×
Ad

ಫ್ಯಾಶಿಸ್ಟ್ ವಿರೋಧಿ ಹೋರಾಟ: ಸಮಸ್ಯೆಗಳು, ಸವಾಲುಗಳು

Update: 2026-05-18 11:32 IST

ನಮ್ಮ ಇಂದಿನ ಮೊದಲ ಆದ್ಯತೆ ಸಮಾನತೆಯ ಸಮಾಜ ನಿರ್ಮಿಸುವುದಲ್ಲ.ಅದಕ್ಕೆ ಅಡ್ಡಿಯಾಗಿರುವ ನಮ್ಮ ಹೋರಾಟಗಳ ದಿಕ್ಕು ತಪ್ಪಿಸುತ್ತಿರುವ, ಯುವಕರ ಮೆದುಳಿಗೆ ವಿಷವನ್ನು ತುಂಬುತ್ತಿರುವ ಕೋಮುವಾದಿ, ಮನುವಾದಿ, ಫ್ಯಾಶಿಸ್ಟ್ ಶಕ್ತಿಗಳನ್ನು ಹಿಮ್ಮೆಟ್ಟಿಸುವುದಾಗಿದೆ. ಅವರನ್ನು ಹಿಮ್ಮೆಟ್ಟಿಸಿದ ನಂತರ ಮುಂದಿನ ಗುರಿ ಮತ್ತು ಹೋರಾಟದ ರೂಪುರೇಷೆಗಳನ್ನು ಗೊತ್ತುಪಡಿಸಿಕೊಳ್ಳೋಣ.

ಬಾಬಾಸಾಹೇಬ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡ ಬಹುತ್ವ ಭಾರತದ ಸಂವಿಧಾನವನ್ನು ಸಮಾಧಿ ಮಾಡಿ ಅದರ ಮೇಲೆ ಮನುವಾದಿ ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಮಸಲತ್ತು ನಡೆದಿರುವ ಇಂದಿನ ದಿನಗಳಲ್ಲಿ ಅದನ್ನು ಎದುರಿಸುವ,ವಿಫಲಗೊಳಿಸುವ ಮಾರ್ಗಗಳ ಬಗ್ಗೆ ಎಲ್ಲೆಡೆ ಸಂವಾದ,ಚರ್ಚೆಗಳು ನಡೆದಿವೆ. ಫ್ಯಾಶಿಸ್ಟ್ ರೂಪ ತಾಳುತ್ತಿರುವ ಈ ಅಪಾಯದ ವಿರುದ್ಧ ಎಲ್ಲ ಸಮಾನ ಮನಸ್ಕರು ಸೇರಿ ಹೋರಾಡುವ ಬಗ್ಗೆ ಹುಬ್ಬಳ್ಳಿಯಲ್ಲಿ ನಡೆದ ಮೇ ಸಾಹಿತ್ಯ ಸಮ್ಮೇಳನದಲ್ಲೂ ಎರಡು ದಿನ ಗಂಭೀರವಾದ ಅಭಿಪ್ರಾಯ ವಿನಿಮಯಗಳು ನಡೆದುವು. ಫ್ಯಾಶಿಸ್ಟ್ ಅಪಾಯದ ಬಗ್ಗೆ ಯಾವ ಗೊಂದಲವೂ ಇಲ್ಲ , ಎಲ್ಲರಿಗೂ ಸ್ಪಷ್ಟತೆ ಇದೆ. ಆದರೆ ಅದನ್ನು ಎದುರಿಸುವ ಮತ್ತು ವಿಫಲಗೊಳಿಸುವ ಕುರಿತು ಹಾಗೂ ಅದಕ್ಕೆ ರೂಪುಗೊಳ್ಳಬೇಕಾದ ಪರ್ಯಾಯದ ಬಗ್ಗೆ ಫ್ಯಾಶಿಸ್ಟ್ ವಿರೋಧಿ ಹೋರಾಟಗಾರರಲ್ಲಿ ಇನ್ನೂ ಖಚಿತವಾದ ಸ್ಪಷ್ಟತೆ ಮೂಡಿಲ್ಲ.

ಮನುವಾದಿ, ಕೋಮುವಾದಿ, ಫ್ಯಾಶಿಸ್ಟ್ ವಿರೋಧಿ ಹೋರಾಟದಲ್ಲಿ ಯಾರ್ಯಾರು ಇರಬೇಕು, ಅದರ ಗೊತ್ತು ಗುರಿಗಳೇನಾಗಿರಬೇಕು ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾದವು. ಶತಮಾನದ ಹಿರಿಯ ಪಕ್ಷ ಕಾಂಗ್ರೆಸನ್ನು ಫ್ಯಾಶಿಸ್ಟ್ ವಿರೋಧಿ ಹೋರಾಟದಲ್ಲಿ ಜೊತೆ ಸೇರಿಸಿಕೊಳ್ಳಬೇಕೇ, ಬೇಡವೇ ಎಂಬ ಬಗ್ಗೆ ಪ್ರಶ್ನೆಯ ಸುತ್ತಮುತ್ತ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇವೆ. ಹುಬ್ಬಳ್ಳಿಯಲ್ಲಿ ಮೇ ಸಾಹಿತ್ಯ ಸಮ್ಮೇಳನದ ಚರ್ಚೆಯ ವಿಷಯವೇ ‘ಸಾಂವಿಧಾನಿಕ ಪ್ರಜಾಸತ್ತೆ ಮೇಲಿನ ದಾಳಿ ; ಚಹರೆಗಳು ಮತ್ತು ಹೊರದಾರಿಗಳು’ ಎಂಬುದಾಗಿತ್ತು. ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ಮಾತನಾಡುತ್ತ, ಸಜ್ಜನರು ಮೌನ ಮುರಿದರೆ ಸಂವಿಧಾನ ಸುರಕ್ಷಿತವಾಗಿ ಉಳಿಯುತ್ತದೆ. ಫ್ಯಾಶಿಸ್ಟ್ ವಿರೋಧಿ ವೇದಿಕೆ ರೂಪುಗೊಳ್ಳಬೇಕಾಗಿದೆ, ಆದರೆ ಸಂಸತ್ತಿನ 543 ಸದಸ್ಯರ ಪೈಕಿ 252 ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇವೆ.ವರ್ಷದಿಂದ ವರ್ಷಕ್ಕೆ ಸಂಸತ್ತನ್ನು ಪ್ರವೇಶಿಸುತ್ತಿರುವ ಕ್ರಿಮಿನಲ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಇಂಥ ಸನ್ನಿವೇಶದಲ್ಲಿ ಸಂವಿಧಾನ ಸುರಕ್ಷಿತವಾಗಿ ಇರುತ್ತದೆ ಎಂದು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ ಎಂದು ಹೇಳಿ ಫ್ಯಾಸಿಸ್ಟ್ ವಿರೋಧಿ ರಂಗದ ಸಮಸ್ಯೆಗಳ ಬಗ್ಗೆ ಸೂಚ್ಯವಾಗಿ ಹೇಳಿದರು.

ಆದರೆ ಫ್ಯಾಶಿಸಮ್‌ನ ಈ ಅಪಾಯವನ್ನು ಎದುರಿಸಲು ಕಾಂಗ್ರೆಸ್ ಸಹಿತ ಎಲ್ಲ ಜಾತ್ಯತೀತ, ಪ್ರಜಾಪ್ರಭುತ್ವವಾದಿ ಪಕ್ಷಗಳು ಒಂದಾಗಬೇಕಾದ ಅಗತ್ಯವನ್ನು ಪ್ರತಿಪಾದಿಸಿದ ಮಾರ್ಕ್ಸ್‌ವಾದಿ ಚಿಂತಕ ಬಿ.ಆರ್.ಮಂಜುನಾಥ ಅವರು ಬಿಜೆಪಿ ಮತ್ತು ಸಂಘ ಪರಿವಾರದ ಶಕ್ತಿಗಳನ್ನು ಬಿಟ್ಟು ಕಾಂಗ್ರೆಸ್ ಸೇರಿದಂತೆ ಎಲ್ಲ ಸಮಾನ ಮನಸ್ಕ ವ್ಯಕ್ತಿ, ಶಕ್ತಿಗಳು ಒಂದಾಗಬೇಕು, ನಮ್ಮ ನಡುವಿನ ಜಗಳಕ್ಕೆ ಕದನ ವಿರಾಮವನ್ನು ಹಾಕಬೇಕು ಎಂದು ಹೇಳಿದರು.

ಇಂದಿರಾ ಗಾಂಧಿ ಅವರು ಹೇರಿದ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ ಮತ್ತು ಗಣಿ ಲೂಟಿಕೋರರನ್ನು ಜೈಲಿಗೆ ಕಳಿಸಿದ ಎಸ್.ಆರ್.ಹಿರೇಮಠ ಅವರು ಮಾತಾಡಿ, ಆಗ ನಾವು ಹೋರಾಡಿದ ತುರ್ತು ಪರಿಸ್ಥಿತಿಗಿಂತ ಮೋದಿ ಕಾಲದ ಇಂದಿನ ದಿನಗಳು ಅತ್ಯಂತ ಕೆಟ್ಟ ದಿನಗಳು. ತುರ್ತು ಪರಿಸ್ಥಿತಿಗಿಂತ ನೂರು ಪಟ್ಟು ಗಂಡಾಂತರಕಾರಿಯಾದ ಇಂದಿನ ಅಘೋಷಿತ ತುರ್ತು ಪರಿಸ್ಥಿತಿ ವಿರುದ್ಧ ಸಮಾನ ಮನಸ್ಕ ವ್ಯಕ್ತಿ, ಶಕ್ತಿಗಳು ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗ ಬೇಕೆಂದು ಮನವಿ ಮಾಡಿದರು. ಹಿರೇಮಠರ ಅಭಿಪ್ರಾಯ ದ ಬಗ್ಗೆ ಸಭಿಕರ ನಡುವೆ ಚರ್ಚೆ ಆರಂಭವಾಗಿ ಕೆಲವು ಪ್ರಶ್ನೆಗಳು ಎದುರಾದವು. ಮುಖ್ಯವಾಗಿ ಮೇ ಸಾಹಿತ್ಯ ಸಮ್ಮೇಳನದ ಸಂಘಟಕ ಬಸವರಾಜ ಸೂಳಿಬಾವಿ ಅವರು ಯಾವುದೇ ಸ್ಪಷ್ಟತೆ ಇಲ್ಲದ ಜನ ವಿರೋಧಿ ಆರ್ಥಿಕ ನೀತಿಗಳನ್ನು ತಾನು ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಮುಂದುವರಿಸಿದ ಕಾಂಗ್ರೆಸನ್ನು ಫ್ಯಾಶಿಸ್ಟ್ ವಿರೋಧಿ ರಂಗದಲ್ಲಿ ಹೇಗೆ ಸೇರಿಸಿಕೊಳ್ಳುವುದು ಎಂದು ಪ್ರಶ್ನಿಸಿದರು. ಕೆಲವು ಸಭಿಕರು ಅದೇ ಅಭಿಪ್ರಾಯ ವನ್ನು ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಹಿರೇಮಠರು ಹಿಟ್ಲರ್ ಕಾಲದ ಫ್ಯಾಶಿಸಮ್‌ಗಿಂತ ಇಂದಿನ ಫ್ಯಾಶಿಸಮ್ ನೂರು ಪಟ್ಟು ಅಪಾಯಕಾರಿಯಾಗಿದೆ ಎಂದು ಹೇಳಿ ಸಂಯುಕ್ತ ಹೋರಾಟವೊಂದೇ ಇದಕ್ಕೆ ಪರ್ಯಾಯ ಎಂದು ನುಡಿದರು.

