Sindhanur | ನೀಟ್ ಅಕ್ರಮ ಖಂಡಿಸಿ ಧರಣಿ; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ

ಸೋನಂ ವಾಂಗ್ಚುಕ್ ಉಪವಾಸಕ್ಕೆ ಬೆಂಬಲಿಸಿ ರಾಷ್ಟ್ರಪತಿಗೆ ಮನವಿ

Update: 2026-07-17 19:48 IST

ಸಿಂಧನೂರು, ಜು.17: ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಅಕ್ರಮವನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಹಾಗೂ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಮತ್ತು ಉಪವಾಸ ನಿರತ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ನಗರದ ತಹಸೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.

ಬಳಿಕ ಶಿರಸ್ತೇದಾರ್ ಅಂಬಾದಾಸ್ ಅವರ ಮೂಲಕ ರಾಷ್ಟ್ರಪತಿಗಳಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾಕಾರರು ಮಾತನಾಡಿ, ಕಳೆದ 19 ದಿನಗಳಿಂದ ಸೋನಂ ವಾಂಗ್ಚುಕ್ ಹಾಗೂ ಇತರ ಪ್ರತಿಭಟನಾಕಾರರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸದಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಆರೋಪಿಸಿದರು.

ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ ಮಾತನಾಡಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವು ಸಾಮಾನ್ಯ ಲೋಪವಲ್ಲ, ದೊಡ್ಡ ಹಗರಣವಾಗಿದೆ. ಸಿಬಿಐ ತನಿಖೆಯಲ್ಲಿ ಪ್ರಶ್ನೆ ಪತ್ರಿಕೆ ತಯಾರಿಕಾ ಮಂಡಳಿಯ ಸದಸ್ಯನೇ ಖಾಸಗಿ ಕೋಚಿಂಗ್ ಕೇಂದ್ರಕ್ಕೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿರುವುದು ಬಹಿರಂಗವಾಗಿದೆ ಎಂದು ಆರೋಪಿಸಿ, ಈ ಅಕ್ರಮದಿಂದ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳು ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡ ಬಸವಂತರಾಯಗೌಡ, ಎಸ್‌ಐಒ ಜಿಲ್ಲಾ ಘಟಕದ ಅಧ್ಯಕ್ಷ ಡಾ. ವಸೀಮ್, ಸಮುದಾಯದ ಮುಖಂಡ ಎಸ್. ದೇವೇಂದ್ರಗೌಡ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಮುಖಂಡ ಅಮೀನ್‌ಪಾಷಾ ದಿದ್ದಿಗಿ ಮತ್ತು ಸಿಪಿಐ ಮುಖಂಡ ಭಾಷುಮಿಯಾ ಮಾತನಾಡಿ, ಕೇಂದ್ರ ಸರ್ಕಾರದ ಶಿಕ್ಷಣ ನೀತಿ, ನೀಟ್ ಅಕ್ರಮ ಹಾಗೂ ವಿದ್ಯಾರ್ಥಿಗಳ ಹೋರಾಟದ ಕುರಿತು ತೀವ್ರ ಟೀಕೆ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ತಕ್ಷಣ ವಿದ್ಯಾರ್ಥಿ ಸಂಘಟನೆಗಳು ಮತ್ತು ಸೋನಂ ವಾಂಗ್ಚುಕ್ ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಹಾಗೂ ನೀಟ್ ಅಕ್ರಮದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಶಂಕರ ಗುರಿಕಾರ, ಡಿಎಸ್‌ಎಸ್ ಮೂರ್ತಿ ಬಣದ ಜಿಲ್ಲಾಧ್ಯಕ್ಷ ಅಶೋಕ ನಂಜಲದಿನ್ನಿ, ಕೃಷ್ಣಮೂರ್ತಿ ಧುಮುತಿ, ಹನುಮೇಶ ಗುಡದೂರು, ರೈತ ಮುಖಂಡ ಬಸವರಾಜ ಗೋಡಿಹಾಳ, ಸಮ್ಮದ್ ಚೌದ್ರಿ ಅವರು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವನ್ನು ಖಂಡಿಸಿದರು. ಪ್ರತಿಭಟನಾ ಧರಣ ಯಲ್ಲಿ ಜಮಾಅತೆ ಇಸ್ಲಾಂ ಹಿಂದ್‌ನ ಹುಸೇನ್‌ಸಾಬ್, ವೆಂಕನಗೌಡ ಗದ್ರಟಗಿ, ಕಂಟೆಪ್ಪ, ಡಿ.ಎಚ್.ಕಂಬಳಿ, ನಾಗರಾಜ್ ಪೂಜಾರ್, ಚಿಟ್ಟಿಬಾಬು ಬೂದಿವಾಳಕ್ಯಾಂಪ್, ಬಸವರಾಜ ಬಾದರ್ಲಿ, ಗಂಗಮ್ಮ ಗೊರಬಾಳ, ಸರಸ್ವತಿ ಪಾಟೀಲ್, ಶಕುಂತಲಾ ಪಾಟೀಲ್, ಬಸವರಾಜ ಕೊಂಡೆ, ಬಸವರಾಜ ಹಸಮಕಲ್, ಡಾ.ಬಸವರಾಜ ನಾಯಕ, ವೀರೇಶ ಕನ್ನಾರಿ, ಕಟ್ಟಡ ಕಾರ್ಮಿಕರ ಸಂಘದ ಜಗದೀಶ್, ತುಳಸಪ್ಪ ದಡೇಸುಗೂರು, ಸಿಪಿಐ(ಎಂಎಲ್) ಲಿಬರೇಶನ ತಾಲ್ಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಇಮ್ತಿಯಾಜ್, ಖಾಸಿಂ ಕಾರ್ಪೆಂಟರ್, ಅಬುಲೈಸ್ ನಾಯ್ಕ ಸೇರಿದಂತೆ ಇನ್ನಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News