ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು: ಸಚಿವ ಕೆ.ಎಚ್. ಮುನಿಯಪ್ಪ
ಹೊಕ್ರಾಣಿ ಗ್ರಾಮಕ್ಕೆ ಭೇಟಿ; ಅಶ್ವಿನಿ ಕುಟುಂಬ ಸಾಂತ್ವನ
ರಾಯಚೂರು: ಸಮಾಜದಲ್ಲಿ ಪ್ರೀತಿ-ವಾತ್ಸಲ್ಯದಿಂದ ಒಟ್ಟಾಗಿ ಬಾಳುವ ಉತ್ತಮ ವಾತಾವರಣವನ್ನು ಗ್ರಾಮೀಣ ಭಾಗದಲ್ಲಿ ನಿರ್ಮಿಸಬೇಕು. ಅಶಾಂತಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಅಧಿಕಾರಿಗಳಿಗೆ ಹೇಳಿದರು.
ಸೆಪ್ಟೆಂಬರ್ 04ರ ಶುಕ್ರವಾರ ದಂದು ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಮೃತ ಅಶ್ವಿನಿ ಅವರ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿ ಮಾತನಾಡಿದರು.
ಈ ಹಿಂದುಳಿದ ಪ್ರದೇಶಗಳಲ್ಲಿ ವಿಶೇಷ ಕಾಳಜಿ ವಹಿಸಿ, ಅಲ್ಲಿನ ಪರಿಸ್ಥಿತಿಯನ್ನು ಸುಧಾರಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ಕಾರದ ವಿವಿಧ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಸಮುದಾಯಗಳ ಮಧ್ಯ ಉತ್ತಮ ವಾತಾವರಣ ನಿರ್ಮಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ಶ್ರಮಿಸಬೇಕು. ಮೃತ ಅಶ್ವಿನಿ ಅವರ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುತ್ತದೆ. ಅಲ್ಲದೆ ಅವರ ಸಹೋದರನಿಗೆ ಸರ್ಕಾರಿ ನೌಕರಿ ನೀಡಲಾಗುತ್ತದೆ. ಹಾಗೂ ಅವರ ಜಮೀನಿಗೆ ನೀರಾವರಿ ವ್ಯವಸ್ಥೆ ಮಾಡಲು ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಹೊಕ್ರಾಣಿ ಗ್ರಾಮದಲ್ಲಿ ನಡೆದ ಅಶ್ವಿನಿ ಕೊಲೆ ಖಂಡಿಸಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು ದ್ವೇಷ-ಅಸೂಯೆಗಳನ್ನು ಮರೆತು, ಎಲ್ಲರೂ ಸಾಮರಸ್ಯದಿಂದ ಬದುಕು ನಡೆಸುವ ಮೂಲಕ ಮುನ್ನಡೆಯಬೇಕು. ಎಲ್ಲಿ ನಾವು ಪ್ರೀತಿ-ವಾತ್ಸಲ್ಯದ ಬದುಕನ್ನು ಮಾಡಿಕೊಂಡು ಹೋಗುತ್ತೇವೆಯೋ, ಅಲ್ಲಿ ಮಾತ್ರ ನಾವು ಮುಂದೆ ಹೋಗಲು ನಮಗೆ ಅವಕಾಶವಿದೆ ಎಂದರು.
ಸಾಮರಸ್ಯವನ್ನು ಮೂಡಿಸುವುದಕ್ಕಾಗಿ 41 ವರ್ಷಗಳಿಂದ ನಿರಂತರ ಹೋರಾಟದಲ್ಲೇ ಇದ್ದೇವೆ. ಎಲ್ಲಿಯವರೆಗೆ ನಮ್ಮಲ್ಲಿ ಸಾಮರಸ್ಯ ಮೂಡುವುದಿಲ್ಲವೋ, ಅಲ್ಲಿಯವರೆಗೆ ನಮ್ಮ ನಾಡಿನಲ್ಲಿ ಅಭಿವೃದ್ಧಿ ಹಾಗೂ ಶಾಂತಿ ನೆಲೆಸುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಸಮಾಜದ ಎಲ್ಲರೂ ಒಂದಾಗಿ ಕೈಜೋಡಿಸಬೇಕೆಂದು ಸಚಿವರು ಕರೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ವಾರ ತಾಲೂಕು ಮಟ್ಟದಲ್ಲಿ ಸಿಇಒ ಹಾಗೂ ಎಸ್.ಪಿ ಒಳಗೊಂಡಂತೆ ವಿವಿಧ ಗ್ರಾಮಗಳಿಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ, ಸರ್ಕಾರದ ವಿವಿಧ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್.ಭೋಸರಾಜು, ಮಾನ್ವಿ ಶಾಸಕ ಹಂಪಯ್ಯ ನಾಯಕ, ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕೆ.ಪಿ. ಮೋಹನ್ ರಾಜ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾವಂತಗೇರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆಯ ಮುಖಂಡರು ಹಾಗೂ ಹೊಕ್ರಾಣಿ ಗ್ರಾಮಸ್ಥರು ಇದ್ದರು.