ವಾಸ್ತವವಾಗಿ ನನಗೆ ಅನಿಸಿದಂತೆ ಫ್ಯಾಶಿಸ್ಟ್ ವಿರೋಧಿ ಹೋರಾಟದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಏಕತೆಗೆ ಅಡ್ಡಿಯಾಗಬಾರದು. ಕಾಂಗ್ರೆಸ್ ನೂರಕ್ಕೆ ನೂರರಷ್ಟು ಸೂಕ್ತ, ತತ್ವನಿಷ್ಠ ಪಕ್ಷವಾಗಿರಲಿಕ್ಕಿಲ್ಲ. ಆದರೆ ಅದು ಯಾವುದೇ ಧರ್ಮದ ಆಧಾರದಲ್ಲಿ ರಾಷ್ಟ್ರವನ್ನು ಕಟ್ಟಲು ಹೊರಟಿಲ್ಲ.ಜಾತ್ಯತೀತ ಭಾರತಕ್ಕೆ ತನ್ನ ಬದ್ಧ್ದತೆಯನ್ನು ಪ್ರದರ್ಶಿಸುತ್ತಲೇ ಇದೆ.ಅದರಲ್ಲಿ ಭ್ರಷ್ಟ, ದುಷ್ಟ , ಜಾತಿವಾದಿ ಶಕ್ತಿಗಳು ಇರುವಂತೆ ಸ್ವಚ್ಛ, ಪ್ರಾಮಾಣಿಕ ಜಾತ್ಯತೀತ, ಶಕ್ತಿಗಳು ಇವೆ. ಅದು ಯಾವುದೇ ಜಾತಿ , ಮತಕ್ಕೆ ಸೀಮಿತವಾದ ಪಕ್ಷವಲ್ಲ.ಅದರಲ್ಲಿ ಬ್ರಾಹ್ಮಣರಿಂದ ದಲಿತರವರೆಗೆ, ಬೌದ್ಧ್ದರಿಂದ ಮುಸಲ್ಮಾನರವರೆಗೆ ಎಲ್ಲರೂ ಇದ್ದಾರೆ. ಅದೊಂದು ರೀತಿ ಸಮುದ್ರ ಇದ್ದಂತೆ , ಚುನಾವಣೆ ಸಂದರ್ಭದಲ್ಲಿ ಒಮ್ಮ್ಮೊಮ್ಮೆ ದಾವಣಗೆರೆಯಂಥ ಕಡೆ ಅನ್ಯಾಯವಾದರೂ ಅದು ಇಲ್ಲಿ ಮುಖ್ಯವಾಗುವುದಿಲ್ಲ. ಆದರೂ ಅದಕ್ಕೆ ಪಾಠ ಕಲಿಸಲು, ಸರಿ ದಾರಿಗೆ ತರಲು ಆಗಾಗ ಕೆಲವೆಡೆ ಸೋಲಿನ ರುಚಿಯನ್ನು ತೋರಿಸಬೇಕಾಗುತ್ತದೆ. ಫ್ಯಾಶಿಸಮ್ ಎಂಬ ಅತ್ಯಂತ ಭಯಾನಕ ರೂಪ ತಾಳಿದ ಶತ್ರುವನ್ನು ಎಲ್ಲರೂ ಸೇರಿ ಹೋರಾಡಿದರೆ ಮಾತ್ರ ಎದುರಿಸಲು ಸಾಧ್ಯ. ಕಾಂಗ್ರೆಸನ್ನು ಅದರ ಎಲ್ಲ ಲೋಪದೋಷಗಳೊಂದಿಗೆ ಜೊತೆಗಿಟ್ಟು ಕೊಂಡೇ ಹೋರಾಡಬೇಕಾದುದು ಇಂದಿನ ಚಾರಿತ್ರಿಕ ಅನಿವಾರ್ಯತೆಯಾಗಿದೆ. ಕೆಲವು ಪ್ರಾದೇಶಿಕ ಪಕ್ಷಗಳನ್ನೂ ಫ್ಯಾಶಿಸ್ಟ್ ವಿರೋಧಿ ಒಕ್ಕೂಟ ಒಳಗೊಳ್ಳಬಹುದು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ನಾಝಿ, ಫ್ಯಾಶಿಸ್ಟ್ ಸರ್ವಾಧಿಕಾರಿ ಹಿಟ್ಲರ್ ಮತ್ತು ಇಟಲಿಯ ಮುಸ್ಸೋಲಿನಿ ಎಂಬ ಫ್ಯಾಶಿಸ್ಟ್ ಭಯೋತ್ಪಾದಕರು ಇಡೀ ಜಗತ್ತನ್ನೇ ಆಕ್ರಮಿಸಲು ಹೊರಟಾಗ ಅಂದಿನ ಸೋವಿಯತ್ ರಶ್ಯದ ನಾಯಕ ಸ್ಟಾಲಿನ್ ಇದರ ಅಪಾಯವನ್ನು ಅರಿತು ಶತ್ರುರಾಷ್ಟ್ರಗಳಾದ ಅಮೆರಿಕ ಮತ್ತು ಇಂಗ್ಲೆಂಡ್ ಜೊತೆಗೆ ಒಪ್ಪಂದ ಮಾಡಿಕೊಂಡರು. ಮೊದಲು ಅತ್ಯಂತ ಅಪಾಯಕಾರಿಯಾದ ಶತ್ರುವನ್ನು ಎದುರಿಸುವುದು ನಮಗೆ ಮುಖ್ಯ ವಾಗಬೇಕಾಗಿದೆ ಎಂಬುದು ಅವರ ನಿಲುವಾಗಿತ್ತು.ಅಂತಲೇ ಚರ್ಚಿಲ್ ಮತ್ತು ರೂಸ್‌ವೆಲ್ಟ್ ಅವರಿಗೆ ಸ್ನೇಹ ಹಸ್ತ ಚಾಚಿದರು.

