ರಾಯಚೂರಿನಲ್ಲಿ ಧಾರಾಕಾರ ಮಳೆ; ರೈತರ ಮೊಗದಲ್ಲಿ ಮಂದಹಾಸ

Update: 2026-07-17 20:25 IST

ಸಾಂದರ್ಭಿಕ ಚಿತ್ರ

ರಾಯಚೂರು : ಒಂದೂವರೆ ತಿಂಗಳಿನಿಂದ ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದ ರಾಯಚೂರು ಜಿಲ್ಲೆಯ ಜನತೆಗೆ ಶುಕ್ರವಾರ ವರುಣರಾಯ ಕೊನೆಗೂ ಸಿಹಿಸುದ್ದಿ ನೀಡಿದ್ದಾನೆ. ರಾಯಚೂರು ನಗರ, ತಾಲೂಕು, ದೇವದುರ್ಗ ತಾಲೂಕಿನ ಖಾನಾಪುರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಮಳೆಗಾಗಿ ಕಾಯುತ್ತಿದ್ದ ರೈತರಲ್ಲಿ ಹೊಸ ಆಶಾಭಾವನೆ ಮೂಡಿದೆ.

ಮುಂಗಾರು ಆರಂಭವಾದರೂ ಸಮರ್ಪಕ ಮಳೆಯಾಗದ ಕಾರಣ ಜಿಲ್ಲೆಯ ಹತ್ತಿ, ಭತ್ತ, ತೊಗರಿ ಸೇರಿದಂತೆ ವಿವಿಧ ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದವು. ಹಲವೆಡೆ ರೈತರು ಟ್ಯಾಂಕರ್ ಹಾಗೂ ಕೊಡಗಳ ಮೂಲಕ ನೀರುಣಿಸಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಟ್ಟಿದ್ದರು. ಕೆಲವು ಗ್ರಾಮಗಳಲ್ಲಿ ಬೆಳೆ ಸಂಪೂರ್ಣ ಹಾನಿಗೀಡಾಗಿದ್ದರಿಂದ ಮರುಬಿತ್ತನೆಗೆ ಸಿದ್ಧತೆ ನಡೆಸಲಾಗಿತ್ತು.

ಮಳೆಗಾಗಿ ಜಿಲ್ಲೆಯಾದ್ಯಂತ ವಿಶೇಷ ಪೂಜೆ, ಹೋಮ-ಹವನ, ಸಪ್ತ ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ರೈತರ ಪ್ರಾರ್ಥನೆಗೆ ಸ್ಪಂದಿಸಿದಂತೆ ಸುರಿದ ಮಳೆಯಿಂದ ಒಣಗುತ್ತಿದ್ದ ಬೆಳೆಗಳಿಗೆ ಜೀವಕಳೆ ಬಂದಿದ್ದು, ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ರಾಯಚೂರು ನಗರದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದ್ದು, ದೇವದುರ್ಗ ತಾಲೂಕಿನ ಖಾನಾಪುರದಲ್ಲಿ ಸುರಿದ ಭಾರೀ ಮಳೆಯಿಂದ ಹತ್ತಿ ಹೊಲಗಳಲ್ಲಿ ನೀರು ಹರಿದಿದೆ. ರಾಯಚೂರು ತಾಲೂಕಿನ ಕಲ್ಮಲಾ, ಸಾತ್ ಮೈಲ್, ಗೋನ್ಹಾಳ, ಪತ್ತೇಪುರ ಸೇರಿದಂತೆ ಹಲವು ಗ್ರಾಮಗಳಲ್ಲೂ ಉತ್ತಮ ಮಳೆಯಾಗಿದೆ.

ಮಳೆ ಇದೇ ರೀತಿ ಮುಂದುವರಿದರೆ ಒಣಗುವ ಹಂತದಲ್ಲಿದ್ದ ಬೆಳೆಗಳು ಚೇತರಿಸಿಕೊಳ್ಳುವ ಸಾಧ್ಯತೆ ಇದ್ದು, ಮರುಬಿತ್ತನೆಯ ಅನಿವಾರ್ಯತೆಯೂ ತಪ್ಪಲಿದೆ. ಆದರೆ, ಮುಂದಿನ ಕೆಲ ದಿನಗಳ ಮಳೆಯ ಸ್ಥಿತಿಗತಿಯನ್ನು ಗಮನಿಸಿ ಅಗತ್ಯ ಕೃಷಿ ಕ್ರಮಗಳನ್ನು ಕೈಗೊಳ್ಳುವಂತೆ ಕೃಷಿ ತಜ್ಞರು ರೈತರಿಗೆ ಸಲಹೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News