ಜೀವದೊಲವಿನ ಅಮ್ಮ ಎಂಬ ಕಡಲು..
ಪ್ರಸ್ತುತ ಕಾಲಘಟ್ಟದ ಬದುಕು ತೀರ ಸ್ವಾರ್ಥದತ್ತ ಕೇಂದ್ರೀಕೃತವಾಗಿದೆ. ಆಧುನಿಕತೆ, ನಾಗರಿಕತೆ ನೆಪದಲ್ಲಿ ಬದುಕಿಗೆ ಸಂಗತವಲ್ಲದ, ಸಮ್ಮತವಲ್ಲದ ಅದೆಷ್ಟೋ ಸಂಗತಿಗಳು ತೀರ ಸಹಜವೆನ್ನುವಂತೆ ಬಿಂಬಿಸಲ್ಪಡುತ್ತಿವೆ. ಕೋಮುದ್ವೇಷ ಎಲ್ಲದರ ಮೇಲೂ ತನ್ನದೇ ಪ್ರಭುತ್ವ ಸ್ಥಾಪಿಸಬೇಕೆನ್ನುವ ರೂಕ್ಷತೆ ನಿರ್ಲಜ್ಜವಾಗುತ್ತಿದೆ. ಮನುಷ್ಯನ ತೆವಲುಗಳ ತೇಲುವಿಕೆಯ ಋಜುಮಾರ್ಗಗಳ ನಡುವೆ ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಒಂದು ಸಾಹಸವೇ ಸರಿ.
ತಾನು ನೆಚ್ಚಿದ ಲಹರಿಗಳನ್ನು ಬೆಂಬತ್ತಿದರೂ ಭಾವುಕತೆಗೆ ಒಳಗಾಗದೆ ಸಾರ್ವಜನಿಕ ಬದುಕಿನಲ್ಲಿ ಸಮಾಜಮುಖಿ ಆಲೋಚನೆಗಳನ್ನು ಗಟ್ಟಿ ಯಾಗಿ ಗರಿಗೆದರುವಂತೆ ಮಾಡಿ, ಅವೆಲ್ಲವುಗಳನ್ನು ಸಾಧ್ಯವಾದಷ್ಟು ಜಗತ್ತಿಗೆ ಧಾರೆಯೆರೆದರೆ ಒಂದಷ್ಟಾದರೂ ಪರಿವರ್ತನೆಯನ್ನು ಖಂಡಿತ ವಾಗಿ ತರಬಲ್ಲದು ಎನ್ನುವುದು ಒಪ್ಪಿತ ಸಂಗತಿ. ಇಂಥದೊಂದು ಹಾದಿಯಲ್ಲಿ ಹಸನ್ ಡೋಂಗ್ರಿ ಬೇಪಾರಿಯವರ ‘ಅಮ್ಮ ಎಂಬ ಕಡಲು’ ಕಥಾಸಂಕಲನ ಗಮನಸೆಳೆಯುತ್ತದೆ.
ಬದುಕಿನ ಹತ್ತು ಹಲವು ಸಮಸ್ಯೆಗಳು, ದುಡಿದುಂಡು ಬದುಕುವ ಕೆಳಸ್ತರದವರ ನೋವು-ಆತಂಕ, ಮನುಷ್ಯರ ಗೋಸುಂಬೆ ಪ್ರವೃತ್ತಿ, ರಾಜಕೀಯ ನಾಯಕರ ಅಸಡ್ಡಾಳತನ, ಜಾತಿ ಮೇಲಾಟಗಳ ಅಬ್ಬರ, ಮತ ಪಂಥಗಳ ಪರಿಧಿಯಲ್ಲಿಯೇ ಗಿರಕಿ ಹಾಕುವ ಪಟ್ಟಭದ್ರ ಹಿತಾಸಕ್ತಿಗಳು ಸೇರಿದಂತೆ ಇಂದಿನ ಹತ್ತು ಹಲವು ಸಮಸ್ಯೆಗಳ ಕುರಿತು ಇಲ್ಲಿನ ಕಥೆಗಳು ಮಾತನಾಡುತ್ತವೆ. ಆದರ್ಶ, ಅಕ್ಷರಗಳ ಅಗತ್ಯ, ಧರ್ಮಗಳ ಹಂಗಿಲ್ಲದೆ ಚಿಗುರೊಡೆಯುವ ಪ್ರೀತಿ, ತಾಯಿಯ ಅನನ್ಯ ಪ್ರೀತಿ, ಯುವಜನತೆಯನ್ನು ತನ್ನ ಕಪಿಮುಷ್ಟಿಯಲ್ಲಿ ಬೇರೆ ಬೇರೆ ರೂಪಗಳಲ್ಲಿ ಬಂಧಿಸಿ ಬದುಕನ್ನು ಬರಡಾಗಿಸುತ್ತಿರುವ ಬೆಟ್ಟಿಂಗ್ ರೀತಿಯ ಕಥಾವಸ್ತುಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಅತ್ಯಂತ ಸುಲಲಿತವಾಗಿ ಕಥೆಗಾರ ನಿಭಾಯಿಸುತ್ತಾರೆ.