ಹಿಟ್ಲರ್ ಕಾಲದಲ್ಲಿ ಬಲ್ಗೇರಿಯದ ಬಹುದೊಡ್ಡ ಮಾರ್ಕ್ಸ್‌ವಾದಿ ಚಿಂತಕರಾಗಿದ್ದ, ಕಮ್ಯುನಿಸ್ಟ್ ನಾಯಕ ಡಿಮಿತ್ರೋವ್ ಅವರು ಫ್ಯಾಶಿಸ್ಟ್ ವಿರೋಧಿ ಹೋರಾಟ ಮತ್ತು ಸಂಘಟನೆಯ ಸ್ವರೂಪದ ಬಗ್ಗೆ ಸಾಕಷ್ಟು ವಿವರವಾದ ವಿಶ್ಲೇಷಣೆ ಮಾಡಿದ್ದಾರೆ. ಡಾ.ಬಿ.ಆರ್. ಮಂಜುನಾಥ ಅವರು ತಮ್ಮ ಭಾಷಣದಲ್ಲಿ ಇದರ ಬಗ್ಗೆ ಉಲ್ಲೇಖಿಸಿದರು. ಭಾರತದ ಸಂಘ ಪರಿವಾರದ ಫ್ಯಾಶಿಸಮ್ ಅಂದಿನ ಹಿಟ್ಲರ್, ಮುಸ್ಸೋಲಿನಿ ಫ್ಯಾಶಿಸಮ್‌ಗಿಂತ ನೂರಾರು ಪಟ್ಟು ಅಪಾಯಕಾರಿ ಆಗಿದೆ.ಬಹಿರಂಗವಾಗಿ ಏನನ್ನೂ ತೋರಿಸಿಕೊಳ್ಳದೇ ಅತ್ಯಂತ ನಯವಾಗಿ ವಿಷಪ್ರಾಶನ ಮಾಡುತ್ತದೆ.ಹಿರೇಮಠರು ಹೇಳಿದಂತೆ ಅದರ ಒಳ ಮಸಲತ್ತುಗಳು ಸುಲಭಕ್ಕೆ ಅರ್ಥವಾಗುವುದಿಲ್ಲ. ಆದ್ದರಿಂದ ಬಿಜೆಪಿ ಹಾಗೂ ಸಂಘ ಪರಿವಾರ ಮತ್ತು ಅದರ ಪರವಾಗಿರುವ ಪಕ್ಷಗಳನ್ನು ಹೊರತು ಪಡಿಸಿ ಕಾಂಗ್ರೆಸನ್ನು ಒಳಗೊಂಡು ಉಳಿದವರೆಲ್ಲರು ಒಂದಾಗಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ.

ನಮ್ಮ ಇಂದಿನ ಮೊದಲ ಆದ್ಯತೆ ಸಮಾನತೆಯ ಸಮಾಜ ನಿರ್ಮಿಸುವುದಲ್ಲ.ಅದಕ್ಕೆ ಅಡ್ಡಿಯಾಗಿರುವ ನಮ್ಮ ಹೋರಾಟಗಳ ದಿಕ್ಕು ತಪ್ಪಿಸುತ್ತಿರುವ, ಯುವಕರ ಮೆದುಳಿಗೆ ವಿಷವನ್ನು ತುಂಬುತ್ತಿರುವ ಕೋಮುವಾದಿ, ಮನುವಾದಿ, ಫ್ಯಾಶಿಸ್ಟ್ ಶಕ್ತಿಗಳನ್ನು ಹಿಮ್ಮೆಟ್ಟಿಸುವುದಾಗಿದೆ. ಅವರನ್ನು ಹಿಮ್ಮೆಟ್ಟಿಸಿದ ನಂತರ ಮುಂದಿನ ಗುರಿ ಮತ್ತು ಹೋರಾಟದ ರೂಪುರೇಷೆಗಳನ್ನು ಗೊತ್ತುಪಡಿಸಿಕೊಳ್ಳೋಣ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸನತ್ ಕುಮಾರ ಬೆಳಗಲಿ

contributor

Similar News