ರಾಯಚೂರು : ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಮರುಪರಿಶೀಲನೆ ಮಾಡಿ, ಅನರ್ಹ ಫಲಾನುಭವಿಗಳನ್ನು ಕೈಬಿಟ್ಟು ಅರ್ಹ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಹಣ ಜಮೆ ಮಾಡಲು ಅಗತ್ಯ ಕ್ರಮ ವಹಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಜಲ ನಿರ್ಮಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗೃಹಲಕ್ಷ್ಮಿ ಸೇರಿದಂತೆ ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಪೈಕಿ ಮರಣ ಹೊಂದಿದ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಮರಣ ಹೊಂದಿದ ನಂತರವೂ ಅವರ ಕುಟುಂಬದವರು ಯೋಜನೆಯ ಸೌಲಭ್ಯ ಪಡೆಯುತ್ತಿದ್ದರೆ ಅಂತಹ ಹಣವನ್ನು ಸರ್ಕಾರಕ್ಕೆ ಮರಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಆಗಸ್ಟ್ 30ರಿಂದ ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನಾ ಪ್ರಕ್ರಿಯೆ ಆರಂಭವಾಗಿದ್ದು, ಸೆಪ್ಟೆಂಬರ್ ಅಂತ್ಯದವರೆಗೆ ನಡೆಯಲಿದೆ. ಆದ್ದರಿಂದ ಅಧಿಕಾರಿಗಳಷ್ಟೇ ಅಲ್ಲದೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರೂ ಕೂಡ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ಒದಗಿಸಲು ಶ್ರಮಿಸಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ 7,983 ಫಲಾನುಭವಿಗಳು ಮರಣ ಹೊಂದಿರುವ ಮಾಹಿತಿ ಕೇಂದ್ರ ಕಚೇರಿಯಿಂದ ಬಂದಿದೆ ಎಂದು ತಿಳಿಸಿದರು. ಮರಣ ಹೊಂದಿದ ನಂತರವೂ 3,219 ಫಲಾನುಭವಿಗಳ ಕುಟುಂಬದವರು ಸಹಾಯಧನ ಪಡೆಯುತ್ತಿದ್ದು, ಒಟ್ಟು 3.39 ಕೋಟಿ ರೂ. ಗೂ ಅಧಿಕ ಹಣವನ್ನು ಸರ್ಕಾರಕ್ಕೆ ಮರುಪಾವತಿಸಬೇಕಾಗಿದೆ ಎಂದು ಹೇಳಿದರು.

ಈಗಾಗಲೇ ಡಿಡಿ ಕಚೇರಿ, ಬ್ಯಾಂಕ್ ಮತ್ತು ಅಂಚೆ ಕಚೇರಿಗಳ ಮೂಲಕ 79.99 ಲಕ್ಷ ರೂ. ವನ್ನು ಸರ್ಕಾರಕ್ಕೆ ಮರುಪಾವತಿ ಮಾಡಲಾಗಿದೆ. ಇದಲ್ಲದೆ, ಫಲಾನುಭವಿಗಳು ಮರಣ ಹೊಂದಿದ ನಂತರ ಅವರ ಕುಟುಂಬ ಸದಸ್ಯರು 15.13 ಲಕ್ಷ ರೂ. ವನ್ನು ಬಳಕೆ ಮಾಡಿರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಮಾತನಾಡಿ, ಬ್ಯಾಂಕ್‌ಗಳಿಂದ ಸರ್ಕಾರಕ್ಕೆ ಮರುಪಾವತಿಸಬೇಕಾದ ಮೊತ್ತವನ್ನು ಪಾವತಿಸಲು ಅಗತ್ಯವಿದ್ದರೆ ಕೆ-2 ಚಲನ್ ಕುರಿತು ಬ್ಯಾಂಕ್ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಅನ್ನಭಾಗ್ಯ ಯೋಜನೆಯಡಿ ಜುಲೈ 2026ರವರೆಗೆ ಜಿಲ್ಲೆಯಲ್ಲಿ 4,05,770 ಪಡಿತರ ಚೀಟಿಗಳ ಮೂಲಕ ಆಹಾರ ಧಾನ್ಯ ವಿತರಣೆ ನಡೆಯುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ಜೂನ್ 2026ರವರೆಗೆ 4,35,504 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, 871.01 ಕೋಟಿ ರೂ. ಸಹಾಯಧನ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಜುಲೈ ತಿಂಗಳ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ ಎಂದು ತಿಳಿಸಿದರು.

ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 3,44,156 ಫಲಾನುಭವಿಗಳಿಗೆ 512.54 ಕೋಟಿ ರೂ. ವೆಚ್ಚ ಭರಿಸಲಾಗಿದೆ. ಶಕ್ತಿ ಯೋಜನೆಯಡಿ 1,374.96 ಲಕ್ಷ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದು, 3,043.02 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಯುವನಿಧಿ ಯೋಜನೆಯಡಿ 8,280 ಪದವೀಧರರು ಹಾಗೂ 200 ಡಿಪ್ಲೊಮಾ ಪೂರ್ಣಗೊಳಿಸಿದ ಫಲಾನುಭವಿಗಳಿಗೆ ಒಟ್ಟು 2.51 ಕೋಟಿ ರೂ. ಸಹಾಯಧನವನ್ನು ಖಾತೆಗೆ ವರ್ಗಾಯಿಸಲಾಗಿದೆ ಎಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಟಿ. ರೋನಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರಾದ ನಾಗೇಂದ್ರ ಮಟಮಾರಿ, ಹನುಮಂತಪ್ಪ ಜಾಲಿಬೆಂಚಿ, ಸದಸ್ಯರಾದ ಬಿ.ಕೆ. ಅಮರೇಶ್, ಲಕ್ಷ್ಮಣ ಜ್ಯೋತಿ, ಮಹೆಬೂಬ್ ಸಾಬ್, ಅನಿಲ್ ಕುಮಾರ್, ವೆಂಕಟೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor