ರಾಯಚೂರು : ಸಮಾಜ ಕಲ್ಯಾಣ ವ್ಯಾಪ್ತಿಯ ವಸತಿ ನಿಲಯಗಳಲ್ಲಿ 10 ವರ್ಷಗಳಿಂದ ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿ, ಕಾವಲುಗಾರರು,ಕಂಪ್ಯೂಟರ್ ಅಪರೇಟರ್ ಗಳನ್ನು ಖಾಯಂಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ( ಜೈ ಭೀಮ ಘರ್ಜನೆ) ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಶುಕ್ರವಾರ ನೂತನ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ದಲಿತ ಮುಖಂಡರ ಹಾಗೂ ಸಾರ್ವಜನಿಕರ ಕುಂದು ಕೊರತೆಗಳ ಸಭೆಯಲ್ಲಿ ಮನವಿ ಸಲ್ಲಿಸಿ, ಸಮಾಜ ಕಲ್ಯಾಣ ವಸತಿ ನಿಲಯಗಳಲ್ಲಿ 30 ವರ್ಷಗಳಿಂದ ಕೆಲಸ ಮಾಡುತ್ತಿರುವ ಹೊರ ಗುತ್ತಿಗೆ ನೌಕರರಿಗೆ ಖಾಯಂ ಮಾಡಲು ಸರಕಾರ ಮುಂದಾಗಿದ್ದು, ಇದನ್ನು ಸಡಿಲಗೊಳಿಸಿ 10 ವರ್ಷಗಳಿಂದ ಕೆಲಸ ಮಾಡುತ್ತಿರುವವರನ್ನು ಖಾಯಂ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ದಕ್ಷಿಣ ಭಾಗದ ಮೈಸೂರು, ಬೆಂಗಳೂರು, ಮಂಗಳೂರು ಭಾಗದ ಮಕ್ಕಳಿಗೆ ಮುದ್ದೆ ಸಾರು , ಕಾಳು ,ಅನ್ನ ನೀಡುತ್ತಿದ್ದು, ಉತ್ತರ ಕರ್ನಾಟಕ ಭಾಗದ ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳ ವಸತಿ ನಿಲಯಗಳಲ್ಲಿ ರೊಟ್ಟಿ, ಚಪಾತಿ, ಕಾಳು, ಅನ್ನ ಸಾಂಬಾರ್ ನೀಡಬೇಕು ಹಾಗೂ ಇದಕ್ಕೆ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದು ಅಗತ್ಯವಾಗಿದೆ. ಊಟೋಪಚಾರದಲ್ಲಿನ ತಾರತಮ್ಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಸಂಘದ ರಾಜ್ಯ ಸಂಘಟನಾ ಸಂಚಾಲಕ ಎಂ.ಈರಣ್ಣ, ಮಹಾದೇವಪ್ಪ, ಮಾರುತಿ ಕಮ್ತೋಳ್, ಲಕ್ಷ್ಮೀದೇವಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor