ಬಾಗಲಕೋಟೆಯ ಘಟನೆ ಸುತ್ತಮುತ್ತ
ಬಾಗಲಕೋಟೆಯ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿ ಯಾರೇ ತಪ್ಪಿತಸ್ಥರಾಗಿರಲಿ ಅವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಲು ಯಾರ ಅಭ್ಯಂತರವೂ ಇಲ್ಲ. ಕಾಂಗ್ರೆಸ್ ಶಾಸಕ ಮೇಟಿಯವರ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಘಟನೆ ವಿಶೇಷ ಮಹತ್ವ ಪಡೆದಿದೆ. ಇದರ ಫಲಾನುಭವಿಗಳಾರು ಎಂಬುದು ಚುನಾವಣಾ ಫಲಿತಾಂಶದ ನಂತರ ಗೊತ್ತಾಗುತ್ತದೆ. ಈಗಿನ ಪ್ರಕ್ಷುಬ್ಧ ವಾತಾವರಣ ಮತ್ತು ಕೋಮು ವಿಭಜನೆ ಚುನಾವಣೆ ಮುಗಿಯುವವರೆಗೆ ಮುಂದುವರಿದರೆ ಅಚ್ಚರಿ ಪಡಬೇಕಾಗಿಲ್ಲ.
ಕೋಮುವಾದದ ದಳ್ಳುರಿಗೆ ಸಿಲುಕಿದ ಊರುಗಳು ಹೇಗೆ ಅವನತಿಯತ್ತ ದಾಪುಗಾಲಿಡುತ್ತವೆ ಎಂಬುದಕ್ಕೆ ನಮ್ಮ ಕಣ್ಣ ಮುಂದೆ ಹಲವಾರು ಉದಾಹರಣೆಗಳಿವೆ. ಉರಿಯುವ ಬೆಂಕಿಯಲ್ಲಿ ಊರು ಸುಟ್ಟು ಹೋದರೂ ಅದರಿಂದ ಮೈ ಕಾಯಿಸಿಕೊಳ್ಳುವವರು ಅದನ್ನು ಇಷ್ಟ ಪಡುತ್ತಾರೆ. ಯಾವುದೇ ಗಲಭೆ, ಹಿಂಸಾಚಾರಕ್ಕೆ ಯಾರು ಕಾರಣ ಎಂಬುದನ್ನು ಹುಡುಕುವ ಜೊತೆ ಜೊತೆಗೆ ಈ ಅಶಾಂತಿಯ ರಾಜಕೀಯ ಫಲಾನುಭವಿಗಳು ಯಾರು ಎಂಬ ಪ್ರಶ್ನೆಗೆ ಉತ್ತರವನ್ನೂ ಹುಡುಕಬೇಕಿದೆ. ಒಂದೊಂದು ರಾಜಕೀಯ ಪಕ್ಷಗಳಿಗೆ ಅವುಗಳದೇ ಆದ ಕಾರ್ಯಸೂಚಿಗಳು ಇರುತ್ತವೆ. ಕಾಂಗ್ರೆಸ್‌ನಂಥ ಪಕ್ಷಗಳು ಗ್ಯಾರಂಟಿ ಘೋಷಣೆ ಮಾಡಿ ಮತದಾರರ ಮುಂದೆ ಹೋಗುತ್ತವೆ. ಇನ್ನು ಕೆಲ ಪಕ್ಷಗಳು ಸ್ಥಳೀಯ, ಪ್ರಾದೇಶಿಕ ಜಾತಿಯನ್ನು ಬಳಸಿಕೊಳ್ಳುತ್ತವೆ. ಎಡಪಂಥೀಯ ಪಕ್ಷಗಳು ರೈತ, ಕಾರ್ಮಿಕರ, ಸಮಸ್ಯೆಗಳ ಸುತ್ತ ಸಂಘಟನೆ ಮಾಡುತ್ತವೆ. ಇವುಗಳಲ್ಲದೇ ಮತ್ತೆ ಕೆಲವು ಪಕ್ಷಗಳಿವೆ. ಕೋಮು ಆಧಾರದಲ್ಲಿ ಜನರನ್ನು ವಿಭಜಿಸಿ, ಪ್ರಕ್ಷುಬ್ಧ ಸ್ಥಿತಿಯ ನಡುವೆ ಅಧಿಕಾರಕ್ಕೆ ಬರಲು ಹವಣಿಸುತ್ತವೆ. ಇದು ಭಾರತದ ಇಂದಿನ ಪ್ರಜಾಪ್ರಭುತ್ವದ ಸ್ಥಿತಿ.
