ರಾಯಚೂರು: ಪಿಂಚಣಿ ಮರುಪರಿಶೀಲನಾ ಕಾರ್ಯವನ್ನು ತ್ವರಿತಗೊಳಿಸಲು ಪ್ರತಿಯೊಂದು ಪಂಚಾಯಿತಿ ಮಟ್ಟದಲ್ಲೂ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಬೇಕು ಹಾಗೂ ತಾಲೂಕು ಮತ್ತು ನಾಡ ಕಚೇರಿಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ನೇತೃತ್ವದಲ್ಲಿ ವಿವಿಧ ಗ್ರಾಮಗಳ ವಯೋವೃದ್ಧರು, ವಿಧವೆಯರು ಸೇರಿದಂತೆ ಪಿಂಚಣಿ ಫಲಾನುಭವಿಗಳು ಶನಿವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮ ಅವರು ಫಲಾನುಭವಿಗಳ ಮನವಿ ಸ್ವೀಕರಿಸಿ, ಪ್ರತಿಭಟನಾಕಾರರ ದಾಖಲೆಗಳನ್ನು ಪಡೆದು ಪಿಂಚಣಿ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬುಧವಾರ ಪಿಂಚಣಿ ಅಭಿಯಾನ ನಡೆಸಿ, ಬಾಕಿ ಇರುವ ಫಲಾನುಭವಿಗಳ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಬಳಿಕ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಬಸನಗೌಡ ದದ್ದಲ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆಯನ್ನು ತುರ್ತಾಗಿ ಪರಿಹರಿಸುವಂತೆ ಸೂಚಿಸಿದರು.

ರಾಯಚೂರು ಜಿಲ್ಲಾ ಸಮಿತಿ ಸದಸ್ಯ ವೀರೇಶ್ ಎನ್.ಎಸ್. ಮಾತನಾಡಿ, ಅನರ್ಹರು ಪಿಂಚಣಿ ಪಡೆಯುತ್ತಿದ್ದಾರೆ ಎಂಬ ಕಾರಣ ನೀಡಿ ರಾಜ್ಯ ಸರ್ಕಾರ ಫಲಾನುಭವಿಗಳ ದಾಖಲೆಗಳನ್ನು ಮರುಪರಿಶೀಲನೆ ಮಾಡುತ್ತಿದೆ. ಈ ನೆಪದಲ್ಲಿ ಕಳೆದ ಐದು ತಿಂಗಳಿಂದ ಪಿಂಚಣಿ ಸ್ಥಗಿತಗೊಂಡಿದ್ದು, ಅರ್ಹ ಫಲಾನುಭವಿಗಳೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.

ಕೆಲವು ಗ್ರಾಮಗಳಲ್ಲಿ ಜುಲೈ ತಿಂಗಳೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ತಿಳುವಳಿಕೆ ಪತ್ರ ಹಾಗೂ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲಾಗಿದೆ. ಆದರೆ ವಿದ್ಯಾಭ್ಯಾಸವಿಲ್ಲದ ಗ್ರಾಮೀಣ ಪ್ರದೇಶದ ವೃದ್ಧರಿಗೆ ಈ ಮಾಹಿತಿ ಅರ್ಥವಾಗದೆ ಪಿಂಚಣಿ ಪಡೆಯಲು ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸುಮಾರು 18 ಲಕ್ಷ ಫಲಾನುಭವಿಗಳನ್ನು ಸಂಶಯಾಸ್ಪದ ಎಂದು ಪರಿಗಣಿಸಿರುವ ಸರ್ಕಾರ, ಆಡಳಿತ ವ್ಯವಸ್ಥೆಯಲ್ಲಿನ ಲೋಪ ಅಥವಾ ಅವ್ಯವಹಾರಗಳಿಗೆ ಬಡಜನರನ್ನು ಬಲಿಪಶು ಮಾಡಬಾರದು. ಅರ್ಹ ಎಲ್ಲ ಫಲಾನುಭವಿಗಳಿಗೆ ಯಾವುದೇ ಅಡೆತಡೆಯಿಲ್ಲದೆ ಪಿಂಚಣಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಹೇಶ್ ಚೀಕಲಪರ್ವಿ ಮಾತನಾಡಿ, ಕುಟುಂಬದ ವಾರ್ಷಿಕ ಆದಾಯದ ಮಿತಿಯನ್ನು 32 ಸಾವಿರ ರೂ. ನಿಂದ 1.20 ಲಕ್ಷ ರೂ. ಗೆ ಹೆಚ್ಚಿಸಿರುವುದು ಸ್ವಾಗತಾರ್ಹ. ಆದರೆ ಆದಾಯ ಪ್ರಮಾಣಪತ್ರ ನೀಡಬೇಕಾದ ಕಂದಾಯ ಇಲಾಖೆ ಅಧಿಕಾರಿಗಳು ಎಸ್‌ಐಆರ್ ಪ್ರಕ್ರಿಯೆಯಲ್ಲಿ ತೊಡಗಿರುವುದರಿಂದ ಜನರಿಗೆ ಮತ್ತಷ್ಟು ಸಮಸ್ಯೆಯಾಗುತ್ತಿದೆ ಎಂದರು.

ವಯೋವೃದ್ಧರು ಬೆಳಗಿನ ಜಾವದಿಂದಲೇ ತಾಲೂಕು ಕಚೇರಿಗಳ ಮುಂದೆ ಸರದಿಯಲ್ಲಿ ನಿಂತರೂ ಕೆಲಸವಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರಿಗೆ ಸಿಗಬೇಕಾದ ಸಾಮಾಜಿಕ ಭದ್ರತಾ ಯೋಜನೆಗಳಲ್ಲೂ ಸರ್ಕಾರ ಅನಗತ್ಯ ನಿಯಮಗಳನ್ನು ವಿಧಿಸುತ್ತಿದೆ ಎಂಬ ಅಸಮಾಧಾನ ಜನರಲ್ಲಿ ಮೂಡಿದೆ. ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಗಳನ್ನು ಕಡೆಗಣಿಸುತ್ತಿದೆಯೇ ಎಂಬ ಆತಂಕವೂ ಫಲಾನುಭವಿಗಳನ್ನು ಕಾಡುತ್ತಿದೆ ಎಂದು ಅವರು ಹೇಳಿದರು.

ಚನ್ನಬಸವ ಜಾನೇಕಲ್ ಮಾತನಾಡಿದರು. ಪ್ರತಿಭಟನೆಯಲ್ಲಿ ಅಣ್ಣಪ್ಪ, ಬಸವರಾಜು, ಮಾರೆಪ್ಪ, ರೆಹಾನುದ್ದೀನ್, ಆದೆಪ್ಪ, ವೀರೇಶ್ ಜಕ್ಕಲದಿನ್ನಿ, ಗೌಸ್ ಸೇರಿದಂತೆ ಮಮದಾಪುರ, ಮರ್ಚೆಡ್, ಮಲಿಯಬಾದ್, ತುರ್ಕನದೋಣಿ, ಅನ್ವರ, ಮನ್ಸಲಾಪುರ, ಗೋನವಾರ ಮುಂತಾದ ಗ್ರಾಮಗಳ ನೂರಾರು ಜನ ವೃದ್ಧರು, ವಿಧವೆಯರು, ವಿಶೇಷ ಚೇತನರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor