ದೇವದುರ್ಗ | ಕಾಲುವೆಗಳಿಗೆ ಸಮರ್ಪಕ ನೀರು ಹರಿಸದಿದ್ದರೆ ಅ.2ರಂದು ಮುತ್ತಿಗೆ: ಪ್ರಭಾಕರ ಪಾಟೀಲ
ದೇವದುರ್ಗ: ನಾರಾಯಣಪುರ ಬಲದಂಡೆ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸದ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಅ. 2ರಂದು ಭೀಮರಾಯನಗುಡಿಯ ಮುಖ್ಯ ಅಭಿಯಂತರರ ಕಚೇರಿಗೆ ರೈತರಿಂದ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಭಾಕರ ಪಾಟೀಲ ಇಂಗಳದಾಳ ತಿಳಿಸಿದ್ದಾರೆ.
ದೇವದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಗಾರು ಮಳೆ ಸಮರ್ಪಕವಾಗಿ ಆಗದಿರುವುದರಿಂದ ಈ ಭಾಗದ ರೈತರು ನಾರಾಯಣಪುರ ಬಲದಂಡೆ ಕಾಲುವೆ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸದ ಕಾರಣ ರೈತರ ಜಮೀನುಗಳಲ್ಲಿ ಬೆಳೆದ ಬೆಳೆಗಳು ಒಣಗುತ್ತಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಜಿಲ್ಲೆಯ ಹಲವು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದ್ದರೂ ನಿಗಮದ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಈಗಾಗಲೇ ವಿದ್ಯುತ್ ಪೂರೈಕೆ, ಕಾಲುವೆಗಳ ಮೂಲಕ ರೈತರಿಗೆ ಸಮರ್ಪಕ ನೀರು ಹರಿಸುವುದು, ಬಾಕಿ ಇರುವ ಜೋಳದ ಹಣ ಬಿಡುಗಡೆ ಸೇರಿದಂತೆ ಜಿಲ್ಲೆಯ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿ 10 ಗಂಟೆ ಹಾಗೂ ತಾಲೂಕುಗಳಲ್ಲಿ 7 ಗಂಟೆ ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸಿದ್ದಾರೆ. ಆದರೆ ನಿಗಮದ ಅಧಿಕಾರಿಗಳು ಮಾತ್ರ ಹಲವು ಕಾರಣಗಳನ್ನು ಹೇಳಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾರಾಯಣಪುರ ಬಲದಂಡೆ ಕಾಲುವೆಗೆ ನೀರು ಹರಿಸುವ ಕುರಿತು ಐಸಿಸಿ ಸಭೆಯಲ್ಲಿ 14 ದಿನ ಚಾಲ್ತಿ ಹಾಗೂ 10 ದಿನ ಸ್ಥಗಿತಗೊಳಿಸುವ ವಾರಬಂದಿ ಪದ್ಧತಿ ನಿರ್ಧರಿಸಲಾಗಿತ್ತು. ಆದರೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಭಾವಿ ರಾಜಕಾರಣಿಯ ಮಾತು ಕೇಳಿ ವಾರಬಂದಿ ಮಾಡುವ ಪೂರ್ವದಲ್ಲಿ ಸೆ. 25, 26 ಹಾಗೂ 27ರಂದು ಮೂರು ದಿನ ಕಾಲುವೆ ನೀರನ್ನು ರೈತರ ಜಮೀನುಗಳಿಗೆ ಹರಿಸದೆ, ಕಾಲುವೆ ಕಾಮಗಾರಿ ಪ್ರಗತಿಯಲ್ಲಿರುವ 95ನೇ ಕಿ.ಮೀ.ಗೆ ನೀರು ಹರಿಸಲಾಗಿದೆ. ಇದರಿಂದ 16, 17 ಹಾಗೂ 18ನೇ ಕಾಲುವೆಗಳಿಗೆ ನೀರು ಬಾರದೆ ರೈತರ ಬೆಳೆಗಳು ಸಂಪೂರ್ಣ ಒಣಗುತ್ತಿವೆ. ಇದಕ್ಕೆ ನಿಗಮದ ಅಧಿಕಾರಿಗಳೇ ನೇರ ಹೊಣೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾರಾಯಣಪುರ ಬಲದಂಡೆ ಕಾಲುವೆಯ 95ನೇ ಕಿ.ಮೀ. ಕ್ರಾಸ್ ರೆಗ್ಯುಲೇಟರ್ ಗೇಟ್‌ಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು. 7 ದಿನಗಳ ವಾರಬಂದಿ ಜಾರಿಗೊಳಿಸಬೇಕು. ನಿಗಮದ ಅಧಿಕಾರಿಗಳು ರೈತರ ಸಮಸ್ಯೆಯ ಗಂಭೀರತೆಯನ್ನು ಅರಿತು ತಕ್ಷಣ ಕ್ರಮ ಕೈಗೊಳ್ಳಬೇಕು. ರೈತರ ಜಮೀನುಗಳಿಗೆ ಕಾಲುವೆ ನೀರು ಸಮರ್ಪಕವಾಗಿ ಹರಿಸದಿದ್ದರೆ ಅ. 2ರಂದು ಭೀಮರಾಯನಗುಡಿಯಲ್ಲಿರುವ ಮುಖ್ಯ ಅಭಿಯಂತರರ ಕಚೇರಿಗೆ ರೈತರು ಮುತ್ತಿಗೆ ಹಾಕಲಾಗುವುದು ಎಂದು ಪ್ರಭಾಕರ ಪಾಟೀಲ ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಹಾಜಿ ಮಸ್ತಾನಸಾಬ್ ಬಿ. ಗಣೇಕಲ್, ಮುಖಂಡರಾದ ಹನುಮಗೌಡ ಜಾಲಹಳ್ಳಿ, ಉಮ್ಮಣ್ಣ ಮಲದಕಲ್, ಹುಸೇನ ಬಾಷಾ, ರಮೇಶ ಸುಂಕೇಶ್ವರಹಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.