ಅಂತಲೇ ಸಂವಿಧಾನ ಶಿಲ್ಪಿಬಾಬಾಸಾಹೇಬ ಅಂಬೇಡ್ಕರ್ ಅವರು ಭಾರತ ರಾಜಕೀಯವಾಗಿ ಪ್ರಜಾಪ್ರಭುತ್ವ ಪದ್ಧತಿಯನ್ನು ಸ್ವೀಕರಿಸಿದೆ. ಆದರೆ, ಭಾರತದ ಸಮಾಜ ಪ್ರಜಾಪ್ರಭುತ್ವ್ವವಾಗಿಲ್ಲ. ಈ ವಿರೋಧಾಭಾಸಗಳ ಜೊತೆ ಸಾಗುತ್ತಿದ್ದೇವೆ ಎಂದಿದ್ದರು. ಸಾವಿರಾರು ಜಾತಿ, ಕೋಮು, ಆಚಾರ, ವಿಚಾರಗಳನ್ನು ಒಳಗೊಂಡ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಳ್ಳುವುದು ಸುಲಭವಲ್ಲ. ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆ ಬಿಟ್ಟರೆ ಪ್ರಜಾಪ್ರಭುತ್ವ ಬೇರು ಬಿಟ್ಟಿರುವುದಕ್ಕೆ ಬೇರಾವ ಲಕ್ಷಣಗಳು ಇಲ್ಲಿ ಕಾಣುವುದಿಲ್ಲ.
ಇತ್ತೀಚಿನ ಬಾಗಲಕೋಟೆ ಘಟನೆಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾತ್ರವಲ್ಲ ಎಲ್ಲ ಅಭಿವೃದ್ಧಿ ಚಟುವಟಿಕೆಗಳಿಗೆ ವ್ಯಾಪಾರ, ವಹಿವಾಟುಗಳಿಗೆ, ಶೈಕ್ಷಣಿಕ ವಾತಾವರಣಕ್ಕೆ ಅತ್ಯಂತ ಕಂಟಕಕಾರಿ ಆಗಿರುವುದು ಕೋಮು ಗಲಭೆ ಮತ್ತು ಹಿಂಸಾಚಾರ. ಬಾಗಲಕೋಟೆಯಲ್ಲಿ ಇತ್ತೀಚಿಗೆ ನಡೆದ ಕೋಮು ಹಿಂಸಾಚಾರದ ಕಾವು ಇನ್ನೂ ತಣ್ಣಗಾಗಿಲ್ಲ. ವಿಧಾನಸಭೆ ಉಪ ಚುನಾವಣೆ ಮುಗಿಯುವವರೆಗೆ ಇದು ಕಾವೇರುತ್ತಲೇ ಇರುತ್ತದೆ ಅಂದರೆ ಅತಿಶಯೋಕ್ತಿಯಲ್ಲ. ಆದರೆ ಬಾಗಲಕೋಟೆಯ ವ್ಯಾಪಾರ, ವಹಿವಾಟುಗಳಿಗೆ ಇದರಿಂದ ತುಂಬಾ ತೊಂದರೆಯಾಗಿದೆ. ಅಲ್ಲಿಂದ ಬಂದ ವರದಿಗಳು ಹಾಗೂ ನನಗೆ ಸಿಕ್ಕ ಖಚಿತ ಮಾಹಿತಿಯ ಪ್ರಕಾರ ಶಿವಾಜಿ ಜಯಂತಿಯ ಮೆರವಣಿಗೆಯ ದಿನ ನಡೆದ ಘಟನೆಯ ಪರಿಣಾಮವಾಗಿ ನಿಷೇಧಾಜ್ಞೆ ಹೇರಿರುವುದರಿಂದ ಒಂದು ವಾರದಿಂದ ಗ್ರಾಮೀಣ ಪ್ರದೇಶದ ಜನರು ಹಾಗೂ ಅಕ್ಕಪಕ್ಕದ ತಾಲೂಕುಗಳ ಜನರು ಸದಾ ಪ್ರಕ್ಷುಬ್ಧ ವಾದ ನಿಷೇಧಾಜ್ಞೆ ಹೇರಲ್ಪಟ್ಟಿರುವ ಬಾಗಲಕೋಟೆಗೆ ಬರಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ವ್ಯಾಪಾರ, ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿವೆ. ತಮ್ಮ ವ್ಯಾಪಾರ, ವಹಿವಾಟುಗಳು ನಿಂತು ಹೋಗಿರುವುದರಿಂದ ವ್ಯಾಪಾರಸ್ಥರು ರೋಸಿ ಹೋಗಿದ್ದಾರೆ.
