Raichur | ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸಲು ಆಗ್ರಹಿಸಿ ಎಡಪಕ್ಷಗಳಿಂದ ಪ್ರತಿಭಟನೆ
ರಾಯಚೂರು: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಕೇಳಿಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಸಿಪಿಐ(ಎಂ), ಸಿಪಿಐ, ಸಿಪಿಐ(ಎಂ-ಎಲ್) ಲಿಬರೇಷನ್ ಹಾಗೂ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷಗಳ ನೇತೃತ್ವದಲ್ಲಿ ಸೋಮವಾರ ನಗರದ ಟಿಪ್ಪು ಸುಲ್ತಾನ್ ಗಾರ್ಡನ್ ಸಮೀಪ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಮುಖಂಡರು ಮುಖ್ಯ ಚುನಾವಣಾ ಆಯುಕ್ತರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಡಪಕ್ಷಗಳ ಮುಖಂಡರು, ಸೆಪ್ಟೆಂಬರ್ 23ರಂದು ಪ್ರಕಟವಾದ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಳನ್ನು ಉಲ್ಲೇಖಿಸಿ, ಚುನಾವಣಾ ಆಯೋಗದೊಳಗಿನ ನಿರ್ಧಾರ ಪ್ರಕ್ರಿಯೆ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ ಎಂದು ಹೇಳಿದರು.
ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು ಮತದಾರರ ನೋಂದಣಿ, ಹೆಸರುಗಳನ್ನು ತೆಗೆದುಹಾಕುವುದು, ಮರು ಸೇರ್ಪಡೆ ಹಾಗೂ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಹಲವು ನಿರ್ಧಾರಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಅವರು ಆರೋಪಿಸಿದರು. ಈ ಬೆಳವಣಿಗೆಗಳು ಚುನಾವಣಾ ಆಯೋಗದ ಕಾರ್ಯನಿರ್ವಹಣೆಯ ಪಾರದರ್ಶಕತೆ ಮತ್ತು ಸ್ವಾಯತ್ತತೆಯ ಬಗ್ಗೆ ಅನುಮಾನಗಳಿಗೆ ಕಾರಣವಾಗಿವೆ ಎಂದು ಹೇಳಿದರು.
ಮತದಾರರ ದತ್ತಾಂಶ ನಿರ್ವಹಣೆಯಲ್ಲಿ ಕೇಂದ್ರೀಕರಣ ಹೆಚ್ಚಾಗಿದೆ ಹಾಗೂ ರಾಜ್ಯ ಮತ್ತು ಕ್ಷೇತ್ರ ಮಟ್ಟದ ಅಧಿಕಾರಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂಬ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಎಸ್‌ಐಆರ್ ಪ್ರಕ್ರಿಯೆ ಮತದಾರರ ಪಟ್ಟಿಯ ಪರಿಷ್ಕರಣೆಗೆ ಮಾತ್ರ ಸೀಮಿತವಾದ ವಿಷಯವಲ್ಲ. ಇದು ಚುನಾವಣಾ ಆಯೋಗದ ಪಾರದರ್ಶಕತೆ, ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆ ಹಾಗೂ ಸಾರ್ವತ್ರಿಕ ಮತದಾನದ ಹಕ್ಕಿನ ರಕ್ಷಣೆಗೆ ಸಂಬಂಧಿಸಿದ ಮಹತ್ವದ ವಿಷಯವಾಗಿದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.
ಪ್ರತಿಭಟನಾಕಾರರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆರವುಗೊಳಿಸಬೇಕು, ಎಸ್‌ಐಆರ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು, ಮತದಾರರ ಪಟ್ಟಿಯಿಂದ ತಪ್ಪಾಗಿ ಹೊರಗಿಡಲಾಗಿದೆ ಎನ್ನಲಾದವರ ಹೆಸರುಗಳನ್ನು ಮರುಸ್ಥಾಪಿಸಬೇಕು ಹಾಗೂ ಚುನಾವಣಾ ಆಯೋಗದ ಸ್ವತಂತ್ರ ಮತ್ತು ಪಾರದರ್ಶಕ ಕಾರ್ಯನಿರ್ವಹಣೆಯನ್ನು ಖಚಿತಪಡಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ಚುನಾವಣಾ ಆಯುಕ್ತರ ನೇಮಕಾತಿ ವ್ಯವಸ್ಥೆಯಲ್ಲಿ ಸುಧಾರಣೆ ತಂದು, ಪ್ರಧಾನಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಒಳಗೊಂಡ ಆಯ್ಕೆ ಸಮಿತಿಯ ಮೂಲಕ ನೇಮಕಾತಿ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವಿರೇಶ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಕ್ಯಾತ್ನಟಿ, ಸಿಪಿಐ(ಎಂ-ಎಲ್) ಲಿಬರೇಷನ್ ಮುಖಂಡ ಅಜೀಜ್ ಜಗೀರ್‌ದಾರ್, ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಚಂದ್ರಗಿರೀಶ ಸೇರಿದಂತೆ ವಿವಿಧ ಎಡಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.