ಅಂತರಾಳದ ಭಾವ ಸ್ಪರ್ಶ ‘ಹೆಗಲು’
ಪರಸ್ಪರ ಅವಲಂಬನೆ ಮಾನವ ಸಮಾಜವನ್ನು ಗಟ್ಟಿಯಾಗಿ ಹಿಡಿದಿಡುವ ಒಂದು ಜೀವನಾನುಭವದ ಕಲ್ಪನೆ. ಬಹುಶಃ ಈ ಕಲ್ಪನೆ ಇಲ್ಲದೆ ಹೋಗಿದ್ದರೆ ನಮ್ಮ ಸಮಾಜದ ನಾಗರಿಕತೆಯಲ್ಲಿ ಮುಂದಡಿಯಿಡಲು ಸಾಧ್ಯವೇ ಆಗುತ್ತಿರಲಿಲ್ಲ. ಅಸಹಾಯಕರಿಗೆ ನೆರವಾಗುವುದು, ಅಭಾಗ್ಯರಿಗೆ ಹೆಗಲು ನೀಡುವುದು, ಅಬಲೆಯರಿಗೆ ಆಸರೆಯಾಗುವುದು ಹೀಗೆ ಹಲವು ವಿಧಾನಗಳಲ್ಲಿ ಮಾನವ ಸಮಾಜ ಸಹಕಾರ ತತ್ವವನ್ನು ಸ್ವಾಭಾವಿಕವಾಗಿ ತನ್ನದಾಗಿಸಿಕೊಂಡಿದೆ. ಈ ಔದಾತ್ಯವನ್ನು ವ್ಯಕ್ತಿಗತ ಬದುಕಿನಲ್ಲಿ ಆಂತರಿಕೀಕರಣಗೊಳಿಸಿ ಕೊಂಡು ತಮ್ಮ ಹೆಗಲನ್ನು ಮತ್ತೊಬ್ಬರ ಜೀವನ ಪಯಣಕ್ಕೆ ನೊಗವಾಗಿಸುವ ಪ್ರಸಂಗಗಳು ಅಪರೂಪ. ಅಂತಹ ಒಂದು ಹೃದಯಸ್ಪರ್ಶಿ ಪಯಣಗಾಥೆಯನ್ನು ಭಾರತಿ ಹೆಗಡೆ ತಮ್ಮ ‘ಹೆಗಲು’ ಕೃತಿಯ ಮೂಲಕ ಓದುಗರ ಮುಂದಿಡುತ್ತಾರೆ.
ಸಾಧಕರನ್ನು ಗುರುತಿಸಿ ಸಮ್ಮಾನಿಸುವ ಪ್ರಚಲಿತ ಪರಂಪರೆಯಲ್ಲಿ ಮೇರು ಸಾಧಕರಾಗಿ ಕಾಣಬಹುದಾದ ಒಬ್ಬ ಸಂವೇದನಾಶೀಲ ವ್ಯಕ್ತಿ ಎಂದರೆ ಟಿ.ಕೆ. ಲಕ್ಷ್ಮಿನರಸಿಂಹಯ್ಯ ಶೆಟ್ಟಿ ಆಪ್ತ ಹೆಸರಾಗಿ ನರಸಿಂಹ. ಸಾಧನೆ ಮಾಡುವುದು ವ್ಯಕ್ತಿಗತ ಮತ್ತು ವೈಯಕ್ತಿಕ ಆದರೆ ಆ ಸಾಧನೆಯ ಮೆಟ್ಟಿಲುಗಳನ್ನೇರಲು ಹೆಗಲು ನೀಡುವುದು ವೈಯಕ್ತಿಕವನ್ನು ಮೀರಿದ ಒಂದು ಔದಾತ್ಯ. ಶಿಕ್ಷಣ ತಜ್ಞರಾಗಿ ಸಾವಿರಾರು ಶಿಕ್ಷಣಾರ್ಥಿಗಳಿಗೆ ಬದುಕುವ ದಾರಿ ಕಲ್ಪಿಸಿದ ಎಂ.ಕೆ. ಶ್ರೀಧರ್, ತಮ್ಮ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡು ವೀಲ್‌ಚೇರ್ ಆಸರೆ ಪಡೆದು ಮೇರು ಶಿಖರಗಳನ್ನು ಮುಟ್ಟಿದ ಓರ್ವ ಮೇಧಾವಿಗಳು. ತಮ್ಮ ವೈಕಲ್ಯವನ್ನು ಆತ್ಮಶಕ್ತಿಯನ್ನಾಗಿ ಅಂತರ್ಗತ ಗೊಳಿಸಿಕೊಂಡು ಎತ್ತರೆತ್ತರಕ್ಕೆ ಏರಿದ ಶ್ರೀಧರ್ ಮಾಸ್ತರರಿಗೆ ಪ್ರತೀ ಹೆಜ್ಜೆಯಲ್ಲೂ ಭೌತಿಕವಾಗಿಯೇ ಹೆಗಲು ನೀಡಿದ ನರಸಿಂಹ ಅವರನ್ನು ಹೇಗೆ ಬಣ್ಣಿಸುವುದು?