ನಾನು ಹುಬ್ಬಳ್ಳಿಯಲ್ಲಿ 25 ವರ್ಷಗಳ ಕಾಲ ಇದ್ದೆ. ಈಗಲೂ ಹುಬ್ಬಳ್ಳಿ-ಧಾರವಾಡದಲ್ಲಿ ಇರುವೆ. ಹುಬ್ಬಳ್ಳಿ ಈಗ ಕರ್ನಾಟಕದ ಮಾತ್ರವಲ್ಲ ಇಡೀ ದಕ್ಷಿಣ ಭಾರತದ ಸಂಘ ಪರಿವಾರದ ಪ್ರಮುಖ ಕೇಂದ್ರ. ಎಂಭತ್ತರ ದಶಕದಲ್ಲಿ ಇಲ್ಲಿ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸುವ ಕುರಿತಂತೆ ನಡೆದ ಕೋಮು ಹಿಂಸಾಚಾರದಲ್ಲಿ ಪೊಲೀಸ್ ಗೋಲಿಬಾರ್‌ಗೆ ಐದಾರು ಜನ ಬಲಿಯಾದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿರುವುದರಿಂದ ಒಂದೂವರೆ ತಿಂಗಳ ಕಾಲ ಕರ್ಫ್ಯೂ ಹೇರಲಾಗಿತ್ತು. ಇದರಿಂದ ವ್ಯಾಪಾರ, ವಹಿವಾಟು ಮತ್ತು ಶೈಕ್ಷಣಿಕ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಉಂಟಾಯಿತು. ಆ ಕಾಲದಲ್ಲೇ ಛೋಟಾ ಮುಂಬೈ ಎಂದು ಕರೆಯಲ್ಪಡುತ್ತಿದ್ದ ಹುಬ್ಬಳ್ಳಿಯ ಸುತ್ತಮುತ್ತಲಿನ ಐದಾರು ಜಿಲ್ಲೆಗಳ ಜನರು ವ್ಯಾಪಾರ,
ವಹಿವಾಟುಗಳಿಗಾಗಿ, ಆಸ್ಪತ್ರೆಯ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಬರುತ್ತಾರೆ.ಕರ್ಫ್ಯೂ ಪರಿಣಾಮವಾಗಿ ಜನರು ಹುಬ್ಬಳ್ಳಿಗೆ ಬರುವುದು ಒಮ್ಮಿಂದೊಮ್ಮೆಲೇ ನಿಂತು ಹೋಯಿತು. ಹುಬ್ಬಳ್ಳಿಯ ಬದಲಿಗೆ ಗದಗ ಮತ್ತು ಹಾವೇರಿಗಳಿಗೆ ಹೋಗತೊಡಗಿದರು.ಈಗ ಅವೆರಡೂ ನಗರಗಳು ದೊಡ್ಡ ವ್ಯಾಪಾರ ಕೇಂದ್ರಗಳಾಗಿ ಬೆಳೆದಿವೆ. ಇದಲ್ಲದೆ ಕೋಮುವಾದದ ಪರಿಣಾಮವಾಗಿ ವ್ಯಾಪಾರ ,
