ದೇವದುರ್ಗ ಎಪಿಎಂಸಿಯಲ್ಲಿ ರೈತ ವಿರೋಧಿ ಚಟುವಟಿಕೆ ತಡೆಗೆ ಆಗ್ರಹ
ದೇವದುರ್ಗ: ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ರೈತ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಹಾಗೂ ಎಪಿಎಂಸಿಗೆ ಸಂಬಂಧವಿಲ್ಲದ ಗೋಡೌನ್‌ಗಳು ಮತ್ತು ಮಳಿಗೆಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅರಕೇರಾ ಮತ್ತು ದೇವದುರ್ಗ ಘಟಕದ ವತಿಯಿಂದ ಎಪಿಎಂಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಎಪಿಎಂಸಿ ಆವರಣದಲ್ಲಿ ಕೆಲ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದ್ದು, ಇದರಿಂದ ರೈತರ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದರು.
ಆವರಣದಲ್ಲಿರುವ ಗೋಡೌನ್‌ಗಳು, ಮಳಿಗೆಗಳು ಹಾಗೂ ಇತರ ವಾಣಿಜ್ಯ ಚಟುವಟಿಕೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಸರ್ಕಾರದ ನಿಯಮ ಉಲ್ಲಂಘಿಸಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ರೈತರ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳಿಗೆ ಎಪಿಎಂಸಿ ಆವರಣದಲ್ಲಿ ಅವಕಾಶ ನೀಡಬಾರದು. ಮಾರುಕಟ್ಟೆ ಆವರಣದಲ್ಲಿ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಮಾರುಕಟ್ಟೆ ವ್ಯವಸ್ಥೆಯಲ್ಲಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲೇಶ್ ನಾಯಕ, ದೇವದುರ್ಗ ತಾಲೂಕು ಅಧ್ಯಕ್ಷ ಮರಿಲಿಂಗ ಪಾಟೀಲ್ ಗೌರಂಪೇಟೆ, ಅರಕೇರಾ ಅಧ್ಯಕ್ಷ ಹರ್ಷವರ್ಧನ್ ನಾಯಕ, ದೇವದುರ್ಗ ತಾಲೂಕು ಪ್ರಧಾನ ಕಾರ್ಯದರ್ಶಿ ರಮೇಶ್ ಸಿಪಾತಗೇರಾ, ಕಾನೂನು ಸಲಹೆಗಾರರು, ಅರಕೇರಾ ತಾಲೂಕು ಉಪಾಧ್ಯಕ್ಷ ಹನುಮಗೌಡ ಚಡಕಲಗುಡ್ಡ, ದೇವದುರ್ಗ ತಾಲೂಕು ಉಪಾಧ್ಯಕ್ಷ ನಾಗರಾಜ್ ನಾಯಕ ತೆಗ್ಗಿಹಾಳ್ ಗೌರಂಪೇಟೆ, ಸಾಮಾಜಿಕ ಅಧ್ಯಕ್ಷ ಇರ್ಫಾನ್ ಬುವಾಜಿ, ಅಲ್ಲಾವುದ್ದೀನ್ ಬುವಾಜಿ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.