ಜಗತ್ತಿನ ಅತ್ಯಂತ ಶ್ರೇಷ್ಠ ತತ್ವಜ್ಞಾನಿ ಎಂದರೆ ಬದುಕು ಎನ್ನಲಾಗುತ್ತದೆ. ನರಸಿಂಹ ಅವರ ಬಾಲ್ಯದ ಸಂಕಟಗಳು, ಕಷ್ಟ ಕಾರ್ಪಣ್ಯಗಳನ್ನು ಭಾರತಿ ಹೆಗಡೆಯವರು ಎದೆಕಲಕುವ ಭಾಷೆಯಲ್ಲಿ ಪರಿಚಯಿಸುತ್ತಾರೆ (ಬದುಕು ಕಲಿಸಿದ ಕುರ್ಚಿ). ಬಾಲ್ಯದ ಹಸಿವು ಮತ್ತು ಬಡತನ ವ್ಯಕ್ತಿಯೊಳಗಿನ ಮನುಜ ಸಂವೇದನೆಯನ್ನು ಕಾಪಿಡುವ ಲಾಕರ್‌ಗಳಂತೆ. ನರಸಿಂಹ ಅವರು ಈ ಲಾಕರ್ ತೆರೆಯಲು ಸಾಧ್ಯವಾದ ಹೊತ್ತಿಗೆ ಕಂಡಿದ್ದು ವೀಲ್ ಚೇರ್‌ನಲ್ಲೇ ಕುಳಿತು ನೂರಾರು ಶಿಕ್ಷಣಾರ್ಥಿಗಳ ಬದುಕು ಕಟ್ಟಿಕೊಡುತ್ತಿದ್ದ ಎಂ.ಕೆ. ಶ್ರೀಧರ್ ಅವರನ್ನು. ಶ್ರೀಧರ್ ಅವರ ಬಾಳ ಬಂಡಿ ಸಾಗಬೇಕಾದರೆ ಅವರು ಕುಳಿತ ವೀಲ್‌ಚೇರ್ ಅಷ್ಟದಿಕ್ಕುಗಳಿಗೂ ಚಲಿಸಬೇಕು. ಈ ಚಲನೆಯನ್ನು ಹೆಗಲೇರಿಸಿಕೊಂಡಿದ್ದು ನರಸಿಂಹ ಎಂಬ ಹನುಮಸಾಹಸ ವಿಜಯಿ.
ಎಂ.ಕೆ. ಶ್ರೀಧರ್ ಅವರಿಗೆ ಅಗತ್ಯವಿದ್ದುದು ತಮ್ಮ ಅಧ್ಯಾಪಕ ವೃತ್ತಿಗೆ ಚ್ಯುತಿ ಬಾರದಂತೆ ಚಲನೆಗೆ ಉಸಿರು ತುಂಬುವ ಒಬ್ಬ ಸಹಾಯಕ. ನರಸಿಂಹ ಅವರಿಗೆ ಅನಿವಾರ್ಯವಾಗಿದ್ದುದು ಬದುಕು ಕಟ್ಟಿಕೊಳ್ಳುವ ನೌಕರಿ. ‘ಹೆಗಲು’ ಪುಸ್ತಕವನ್ನು ಓದುತ್ತಾ ಹೋದರೆ ಇವರಿಬ್ಬರ ಮೊದಲ ಭೇಟಿ ಮತ್ತು ತದನಂತರದ ಜೀವನದ ಹಾದಿ ಈ ಎರಡೂ ಅಗತ್ಯತೆಗಳನ್ನು ಗೌಣವಾಗಿಸಿದಂತೆ ಕಾಣುತ್ತದೆ. ಏಕೆಂದರೆ ಶ್ರೀಧರ್ ಅವರಿಗೆ ದೊರಕಿದ್ದು ‘ಹೆಗಲ ಮೇಲೆ ಹೊತ್ತು ಸಾಗುವ’ ಸಂವೇದನಾಶೀಲ ಗೆಳೆಯ. ನರಸಿಂಹ ಅವರಿಗೆ ಲಭಿಸಿದ್ದು ಅನುಗಾಲದ ಹಿತೈಷಿ, ಮಾರ್ಗದರ್ಶಿ, ಹೆತ್ತೊಡಲ ಪ್ರೀತಿ ವಾತ್ಸಲ್ಯ ಮತ್ತು ಗಾಲಿ ಕುರ್ಚಿಯ ರೂಪದ ಬದುಕಿನ ನಾವೆ.