ವಹಿವಾಟು ಮಾತ್ರವಲ್ಲ ಅಭಿವೃದ್ಧಿ ಚಟುವಟಿಕೆಗಳಲ್ಲೂ ಹುಬ್ಬಳ್ಳಿ ಹಿಂದೆ ಉಳಿದಿದೆ. ಹುಬ್ಬಳ್ಳಿಯಿಂದ ಕೇವಲ 18 ಕಿ.ಮಿ. ಅಂತರದಲ್ಲಿ ಧಾರವಾಡ ಇದ್ದರೂ ಅಲ್ಲಿ ಹುಬ್ಬಳ್ಳಿಯಷ್ಟು ಪರಿಸ್ಥಿತಿ ಹದಗೆಟ್ಟಿಲ್ಲ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ವಿವರಿಸಬೇಕಾಗಿಲ್ಲ.ಶೈಕ್ಷಣಿಕ, ವೈದ್ಯಕೀಯ ಮೊದಲಾದ ಕ್ಷೇತ್ರಗಳಿಗಿಂತ ಮಂಗಳೂರು , ಉಡುಪಿ ಶತಮಾನದ ಹಿಂದೆಯೇ ಕರ್ನಾಟಕದ ಉಳಿದ ಜಿಲ್ಲೆಗಳಿಗಿಂತ ಸಾಕಷ್ಟು ಮುಂದಿದ್ದವು. ಈಗಲೂ ಇವೆ. ಆದರೆ ನಿರೀಕ್ಷಿಸಿದಷ್ಟು ಅಲ್ಲ. ಜನರು ಕೇಳದೇ ಯಾವ ಸರಕಾರವೂ ಏನನ್ನೂ ಕೊಡುವುದಿಲ್ಲ. ಜನರ ನಿರಾಸಕ್ತಿಯಿಂದಾಗಿ ಜಿಲ್ಲೆಗೆ ಸರಕಾರದಿಂದ ಬರಬೇಕಾದ ಅಭಿವೃದ್ಧಿ ಯೋಜನೆಗಳು, ವೈದ್ಯಕೀಯ ಸೌಕರ್ಯಗಳು ಬರಲಿಲ್ಲ. ಅತ್ಯಂತ ಹಿಂದುಳಿದ. ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ ಜಿಲ್ಲೆಗಳು ಈ ನಿಟ್ಟಿನಲ್ಲಿ ಎಷ್ಟೋ ವಾಸಿ. ಕಲಬುರಗಿ ಜನರು ಪಟ್ಟು ಹಿಡಿದು ಹೋರಾಟ ಮಾಡಿ ಸಂವಿಧಾನದ ವಿಶೇಷ ಸ್ಥಾನಮಾನ 370 ಪಡೆದರು. ಇದರಿಂದಾಗಿ ಕರ್ನಾಟಕದ ಎಲ್ಲಾ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ, ಸರಕಾರದ ನೌಕರಿಗಳಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಮೀಸಲು ವ್ಯವಸ್ಥೆ ಇದೆ. ಈ ಭಾಗಕ್ಕೆ ಸಾವಿರಾರು ಕೋಟಿ ರೂ. ವಿಶೇಷ ಅನುದಾನ ಬರುತ್ತದೆ. ಕಲಬುರಗಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯ, ಇಎಸ್.
