24 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ ವಿಜಯ್ ಕುಮಾರ್ ಪಟ್ಟಿಗೆ ರಾಯಚೂರಿನಲ್ಲಿ ಅದ್ದೂರಿ ಸ್ವಾಗತ

Update: 2026-08-02 23:09 IST

ರಾಯಚೂರು, ಆ.2: ಭಾರತೀಯ ಸೇನೆಯಲ್ಲಿ 24 ವರ್ಷಗಳ ಕಾಲ ರಾಷ್ಟ್ರಸೇವೆ ಸಲ್ಲಿಸಿ ನಿವೃತ್ತರಾದ ವಿಜಯ್ ಕುಮಾರ್ ಪಟ್ಟಿ ಅವರು ಹುಟ್ಟುಹಬ್ಬದ ದಿನವೇ ತವರಿಗೆ ಮರಳಿದ ಹಿನ್ನೆಲೆಯಲ್ಲಿ ಭಾನುವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಾಜಿ ಸೈನಿಕರ ಸಂಘ, ಛಲವಾದಿ ಸಮಾಜ, ಪಟ್ಟಿ ಕುಟುಂಬ, ದಲಿತ ಸಂಘಟನೆಗಳು ಹಾಗೂ ವಿವಿಧ ಸಮಾಜಮುಖಿ ಸಂಘಟನೆಗಳ ನೇತೃತ್ವದಲ್ಲಿ ವಿಜಯ್ ಕುಮಾರ್ ಅವರಿಗೆ ಹೂವಿನ ಹಾರ ಹಾಕಿ ಗೌರವಿಸಲಾಯಿತು.

ಬಳಿಕ ಅಂಬೇಡ್ಕರ್ ವೃತ್ತದಿಂದ ರಾಯಲ್ ಫೋರ್ಟ್ ಹೋಟೆಲ್‌ವರೆಗೆ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ನಡೆಯಿತು. ರಾಷ್ಟ್ರಧ್ವಜಗಳನ್ನು ಹಿಡಿದು ದೇಶಭಕ್ತಿ ಘೋಷಣೆಗಳೊಂದಿಗೆ ನೂರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಪಟಾಕಿ ಸಿಡಿಸುವ ಮೂಲಕ ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಜಯ್ ಕುಮಾರ್ ಪಟ್ಟಿ, ಭಾರತೀಯ ಸೇನೆಯಲ್ಲಿನ ತಮ್ಮ 24 ವರ್ಷಗಳ ಸೇವಾ ಅನುಭವವನ್ನು ಹಂಚಿಕೊಂಡರು. ಶಿಸ್ತು, ಸಮಯಪಾಲನೆ ಮತ್ತು ದೇಶಪ್ರೇಮವೇ ಸೈನಿಕನ ಬದುಕಿನ ಆಧಾರವಾಗಿದ್ದು, ವಿಶೇಷ ಪಡೆಗಳಿಗೆ ತರಬೇತಿ ನೀಡಿದ ಅನುಭವ ತಮ್ಮ ಜೀವನದ ಹೆಮ್ಮೆಯ ಕ್ಷಣಗಳಾಗಿವೆ ಎಂದು ಹೇಳಿದರು.

2002ರಿಂದ 2026ರ ಏಪ್ರಿಲ್ 30ರವರೆಗೆ ಭಾರತೀಯ ಸೇನೆಯ ಇಎಂಇ (EME) ವಿಭಾಗದಲ್ಲಿ ಸೇವೆ ಸಲ್ಲಿಸಿದ ಅವರು, ಎನ್‌ಎಸ್‌ಜಿ ಮನೇಸರ್, 12 ಪ್ಯಾರಾ ಸ್ಪೆಷಲ್ ಫೋರ್ಸ್, ಒಟಿಎ ಗಯಾ, 3 ಇಎಂಇ ಸೆಂಟರ್ ಭೋಪಾಲ್, ಜಮ್ಮು-ಕಾಶ್ಮೀರ, ಅಸ್ಸಾಂ, ಸಿಯಾಚಿನ್–ಲಡಾಖ್ ಹಾಗೂ ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಗಡಿ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿರುವುದಾಗಿ ತಿಳಿಸಿದರು.

ಇ ವೇಳೆ ಛಲವಾದಿ ಮಹಾಸಭಾದ ರಾಜ್ಯ ನಿರ್ದೇಶಕ ಎ. ವಸಂತ್, ಜಿಲ್ಲಾ ಸಂಚಾಲಕ ನರಸಿಂಹ ನೆಲಹಾಳ, ಕಾಂಗ್ರೆಸ್ ಮುಖಂಡ ಮೊಹಮ್ಮದ್ ಶಾಲಂ, ಪಾಲಿಕೆಯ ಮಾಜಿ ಮೇಯರ್ ಸಾಜೀದ್ ಸಮೀರ್, ಕೆ. ಪರಶುರಾಮ, ಸುರೇಶ್ ಪಟ್ಟಿ, ವಿಶ್ವನಾಥ್ ಪಟ್ಟಿ, ರವೀಂದ್ರನಾಥ್ ಪಟ್ಟಿ, ಪುಷ್ಪರಾಜ್, ತಮ್ಮಣ್ಣ ವಕೀಲ, ರಾಜು ಪಟ್ಟಿ, ಪಾರ್ಥಸಾರಥಿ, ಬಾಬು, ನಿವೃತ್ತ ಯೋಧರ ಸಂಘದ ಜಿಲ್ಲಾ ಅಧ್ಯಕ್ಷ ಚೆನ್ನಾರೆಡ್ಡಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಮಾಜಿ ಸೈನಿಕರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News