ಶ್ರೀಧರ್ ಅವರು ಬೋಧಿಸುತ್ತಿದ್ದ ವಿಜಯಾ ಕಾಲೇಜ್‌ಗೆ ಶ್ರೀಧರ್ ಅವರನ್ನು ಕರೆದೊಯ್ಯುತ್ತಿದ್ದ ನರಸಿಂಹ, ಎರಡನೇ-ಮೂರನೇ ಮಹಡಿಗೂ ಸಹ ಅವರನ್ನು ಎತ್ತಿಕೊಂಡು, ಮತ್ತೊಂದು ಬಗಲಲ್ಲಿ ಗಾಲಿಕುರ್ಚಿ ಮಡಚಿಟ್ಟುಕೊಂಡು, ಮೆಟ್ಟಿಲುಗಳನ್ನೇರಿ ಹೋಗುತ್ತಿದ್ದುದು ಸಾಮಾನ್ಯರ ಕಲ್ಪನೆಗೂ ಸಿಗದ ಒಂದು ದೃಶ್ಯ. ಈ ಕ್ರಿಯೆಗೆ ನರಸಿಂಹ ಅವರಲ್ಲಿದ್ದುದು ಕೇವಲ ಭೌತಿಕ ಶಕ್ತಿ ಮಾತ್ರವಲ್ಲ, ಮಾನವ ಪ್ರೀತಿ, ಸಂವೇದನೆ ಮತ್ತು ಸೂಕ್ಷ್ಮ ಸಂಬಂಧಗಳ ಅಗಾಧ ಸಂಪತ್ತು. ‘‘ಸರ್ ಅವರನ್ನು ಪ್ರತಿದಿನ ಕಾಲೇಜಿಗೆ ಬಿಡುವಾಗ ನನಗೆ ಒಳ್ಳೆಯ ಅನುಭವವಾಗುತ್ತಿತ್ತು... ಅದು ನನ್ನ ಅರಿವನ್ನು ವಿಸ್ತರಿಸಿದ ಜಾಗ’’(ಪುಟ 27) ಎಂಬ ನರಸಿಂಹ ಅವರ ಎದೆಯಾಳದ ಮಾತುಗಳು, ಮನುಜ ಸಂಬಂಧಗಳನ್ನು ನಿರ್ವಚಿಸುವ ಬೃಹತ್ ನಿಘಂಟಿನಂತೆ ಕಾಣುತ್ತದೆ.
ಎಂಟು ಚಿಕ್ಕ ಚೊಕ್ಕ ಅಧ್ಯಾಯಗಳಲ್ಲಿ ಭಾರತಿ ಹೆಗಡೆ ಎಲ್ಲಿಯೂ ಉತ್ಪ್ರೇಕ್ಷೆಯಿಲ್ಲದೆ, ಅನುಕಂಪ ಮೂಡಿಸುವ ಮಾತುಗಳಿಲ್ಲದೆ, ಆತ್ಮರತಿಯ ಸೋಂಕಿಲ್ಲದೆ, ಶ್ರೀಧರ್ ಮತ್ತು ನರಸಿಂಹ ಅವರ ಒಡನಾಟ, ಬಾಂಧವ್ಯ ಮತ್ತು ಜೀವನಾನುಭವಗಳನ್ನು ತೆರೆದಿಡುತ್ತಾರೆ. ಭಾರತಿ ಅವರ ಭಾಷಾ ಕೌಶಲ್ಯಕ್ಕೆ ಹ್ಯಾಟ್ಸ್ ಆಫ್. ಮೊದಲ ನಾಲ್ಕು ಅಧ್ಯಾಯಗಳಲ್ಲಿ ಈ ಪಯಣದ ಕಥನವಾದರೆ ಇನ್ನುಳಿದ ನಾಲ್ಕರಲ್ಲಿ ಆತ್ಮೀಯ ಒಡನಾಡಿಗಳ ಅನಿಸಿಕೆಗಳು ಓದುಗರನ್ನು ವಿಸ್ಮಯದ ಲೋಕಕ್ಕೆ ಕೊಂಡೊಯ್ಯುತ್ತದೆ. ‘‘ಎಂ.ಕೆ.ಎಸ್. ಸರ್ (ಶ್ರೀಧರ್) ವಿದ್ಯಾರ್ಥಿಗಳಿಗೆ ಹೇಗೆ ಒಬ್ಬ ಒಳ್ಳೆಯ ಮಾರ್ಗದರ್ಶಕರಾಗಿದ್ದರೋ ನನಗೂ ಸಹ... ಆಗಿದ್ದರು’’ (ಪುಟ 48) ಎಂದು ಹೇಳುವ ಮೂಲಕ ನರಸಿಂಹ ಅವರು ತಮ್ಮೀರ್ವರ ನಡುವಿನ ಆತ್ಮೀಯತೆಗೆ ಹೃದಯವಂತಿಕೆಯ ಸ್ಪರ್ಶ ಕೊಡುತ್ತಾರೆ.