ಐ. ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ, ಸಂಜಯ ಗಾಂಧಿ ಆಸ್ಪತ್ರೆ ಇದೆ. ನಿಮಾನ್ಸ್ಸ್ ಕೂಡ ಬರಲಿದೆ. ಇದಕ್ಕೆ ಮುಖ್ಯ ಕಾರಣ ಕಲ್ಯಾಣ ಕರ್ನಾಟಕ ಕೋಮು ಗಲಭೆ ಮುಕ್ತ ಪ್ರದೇಶವಾಗಿದೆ. ಕೋಮು ರಾಜಕೀಯದ ಬಗ್ಗೆ ಜನರು ಮಾತಾಡುವುದಿಲ್ಲ. ಆದರೆ ಮಂಗಳೂರು ಈಗ ನಿರಂತರವಾಗಿ ಕೋಮು ಹಿಂಸಾಚಾರ ಪೀಡಿತವಾಗಿದೆ. ಬಹುತೇಕ ಯುವಕರು ತಲೆಯಲ್ಲಿ ಕೋಮು ದ್ವೇಷದ ವಿಷ ಬೀಜ ಬಿತ್ತಲಾಗಿದೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಸರಕಾರದ ಯಾವ ಮಹತ್ವದ ಯೋಜನೆಗಳೂ ಇಲ್ಲಿ ಬಂದಿಲ್ಲ ಯಾವುದೇ ಪ್ರದೇಶದಲ್ಲಿ ಬಂಡವಾಳ ಹೂಡಿಕೆ ಮಾಡುವವರು,
ವ್ಯಾಪಾರ ವಹಿವಾಟು ನಡೆಸುವವರು ಅಲ್ಲಿ ಶಾಂತ ಮತ್ತು ಸಹಜ ಪರಿಸ್ಥಿತಿ ಇರಬೇಕೆಂದು ಬಯಸುತ್ತಾರೆ. ನಿರಂತರವಾಗಿ ಗಲಭೆ, ಹಿಂಸಾಚಾರ, ನಿಷೇಧಾಜ್ಞೆ , ಕರ್ಫ್ಯೂ ಇರುವ ಪ್ರದೇಶದಲ್ಲಿ ಹೂಡಿಕೆ ಮಾಡಲು ಯಾರೂ ಇಷ್ಟ ಪಡುವುದಿಲ್ಲ. ಹೀಗಾಗಿ ಇಂಥ ಪ್ರದೇಶಗಳು ಕ್ರಮೇಣ ಹಿಂದುಳಿಯುತ್ತ ಹೋಗುತ್ತವೆ. ನಂಬಿಕೆ, ಸಮಾಧಾನಕ್ಕೆ ದೇವರು, ಧರ್ಮ ಬೇಕು, ಆದರೆ ಬದುಕಲು ಶಿಕ್ಷಣ, ಅಕ್ಷರ, ಆರೋಗ್ಯ, ವ್ಯಾಪಾರ, ಕಾರ್ಖಾನೆ ಬೇಕು. ಇಂಥ ಅರಿವು ಮೂಡದಿದ್ದರೆ ಯಾರಿಗೂ ನೆಮ್ಮದಿ ಉಳಿಯುವುದಿಲ್ಲ.
ಕೆಲವರು ಭಯ ಸೃಷ್ಟಿಗಾಗಿ ಹೇಳುವಂತೆ ಈ ಭಾರತದಲ್ಲಿ ಯಾವ ಧರ್ಮವೂ ಅಪಾಯದಲ್ಲಿ ಇಲ್ಲ. ಆದರೆ ಎಲ್ಲ ಧರ್ಮಗಳಿಗೆ ಸೇರಿದವರು ಅಥವಾ ಯಾವುದೇ ನಂಬಿಕೆ ಇರದಿದ್ದವರ ಬದುಕು ತೊಂದರೆಯಲ್ಲಿದೆ. ಬಡತನ, ನಿರುದ್ಯೋಗ, ಅಸಮಾನತೆ, ಅಪೌಷ್ಟಿಕತೆ, ಹೆಣ್ಣು ಮಕ್ಕಳ ಸುರಕ್ಷತೆ , ಸಣ್ಣಪುಟ್ಟ ಮಕ್ಕಳ ಆರೋಗ್ಯ ಸಮಸ್ಯೆ, ದುಬಾರಿ ಯಾದ ಶಿಕ್ಷಣ ಮತ್ತು ವೈದ್ಯಕೀಯ ಖರ್ಚುವೆಚ್ಚಗಳು ಇಂಥ ಹಲವಾರು ಸಮಸ್ಯೆಗಳು ಎಲ್ಲರನ್ನೂ ಸಂಕಷ್ಟಕ್ಕೆ
ನೂಕಿವೆ. ಸರಕಾರಿ ಆಸ್ಪತ್ರೆಗಳು ಇರಬೇಕಾದ ಕಡೆ ಅತ್ಯಂತ ದುಬಾರಿಯಾದ ಖಾಸಗಿ ಆಸ್ಪತ್ರೆಗಳು ಬರುತ್ತಿವೆ. ಇವುಗಳಿಗಾಗಿ ನಾವು ಧ್ವನಿಯೆತ್ತಬೇಕಾಗಿದೆ. ಜನಸಾಮಾನ್ಯರು ಇಂಥ ಜ್ವಲಂತ ಸಮಸ್ಯೆಗಳಿಗಾಗಿ ಧ್ವನಿಯೆತ್ತಬಾರದೆಂದು, ಹೋರಾಡಬಾರದೆಂದು ಧರ್ಮ ಅಪಾಯದಲ್ಲಿ ಇದೆ ಎಂಬು ಸುಳ್ಳು ಕತೆಗಳನ್ನು ಸೃಷ್ಟಿಸಿ ಅಮಾಯಕ ಜನರನ್ನು ದಾರಿ ತಪ್ಪಿಸಲಾಗುತ್ತಿದೆ.
ನಾನು ಅವಿಭಜಿತ ಬಿಜಾಪುರ ಜಿಲ್ಲೆಯಿಂದ ಬಂದವನು. ಆಗ ಬಾಗಲಕೋಟೆ ಬಿಜಾಪುರ ಜಿಲ್ಲೆಯಲ್ಲೇ ಇತ್ತು. ಈಗ ಎರಡು ಜಿಲ್ಲೆಯಾಗಿ ನನ್ನ ಊರು ಜಮಖಂಡಿ ತಾಲೂಕಿನ ಸಾವಳಗಿ ಬಾಗಲಕೋಟ ಜಿಲ್ಲೆಗೆ ಹೋಗಿದೆ. ನನಗೆ ಎರಡು ಊರುಗಳಿವೆ.ಒಂದು ಜನಿಸಿದ ಊರು ಸಾವಳಗಿಯಾದರೆ ಬೆಳೆದ ಊರು ಬಸವನ ಬಾಗೇವಾಡಿ. ಹೀಗಾಗಿ ನಾನು ನನ್ನ ಜಿಲ್ಲೆ ಬಿಜಾಪುರ ಎಂದೇ ಈಗಲೂ ಹೇಳುತ್ತೇನೆ. ಬಾಗಲಕೋಟೆ ಜೊತೆಗೆ ನನ್ನ ಒಡನಾಟ ಹಳೆಯದು. ಅದು ಈಗಲ್ಲ ಅರುವತ್ತರ ದಶಕದಿಂದ ಕೋಮು ಗಲಭೆಯ ಸೂಕ್ಷ್ಮ ಪ್ರದೇಶ. ಪ್ರತೀ ವರ್ಷ ಆರೆಸ್ಸೆಸ್ ಪಥ ಸಂಚಲನ ಮಸೀದಿ ಮುಂದೆ ಹೋಗುವುದು, ಗಲಾಟೆಯಾಗುವುದು ಅಲ್ಲಿ ಸಾಮಾನ್ಯ. ಅಲ್ಲಿ 1972ರಲ್ಲಿ ಎನ್.ಕೆ.ಉಪಾಧ್ಯಾಯರು ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಅಲ್ಲಿ ನಾನು ಅವರ ಪ್ರಚಾರಕ್ಕಾಗಿ ಒಂದು ತಿಂಗಳು ಇದ್ದೆ.ಆಗ ನನಗೆ ಹದಿನೆಂಟರ ಪ್ರಾಯ, ಉಪಾಧ್ಯಾಯರ ಚುನಾವಣಾ ಪ್ರಚಾರಕ್ಕೆ ಹಿರಿಯ ಕಮ್ಯುನಿಸ್ಟ್ ನಾಯಕರಾದ ಇ.ಎಂ.ಎಸ್. ನಂಬೂದಿರಿಪಾಡ್ ಮತ್ತು ಪಿ.ರಾಮಮೂರ್ತಿ ಬಂದಿದ್ದರು. ನಮ್ಮ ಪ್ರತೀ ಚುನಾವಣಾ ಪ್ರಚಾರ ಸಭೆಯಲ್ಲಿ ಸಂಘಿಗಳು ಬಂದು ಗಲಾಟೆ ಮಾಡುತ್ತಿದ್ದರು. ಒಮ್ಮೆ ಕಲಬುರಗಿಯ ಕಮ್ಯುನಿಸ್ಟ್ ನಾಯಕ ಗಂಗಾಧರ ನಮೋಶಿ ಅವರು ಬಹಿರಂಗ ಸಭೆಯಲ್ಲಿ ಆರೆಸ್ಸೆಸ್, ಜನಸಂಘವನ್ನು ಟೀಕಿಸಿದಾಗ ದೊಡ್ಡ ಕೋಲಾಹಲವೇ ನಡೆಯಿತು.