Manvi | ಎಸ್‌ಸಿ, ಎಸ್‌ಟಿ ಸಮುದಾಯದ ಸಮಸ್ಯೆಗಳಿಗೆ ಕಾನೂನು ಭದ್ರತೆ: ಡಿವೈಎಸ್ಪಿ ಚಂದ್ರಶೇಖರನಾಯಕ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ

Update: 2026-08-12 18:04 IST

ಮಾನ್ವಿ : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಿ, ಸಂತ್ರಸ್ತರಿಗೆ ಸೂಕ್ತ ಕಾನೂನು ಭದ್ರತೆ ಒದಗಿಸಲಾಗುವುದು ಎಂದು ಡಿವೈಎಸ್ಪಿ ಚಂದ್ರಶೇಖರನಾಯಕ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ಹಾಗೂ ಮಾನ್ವಿ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು. ಎಸ್ಸಿ–ಎಸ್ಟಿ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಿ, ಸಂತ್ರಸ್ತರಿಗೆ ಅಗತ್ಯ ಕಾನೂನು ನೆರವು ಒದಗಿಸಲಾಗುವುದು. ಅಸ್ಪೃಶ್ಯತೆ ಆಚರಣೆ ಕಾನೂನುಬಾಹಿರವಾಗಿದ್ದು, ಇಂತಹ ಅನಿಷ್ಠ ಪದ್ಧತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಹಿಂಜರಿಯುವುದಿಲ್ಲ ಎಂದು ತಿಳಿಸಿದರು.

ಪಿಎಸ್‌ಐ ಸೋಮಶೇಖರ ಕೆಂಚಾರೆಡ್ಡಿ ಮಾತನಾಡಿ, ಮಾನ್ವಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶಾಲಾ–ಕಾಲೇಜುಗಳು ಹಾಗೂ ಬಾಲಕಿಯರ ವಸತಿ ನಿಲಯಗಳ ಬಳಿ ಪುಂಡರ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು. ಕಳ್ಳತನ ಹಾಗೂ ಇತರೆ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುತ್ತಿದ್ದು, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ ಎಂದರು.

ಮಾನ್ವಿ ಪಟ್ಟಣದ ಪ್ರಮುಖ ಸ್ಥಳಗಳು ಹಾಗೂ ವೃತ್ತಗಳಲ್ಲಿ ನೂರಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.

ತಹಶೀಲ್ದಾರ್ ಭೀಮರಾಯ ರಾಮಸಮುದ್ರ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾದ ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನದ ದುರ್ಬಳಕೆಯಾಗಿರುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ಪಡೆಯಲು ಸೂಚಿಸಲಾಗಿದೆ. ಬಗರ್ ಹುಕುಂಗೆ ಸಂಬಂಧಿಸಿದಂತೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ.ಪಂ. ಅಧಿಕಾರಿ ಬಾಗಯ್ಯನಾಯಕ, ಸಮಾಜ ಕಲ್ಯಾಣಾಧಿಕಾರಿ ಶಾಹಿದಾಬೇಗಂ, ಪುರಸಭೆ ಮ್ಯಾನೇಜರ್ ನರಸಿಂಹ, ವಿವಿಧ ಸಮಾಜದ ಮುಖಂಡರಾದ ರಾಜಾಸುಭಾಶ್ಚಂದ್ರನಾಯಕ, ಪ್ರಭುರಾಜ್ ಕೊಡ್ಲಿ, ಬುಡ್ಡಪ್ಪನಾಯಕ, ಅಯ್ಯಪ್ಪನಾಯಕ ಮ್ಯಾಕಲ್, ಹನುಮಂತ ಸೀಕಲ್, ಕಾಶೀನಾಥ ಕುರ್ಡಿ, ಶರಣಬಸವನಾಯಕ ಜಾನೇಕಲ್‌, ಬಸವರಾಜ ನಕಗಕುಂದಿ, ರಮೇಶನಾಯಕ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News