ದೇವದುರ್ಗ | ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯ
ದೇವದುರ್ಗ : ಜಾಲಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಆರ್.ಎಸ್. ಹುಲಿಮನಿಗೌಡ ಅವರ ವರ್ತನೆ ಖಂಡಿಸಿ, ಅವರನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಶಾಸಕಿ ಶ್ರೀಮತಿ ಕರಿಯಮ್ಮ ಜಿ. ನಾಯಕ ಅವರಿಗೆ ಮನವಿ ಸಲ್ಲಿಸಿವೆ.
ಮನವಿ ಸಲ್ಲಿಸಿ ಮಾತನಾಡಿದ ಕೃಷಿ ಕೂಲಿಕಾರರ ಸಂಘಟನೆಯ ತಾಲೂಕು ಅಧ್ಯಕ್ಷ ಲಿಂಗಣ್ಣ ನಾಯಕ ಮಕಾಶಿ, “ಡಾ. ಆರ್.ಎಸ್. ಹುಲಿಮನಿಗೌಡ ಅವರು ತಮ್ಮ ಖಾಸಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಮಾತ್ರ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಪಂದಿಸುತ್ತಿದ್ದಾರೆ. ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಬರುವ ಕೆಲ ರೋಗಿಗಳಿಗೆ ಸೌಜನ್ಯದಿಂದ ವರ್ತಿಸದೆ, ‘ನೀವು ಎಲ್ಲಿ ತೋರಿಸಿಕೊಳ್ಳುತ್ತೀರೋ ಅಲ್ಲೇ ಹೋಗಿ’ ಎಂದು ಹೇಳುತ್ತಿದ್ದಾರೆ” ಎಂದು ಆರೋಪಿಸಿದರು.
ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹತ್ತಾರು ಗ್ರಾಮಗಳ ಜನರು ಚಿಕಿತ್ಸೆಗೆ ಬರುತ್ತಾರೆ. ಬಡತನ ರೇಖೆ ಕೆಳಗಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಬರುತ್ತಿದ್ದು, ವೈದ್ಯರು ಎಲ್ಲರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ತೀವ್ರ ಸಂಕಷ್ಟದಲ್ಲಿರುವ ರೋಗಿಗಳಿಗೆ ತಾತ್ಕಾಲಿಕ ಚಿಕಿತ್ಸೆ ನೀಡುವುದು ವೈದ್ಯರ ಕರ್ತವ್ಯವಾಗಿದ್ದರೂ, ಡಾ. ಹುಲಿಮನಿಗೌಡ ಅವರು ಅಂತಹ ರೋಗಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿದರು. ಖಾಸಗಿ ಆಸ್ಪತ್ರೆ ಸೇವೆಯಲ್ಲಿ ತೋರಿಸುವ ಆಸಕ್ತಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸುತ್ತಿಲ್ಲ ಎಂದು ಆರೋಪಿಸಿ, ಅವರನ್ನು ತಕ್ಷಣ ವರ್ಗಾವಣೆ ಮಾಡಿ ಜನಸ್ನೇಹಿ ವೈದ್ಯರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಮನವಿಯಲ್ಲಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ, ಮಟ್ಕಾ ಹಾಗೂ ಜೂಜಾಟ ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಲಾಗಿದೆ. ವಾಲ್ಮೀಕಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ರಸ್ತೆ ಒತ್ತುವರಿ ತೆರವುಗೊಳಿಸಬೇಕು, ಅಂಬೇಡ್ಕರ್ ವೃತ್ತದಿಂದ ಶ್ರೀ ಲಕ್ಷ್ಮೀ ರಂಗನಾಥ ದೇವಸ್ಥಾನವರೆಗೆ ನಿರ್ಮಿಸಿರುವ ಸಿಸಿ ರಸ್ತೆ ಕಳಪೆ ಕಾಮಗಾರಿಗೆ ಸಂಬಂಧಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಹಾಗೂ ಹಲವು ವರ್ಷಗಳಿಂದ ಅಪೂರ್ಣವಾಗಿರುವ ವಾಲ್ಮೀಕಿ ಭವನ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಕೃಷಿ ಕೂಲಿಕಾರರ ಸಂಘಟನೆ ಮುಖಂಡರಾದ ಶರಣಪ್ಪ ಕಾರಲಕುಂಟಿ,ಕರವೇ ಮುಖಂಡರಾದ ಭೀಮನಗೌಡ ಎಂ ಪಾಟೀಲ್,ನಂದಪ್ಪ ಪಿ.ಮಡ್ಡಿ ,ಬಸವರಾಜ ಗೋಪಾಳಪುರ,ತಮ್ಮಣ್ಣ ಹೇರುಂಡಿ,ಭೀಮಣ್ಣ ನಾಯಕ,ಮಲ್ಲು ತೆಗ್ಗಳಿ ಸೇರಿದಂತೆ ಇತರರು ಇದ್ದರು.