ನಮೋಶಿಯವರು ಸುಲಭಕ್ಕೆ ಮಣಿಯುವ ಆಸಾಮಿಯಲ್ಲ. ಅವರಿಗೆ ಮೈ ಮುಟ್ಟಿ ನೋಡಿಕೊಳ್ಳುವಂತೆ ಜಾಡಿಸಿದರು. ಆಗ ಬಿಜೆಪಿ ಇರಲಿಲ್ಲ. ಜನಸಂಘ ಇತ್ತು. ಆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಠೇವಣಿ ಕಳೆದುಕೊಂಡ. ಉಪಾಧ್ಯಾಯರಿಗೂ ಜಾಸ್ತಿ ಮತ ಬರಲಿಲ್ಲ. ನಂತರ ಜನಸಂಘ ಬಿಜೆಪಿಯಾಗಿ ಬೆಳೆದಿದ್ದು ಜೆ.ಪಿ.ಚಳವಳಿಯ ಕೃಪೆಯಿಂದ. ಸುಮ್ಮನೆ ಹಳೆಯದೆಲ್ಲ ನೆನಪಾಗಿ ಬರೆದೆ.
ಬಾಗಲಕೋಟೆಯ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿ ಯಾರೇ ತಪ್ಪಿತಸ್ಥರಾಗಿರಲಿ ಅವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಲು ಯಾರ ಅಭ್ಯಂತರವೂ ಇಲ್ಲ. ಕಾಂಗ್ರೆಸ್ ಶಾಸಕ ಮೇಟಿಯವರ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಘಟನೆ ವಿಶೇಷ ಮಹತ್ವ ಪಡೆದಿದೆ. ಇದರ ಫಲಾನುಭವಿಗಳಾರು ಎಂಬುದು ಚುನಾವಣಾ ಫಲಿತಾಂಶದ ನಂತರ ಗೊತ್ತಾಗುತ್ತದೆ. ಈಗಿನ ಪ್ರಕ್ಷುಬ್ಧ ವಾತಾವರಣ ಮತ್ತು ಕೋಮು ವಿಭಜನೆ ಚುನಾವಣೆ ಮುಗಿಯುವವರೆಗೆ ಮುಂದುವರಿದರೆ ಅಚ್ಚರಿ ಪಡಬೇಕಾಗಿಲ್ಲ.ಇಂಥ ಸಂದರ್ಭವನ್ನು ಎದುರಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ.ಚುನಾವಣೆಯಲ್ಲಿ ಚರ್ಚೆಗೆ ಬರಬೇಕಾದ ಮುಳುಗಡೆ ಸಂತ್ರಸ್ತರ ಸಮಸ್ಯೆ ಮುಂತಾದ ವಿಷಯಗಳು ಮರೆಗೆ ಸರಿದಿವೆ. ನಡೆಯಬಾರದ ಆದರೆ ನಡೆದ ಒಂದು ಅಹಿತಕರ, ಅಪ್ರಿಯಕರ ಘಟನೆಯ ಸುತ್ತ ವಾತಾವರಣ ಸಷ್ಟಿಸಿ ಗೆಲುವು ಸಾಧಿಸಲು ಯಾರು ಯತ್ನಿಸುತ್ತಾರೆ ಎಂಬುದರ ಬಗ್ಗೆ ವಿವರಿಸಬೇಕಾಗಿಲ್ಲ.