ತನ್ನೆಲ್ಲ ಬದುಕನ್ನು ತೇಯ್ದು ಮಕ್ಕಳಿಗೆ ಬದುಕನ್ನು ಕಟ್ಟಿಕೊಡುವ ಅಮ್ಮ ಈ ಭುವಿಯ ದೇವತೆಯೇ ಸರಿ. ಅವಳು ಅದಕ್ಕೂ ಒಂದು ಹೆಜ್ಜೆ ಮುಂದು ಹೋಗಿ ತನ್ನ ಸಾವು ಕೂಡ ಮಗನ ಮನಸ್ಸನ್ನು ಕಂಗೆಡಿಸಬಾರದು. ಅವನು ಸದಾ ಸಂತಸದಿಂದ ನೆಮ್ಮದಿಯಿಂದಲೇ ಇರಬೇಕು ಎನ್ನುವ ಅವಳ ಕರುಳಿನ ಕೂಗನ್ನು ಕಥಾ ಸಂಕಲನದ ಶಿರ್ಷಿಕೆಯ ‘ಅಮ್ಮ’ ಎಂಬ ಕಡಲು ಕಥೆ ಮಾರ್ದನಿಸುತ್ತದೆ. ಅಮ್ಮನ ಸಾರ್ವಕಾಲಿಕ ಮೌಲ್ಯವನ್ನು ಸಾರುತ್ತದೆ. ಧಾರ್ಮಿಕ ನಂಬಿಕೆಗಳನ್ನು ತಮ್ಮ ರಾಜಕೀಯ ಬಂಡವಾಳಗಳನ್ನಾಗಿಸಿಕೊಂಡು, ಯಾವುದೇ ಎಗ್ಗಿಲ್ಲದಂತೆ ಬಳಸಿಕೊಳ್ಳುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವುದು ದುರಂತವೇ ಸರಿ. ಮನಸ್ಸುಗಳ ವ್ಯಾಧಿಗೆ ಕಡಿವಾಣ ಹಾಕುವ, ಒಂದಷ್ಟು ಸಿಡಿದು ನಿಂತು ಅವುಗಳ ಹಿಂದಿರುವ ಸದಾಶಯಗಳನ್ನು ಮುನ್ನೆಲೆಗೆ ತಂದು ಸಮಾಜದಲ್ಲಿ ಸ್ವಾಸ್ಥ್ಯ ಭಾವಗಳನ್ನು ಬಿತ್ತುವ ಸದಾಶಯಗಳನ್ನು ‘ಪರಿವರ್ತನೆ’ ಕಥೆ ಮನಸ್ಸುಗಳ ನಡುವಿನ ಕಂದಕಗಳನ್ನು ಕಿರಿದುಗೊಳಿಸುವ ಪ್ರಯತ್ನದಲ್ಲಿ ಸಾಗುತ್ತದೆ. ಅಕ್ಷರದ ಬೆಳಕಿನಲ್ಲಿ ತಮಂಧವನ್ನು ಕಳೆದು ಬದುಕನ್ನು ಅರಳಿಸಿ ಅದನ್ನು ಬೆಳಕಿನ ಹಾದಿಯಲ್ಲಿ ಮುನ್ನಡೆಸುವ ‘ಬೆಳಕಿನ ಹಾದಿ’ ಕಥೆ ಶಿಕ್ಷಣದ ಮಹತ್ವವನ್ನು ಬಿತ್ತರಿಸುತ್ತದೆ. ನಿಲುಕದ ನಕ್ಷತ್ರದಂತೆ ತೋರುವ ಉನ್ನತ ಶಿಕ್ಷಣವನ್ನು ಎಲ್ಲರಿಗೂ ಆಗು ಮಾಡುವ ಗೆಳೆಯರ ಪ್ರಯತ್ನ ಶ್ಲಾಘನೀಯವೆನಿಸುತ್ತದೆ.
