕೆ ಯಾಗುತ್ತಿದೆ ಎಂದು ಪವಾರ್ ಹೇಳಿದ್ದಾರೆ.
ಮತ ನಿರಪೇಕ್ಷ ನಿಲುವಿಗೆ ಹೆಸರಾಗಿದ್ದ ಪಂಢರಾಪುರದ ವಾರಕರಿ ಪರಂಪರೆಯಲ್ಲಿ ಸಮಾನತೆಯ ಆಶಯಗಳಿಗೆ ವಿರುದ್ಧವಾದ ಕೋಮುವಾದಿ ವಿಷವನ್ನು ತುಂಬಲಾಗುತ್ತಿದೆ. ಸಂಘ ಪರಿವಾರಕ್ಕೆ ಸೇರಿದ ತುಷಾರ್, ಸಂಗ್ರಾಮ, ಪಠಾರೆ ಅಂಥವರನ್ನು ಅತ್ಯಂತ ವ್ಯವಸ್ಥಿತವಾಗಿ ವಾರಕರಿ ಸಂಪ್ರದಾಯದ ಒಳಗೆ ನುಸುಳಿಸಲಾಗಿದೆ. ಸುಧಾರಣಾವಾದಿ ಆಂದೋಲನಗಳಲ್ಲಿ ಒಳ ನುಸುಳಿ ಬುಡಮೇಲು ಮಾಡುವುದು ಇವರ ಚಾಳಿ. ಎರಡು ವರ್ಷಗಳ ಹಿಂದೆ ಬಿಜಾಪುರದಲ್ಲಿ ನಡೆದ ಮೇ ಸಾಹಿತ್ಯ ಸಮ್ಮೇಳನದಲ್ಲಿ ಉದ್ಘಾಟನಾ ಭಾಷಣ ಮಾಡಿದ ಪ್ರಕಾಶ್ ಅಂಬೇಡ್ಕರ್ ಅವರು ಪ್ರಗತಿಪರ ಸಂತ ಆಂದೋಲನವನ್ನು ಮುಗಿಸಲು ಸಂಘ ಪರಿವಾರ ಮಸಲತ್ತು ನಡೆಸಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಈಗ ಮಹಾರಾಷ್ಟ್ರದಲ್ಲಿ ಬಹು ದೊಡ್ಡ ವಿವಾದದ ಅಲೆಯನ್ನೆಬ್ಬಿಸಿದೆ. ಮನುವಾದ ಮತ್ತು ಕೋಮುವಾದದ ವಿರುದ್ಧ ಹೋರಾಟ ಈಗ ಮೊದಲ ಆದ್ಯತೆಯಾಗಬೇಕಾಗಿದೆ.