ಕಳೆದ ಒಂದು ದಶಕದ ಕಾಲಾವಧಿಯಲ್ಲಿ ದೇಶದ ರಾಜಕೀಯ ಚಿತ್ರ ಸಂಪೂರ್ಣ ಬದಲಾಗಿದೆ. ಪ್ರಜಾಪ್ರಭುತ್ವದ ಮೂಲಕ ಅಧಿಕಾರಕ್ಕೆ ಬಂದ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ಜನ ಬೆಂಬಲ ಕಡಿಮೆಯಾಗುತ್ತಿದ್ದಂತೆ ಎಸ್.
ಐ.ಆರ್. ನಂಥ ಹೊಸ ಅಸ್ತ್ರ ಪ್ರಯೋಗಿಸಿ ಮತದಾರರ ಪಟ್ಟಿಗೆ ಶಸ್ತ್ರ ಚಿಕಿತ್ಸೆ ಮಾಡಲು ಹೊರಟಿದ್ದಾರೆ. ಈ ಜನತಂತ್ರ ವಿರೋಧಿ ಹುನ್ನಾರವನ್ನು ವಿರೋಧಿಸುವವರೇ ಇಲ್ಲದಂತ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಇನ್ನು ಏನೇನು ಕಾದಿದೆಯೋ ಯಾರಿಗೆ ಗೊತ್ತು? ಫ್ಯಾಶಿಸ್ಟ್ ಶಕ್ತಿಗಳು ಅಧಿಕಾರಕ್ಕೆ ಬಂದರೆ ತಾವು ಹತ್ತಿ ಬಂದ ಏಣಿಯನ್ನೇ ಹೇಗೆ ಒದ್ದು ಕೆಡವುತ್ತಾರೆ ಎಂಬುದಕ್ಕೆ ಇತಿಹಾಸದಲ್ಲಿ ಜರ್ಮನಿ ಮತ್ತು ಇಟಲಿಯಂಥ ಉದಾಹರಣೆಗಳಿವೆ.ಈ ಹಿನ್ನೆಲೆಯಲ್ಲಿ ಭಾರತದ ಸಂಸದೀಯ ಪ್ರಜಾಪ್ರಭುತ್ವ ಅಪಾಯದಲ್ಲಿ ಇರುವುದು ಉತ್ಪ್ರೇಕ್ಷೆಯಲ್ಲ.
ಕಲ್ಯಾಣ ಕ್ರಾಂತಿಯ ನಂತರ ಬಸವಣ್ಣನವರು ದುರಂತ ಅಂತ್ಯ ಕಂಡ ಕೂಡಲ ಸಂಗಮ ಮತ್ತು ಪ್ರತೀ ಸಮರದಲ್ಲಿ ವಿಜಯದ ದುಂದುಂಬಿ ಮೊಳಗಿಸಿದ ಚಾಲುಕ್ಯರ ಎರಡನೇ ಪುಲಕೇಶಿ ಆಳಿದ ಬಾದಾಮಿ, ಐಹೊಳೆಗಳನ್ನು ಒಡಲಲ್ಲಿ ಇಟ್ಟು ಕೊಂಡ ಬಾಗಲಕೋಟೆ ಜಿಲ್ಲೆ ಈಗ ನಡೆಯಬಾರದ ಘಟನೆ ನಡೆದು ಪಡೆಯಬಾರದ ಕೆಟ್ಟ ಹೆಸರನ್ನು ಪಡೆದು ಗಮನ ಸೆಳೆದಿದೆ ಎಂಬುದು ವಿಷಾದಕರ ಸಂಗತಿಯಾಗಿದೆ.