ದಲಿತರ ದಿಕ್ಕು ತಪ್ಪಿಸಿದ ಛಲವಾದಿ ನಾರಾಯಣ ಸ್ವಾಮಿ ರಾಜೀನಾಮೆ ನೀಡಲಿ: ಎ.ವಸಂತಕುಮಾರ
ರಾಯಚೂರು: ಕಾಂಗ್ರೆಸ್ ಪಕ್ಷ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಹಾಗೂ ಅವರ ಸಮಾದಿಗೆ ದೆಹಲಿಯಲ್ಲಿ ಜಾಗ ನೀಡಿಲ್ಲ ಎಂದು ಅಪಪ್ರಚಾರ ಮಾಡಿದ ಬಿಜೆಪಿ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ನಾಚಿಕೆ, ಮಾನ ಮರ್ಯಾದೆ ಇದ್ದರೆ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನಪರಿಷತ್ ಸದಸ್ಯ ಎ.ವಸಂತಕುಮಾರ ಒತ್ತಾಯಿಸಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿಲ್ಲ ಇದಕ್ಕೆ ಅನೇಕ ದಾಖಲೆಗಳಿವೆ, ಸ್ವತಂ ಡಾ.ಬಿ.ಆರ್ ಅಂಬೇಡ್ಕರ್ ಅವರೇ ತಮ್ಮ ಸ್ನೇಹಿತ ಕಮಲ್ ಕಾಂತ್ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖವಿದೆ. ಅವರ ಸೋಲಿಗೆ ಸಾವರ್ಕರ್ ಹಾಗೂ ಕಮುನಿಸ್ಟ್ ನಾಯಕ ಡಾಂಗೆ ಅವರು ರಚಿಸಿದ ವ್ಯೂಹ, ಕುತಂತ್ರದಿಂದ ಸೋಲಾಗಿದೆ ಎಂದು ಹೇಳಿಕೊಂಡಿದ್ದಾರೆ ಅದರೂ ಛಲವಾದಿ ನಾರಾಯಣ ಸ್ವಾಮಿ ಸತ್ಯವನ್ನು,ಇತಿಹಾಸವನ್ನು ಮರೆಮಾಚಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಅಂಬೇಡ್ಕರ್ ಅವರ ಸಮಾದಿಗೆ ದೆಹಲಿಯಲ್ಲಿ ಜಾಗ ನೀಡಿಲ್ಲ ಎಂದು ಸುಳ್ಳು ಹೇಳುವ ನಾರಾಯಣಸ್ವಾಮಿ ಅವರು ಇತಿಹಾಸ ಅರ್ಥ ಮಾಡಿಕೊಳ್ಳಬೇಕು. ಅಂಬೇಡ್ಕರ್ ಸಾವಿನ ಬಳಿಕ ಅವರ ಕುಟುಂಬ ಸದಸ್ಯರು ಅವರ ಪಾರ್ಥೀವ ಶರೀರ ಮಹಾರಾಷ್ಟ್ರಕ್ಕೆ ಕಳಿಸಬೇಕು ಎಂಬ ಮನವಿಯ ಮೇರೆಗೆ ನೀಡಲಾಗಿತ್ತು, ಇದು ಕಾಂಗ್ರೆಸ್ ಪಕ್ಷ ಅಥವಾ ಸರ್ಕಾರದ ನಿರ್ಣಯವಾಗಿರಲಿಲ್ಲ ಎಂದು ಸ್ಪಷ್ಠಪಡಿಸಿದರು.
ಛಲವಾದಿ ನಾರಾಯಣ ಸ್ವಾಮಿ ಹಾಕಿದ್ದ ಸವಾಲಿಗೆ ಸಚಿವ ಪ್ರಿಯಾಂಕ್ ಖರ್ಗೆ ನಿನ್ನೆ ದಾಖಲೆ ಸಮೇತ ಉತ್ತರ ನೀಡಿದ್ದಾರೆ. ಇತಿಹಾಸ ಮರೆಮಾಚಿ ದೇಶದ ಜನರಿಗೆ, ದಲಿತರಿಗೆ ದಾರಿ ತಪ್ಪಿಸಿದ ಚಲವಾದಿ ನಾರಾಯಣ ಸ್ವಾಮೀ ರಾಜಿನಾಮೆ ನೀಡಲಿ ಎಂದು ಸವಾಲು ಹಾಕಿದರು.
ನಾನೂ ಹಾಗೂ ಛಲವಾದಿ ನಾರಾಯಣ ಸ್ವಾಮಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಆಶ್ರಯದಲ್ಲಿ ಬೆಳೆದಿದ್ದೇವೆ, ಆದರೆ ರಾಜಕೀಯ ಸ್ಥಾನಮಾನದ ಆಸೆಗೆ ಡಾ. ಬಿ.ಆರ್ ಅಂಬೇಡ್ಕರ್ ಅವರ ಸಿದ್ಧಾಂತವನ್ನು ಬಿಟ್ಟಿಲ್ಲ, ಆದರೆ ನಾರಾಯಣಸ್ವಾಮಿ ಅಧಿಕಾರದ ಅಸೆಗೆ ತತ್ವಸಿದ್ಧಾಂತ ಧಿಕ್ಕರಿಸಿ ಬಣ್ಣ ಬದಲಾಯಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಕೆಪಿಸಿಸಿ ರಾಜ್ಯ ವಕ್ತಾರ ಡಾ.ರಝಾಕ ಉಸ್ತಾದ, ಆರ್.ಡಿ.ಎ. ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಅಸ್ಲಂ ಪಾಷಾ, ಅಬ್ದುಲ್ ಕರೀಮ, ಮೊಹಮ್ಮದ ಉಸ್ಮಾನ, ಜಾಹೇದ ಹುಸೇನ ಉಪಸ್ಥಿತರಿದ್ದರು.