‘ಗಾಲಿ ಕುರ್ಚಿ ಶಿಕ್ಷಣ ತಜ್ಞ’ ಎಂದೇ ಖ್ಯಾತಿ ಪಡೆದಿರುವ ಶ್ರೀಧರ್ ತಮ್ಮ ಶೈಕ್ಷಣಿಕ ವೃತ್ತಿ ಮತ್ತು ಜೀವನಪಯಣದುದ್ದಕ್ಕೂ ನರಸಿಂಹ ಅವರನ್ನು ಹೆಜ್ಜೆ ಹೆಜ್ಜೆಗೂ ಗುರುತಿಸುವುದು ಅವರೊಳಗಿನ ಹೆತ್ತೊಡಲ ವಾತ್ಸಲ್ಯ ಗಣಿಯನ್ನು ಓದುಗರ ಮುಂದಿಡುತ್ತದೆ. ತಮಗೆ ಹೆಗಲಾದ ನರಸಿಂಹರನ್ನು ಶ್ರೀಧರ್ ಅವರು ನೋಡುವ ರೀತಿಯೇ ಮನುಜ ಸಂಬಂಧಗಳ ಸುಂದರ ವ್ಯಾಖ್ಯಾನದಂತೆ ಕಾಣುತ್ತದೆ. ಆಧುನಿಕ ಆವಿಷ್ಕಾರಗಳಿಗೆ ತಕ್ಕಂತೆ ಗಾಲಿ ಕುರ್ಚಿಗಳೂ ಬದಲಾಗುತ್ತಿದ್ದರೂ ಶ್ರೀಧರ್ ಅವರ ಒಳನೋಟದಲ್ಲಿ ನರಸಿಂಹ ಸದಾ ಪಕ್ಕದಲ್ಲೇ ಇರುತ್ತಾರೆ. ‘‘ಬ್ಯಾಟರಿ ಚಾಲಿತ ಕುರ್ಚಿ ಬಂದ ಮೇಲೆ ನನಗೆ ಮೊದಲ ಬಾರಿಗೆ, ನರಸಿಂಹ ಹಿಂದೆ ನಾನು ಮುಂದೆ ಎನ್ನುವುದಕ್ಕಿಂತ...ಜೊತೆಜೊತೆಯಲ್ಲೇ ನಡೆಯುತ್ತಿದ್ದೇವೆ ಎಂಬ ಭಾವ ಸ್ಫುರಿಸಿದೆ’’ (ಪುಟ 80) ಎಂ.ಕೆ. ಶ್ರಿಧರ್ ಅವರ ಈ ಮಾತುಗಳೇ ಇಡೀ ಪುಸ್ತಕದ ಹೂರಣ
‘ಎರಡು ಜೀವಗಳು, ಎರಡು ಜೀವನಗಳು ಆದರೆ ಒಂದೇ ಹೃದಯ’ ಇದು ‘ಹೆಗಲು’ ಕೃತಿಗೆ ಸಲ್ಲಬಹುದಾದ ಅಭಿನಂದನಾರ್ಹ ಅಭಿವ್ಯಕ್ತಿ.
ಈ ಕೃತಿಯ ಮುಖಬೆಲೆ: ರೂ. 180
ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್,
ಯಳಗಲ್ಲು, ಕೋಡೂರು ಅಂಚೆ,
577418 ಹೊಸನಗರ (ತಾ.), ಶಿವಮೊಗ್ಗ ಜಿಲ್ಲೆ ಮೊ:7338437666
(ಲೇಖಕರು: ಹಿರಿಯ ಬರಹಗಾರರು, ಸಾಮಾಜಿಕ ಹೋರಾಟಗಾರರು)