ಇನ್ನುಳಿದ ಸ್ವಾಭಿಮಾನಿ, ಗೆಲುವಿನ ಹೆಜ್ಜೆ, ಪ್ರೀತಿ ಯೆಂಬುದು, ಸೇರಿದಂತೆ ಇತರ ಕಥೆಗಳೆಲ್ಲವೂ ಒಂದೇ ಭಿತ್ತಿಯಿಂದ ಹೊರಹೊಮ್ಮಿದ ಹಲವು ಚಿತ್ರಗಳಂತೆ ತೋರುತ್ತವೆ. ಕಥನ ಕಟ್ಟುವಿಕೆಯ ಕೊಂಚ ಕೊರತೆಯ ನಡುವೆಯೂ ತಮಗನಿಸಿದ್ದನ್ನು ನೇರ ವಾಗಿ ನಿರೂಪಿಸುವ ಕೌಶಲ್ಯವನ್ನು ಹಸನ್ ಡೋಂಗ್ರಿ ಸಿದ್ಧಿಸಿಕೊಂಡಿರುವುದು ಗಮನಾರ್ಹ. ಚಮತ್ಕಾರಗಳ ಬೆನ್ನತ್ತದೆ, ಅಬ್ಬರ ಆಡಂಬರಗಳಿಂದ ಭಾರವಾಗದಂತೆ ಸಹಜವಾಗಿ ಕಥೆ ಕಟ್ಟಿಕೊಟ್ಟಿರುವುದು ಬೆಳೆಯಬೇಕಾದ ಒಬ್ಬ ಕಥೆಗಾರನಿಗಿರಬೇಕಾದ ಮೊದಲ ಅಗತ್ಯ. ಇದನ್ನು ಈ ಕತೆಗಾರ ರೂಢಿಸಿಕೊಂಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಇಲ್ಲಿಯ ಬಹುತೇಕ ಕಥೆಗಳು ವಾಸ್ತವದ ಹುಳುಕುಗಳನ್ನು ತೆರೆದು ತೋರುವ ಕನ್ನಡಿಗಳಂತಿವೆ. ನಮ್ಮ ಮಾನವೀಯ ಸಮಾಜದ ಕ್ರೌರ್ಯಗಳನ್ನು ತಣ್ಣಗೆ ಬದಲಾಯಿಸುವ ಕಾರ್ಯಕ್ಕೆ ಕೈ ಜೋಡಿಸುತ್ತವೆ. ಬಹುಕಾಲ ಬದುಕಬಲ್ಲ ಬಹುತ್ವದ ತತ್ವಗಳನ್ನು ಗಟ್ಟಿಯಾಗಿ ಪ್ರಸ್ತಾಪಿಸುತ್ತವೆ. ಲೋಕದ ಜೀವಪ್ರೀತಿಯನ್ನು ಕಷ್ಟಕ್ಕೀಡುಮಾಡುವ, ಮನುಷ್ಯ ಸಂಬಂಧಗಳನ್ನು ಛಿದ್ರಗೊಳಿಸುವುದರ ವಿರುದ್ಧದ ನೆಲೆಯಲ್ಲಿ ಮೆಲ್ಲನೆ ದನಿಗೂಡಿಸುತ್ತವೆ. ಅತ್ಯಂತ ಸಾವಧಾನದಿಂದ ನೊಂದ ಮನಸ್ಸುಗಳನ್ನು ಬೆನ್ನು ತಟ್ಟಿ, ಕೈ ಹಿಡಿದು ಮುನ್ನಡೆಸುತ್ತವೆ. ಜೀವದೊಲವಿನ ನಿರಾಳ ಬದುಕಿಗಾಗಿ ಹಂಬಲಿಸುತ್ತವೆ. ಮನುಷ್ಯ ಸಂಬಂಧಗಳನ್ನು ನವಿರಾಗಿ ವಿಶ್ಲೇಷಿಸುವ, ಜೀವನರ್ಥವನ್ನು ಪರಿಶೋಧಿಸುವ ಹಾದಿಯಲ್ಲಿ ತಹತಹಿಸುತ್ತವೆ. ಲೇಖಕ ಹಸನ್ ಡೋಂಗ್ರಿ ಬೇಪಾರಿ ಅವರ ನೋಟ, ನಿಲುವುಗಳು, ಗುರಿಗಳು ಬದುಕನ್ನು ಘನವಾಗಿಸುವ ಕನಸುಗಳಿಗಾಗಿ ಕನವರಿಸುತ್ತಿ ರುವುದನ್ನು ನಾನು ಸ್ವಾಗತಿಸುತ್ತೇನೆ.