×
Ad

ಎರಡ್ಮೂರು ದಿನದಲ್ಲಿ ಜೋಳದ ಹಣ ರೈತರ ಖಾತೆಗೆ ಪಾವತಿಸದಿದ್ದರೆ ಹೋರಾಟ : ಮಾಜಿ ಸಚಿವ ನಾಡಗೌಡ ಎಚ್ಚರಿಕೆ

Update: 2026-06-13 21:01 IST

ಸಿಂಧನೂರು: ಹೈಬ್ರಿಡ್ ಜೋಳ ಮಾರಾಟ ಮಾಡಿ ಮೂರು ತಿಂಗಳು ಕಳೆದರೂ ರೈತರ ಖಾತೆಗಳಿಗೆ ಹಣ ಜಮಾ ಮಾಡದಿರುವುದನ್ನು ಖಂಡಿಸಿದ ಮಾಜಿ ಸಚಿವ ಹಾಗೂ ಕೆಒಎಫ್ ಅಧ್ಯಕ್ಷ ವೆಂಕಟರಾವ್ ನಾಡಗೌಡ, ಇನ್ನೆರಡು-ಮೂರು ದಿನಗಳಲ್ಲಿ ಬಾಕಿ ಹಣ ಪಾವತಿಸದಿದ್ದರೆ ಜೆಡಿಎಸ್ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆಯೂ ಜೋಳ ಖರೀದಿ ಪ್ರಕ್ರಿಯೆಯಲ್ಲಿ ಮೂರು-ನಾಲ್ಕು ತಿಂಗಳ ವಿಳಂಬ ಮಾಡಲಾಗಿತ್ತು. ಈಗ ಮಾರಾಟ ಮಾಡಿದ ಜೋಳದ ಹಣವನ್ನೂ ರೈತರಿಗೆ ನೀಡದೇ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದರು.

ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗಿರುವ ಈ ಸಂದರ್ಭದಲ್ಲಿ ರೈತರಿಗೆ ಬೀಜ, ಗೊಬ್ಬರ ಹಾಗೂ ಇತರೆ ಕೃಷಿ ಕಾರ್ಯಗಳಿಗೆ ಹಣದ ಅಗತ್ಯವಿದೆ. ಆದರೆ ಹಣ ಸಿಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ರೈತರ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಂಧನೂರಿನಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರು ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದು, ಜನರ ಸಮಸ್ಯೆಗಳನ್ನು ಮರೆತಿದ್ದಾರೆ ಎಂದು ನಾಡಗೌಡ ಟೀಕಿಸಿದರು.

“ಒಂದು ಕಡೆ ಪಾದಯಾತ್ರೆ, ಇನ್ನೊಂದು ಕಡೆ ಬೈಕ್ ರ‍್ಯಾಲಿ ನಡೆಯುತ್ತಿದೆ. ಆದರೆ ರೈತರ ಸಮಸ್ಯೆ ಕೇಳುವವರು ಯಾರು? ಕ್ಷೇತ್ರದ ಜನರ ಹಿತಕ್ಕಿಂತ ರಾಜಕೀಯ ಹುದ್ದೆಗಳತ್ತ ಹೆಚ್ಚು ಗಮನ ಹರಿಸಲಾಗುತ್ತಿದೆ” ಎಂದು ಹೇಳಿದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಳೆದ ಹಲವು ತಿಂಗಳಿಂದ ಸರ್ಕಾರ ಸಚಿವ ಸ್ಥಾನ, ಖಾತೆ ಹಂಚಿಕೆ ಮತ್ತು ಅಧಿಕಾರದ ಗಲಾಟೆಯಲ್ಲೇ ಮುಳುಗಿದೆ ಎಂದು ಆರೋಪಿಸಿದರು.

“ನಾನು ಕೇಳಿದ ಖಾತೆ ಸಿಕ್ಕಿಲ್ಲ ಎಂದು ಸಚಿವರು ರಾಜೀನಾಮೆ ನೀಡುತ್ತಾರೆ. ಮತ್ತೊಬ್ಬರು ಪೂರ್ಣ ಖಾತೆ ಬೇಕೆಂದು ಪಟ್ಟು ಹಿಡಿಯುತ್ತಾರೆ. ಇನ್ನೊಬ್ಬರು ಡಿಸಿಎಂ ಸ್ಥಾನ ಮತ್ತು ನಿರ್ದಿಷ್ಟ ಖಾತೆಗೆ ಬೇಡಿಕೆ ಇಡುತ್ತಾರೆ. ಇಂತಹ ಗೊಂದಲಮಯ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ” ಎಂದು ಕಿಡಿಕಾರಿದರು.

ಸಚಿವ ಸ್ಥಾನಕ್ಕಾಗಿ ಇನ್ನೂ ಹಲವರು ಕಾಯುತ್ತಿದ್ದು, ಕೆಲವರು ಸಚಿವರಾದ ಬಳಿಕ ಕಚೇರಿಯ ವ್ಯವಸ್ಥೆ ಬಗ್ಗೆ ಯೋಚಿಸುತ್ತಿದ್ದಾರೆ. ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದರೆ ಸರ್ಕಾರ ಮಾತ್ರ ಅಧಿಕಾರದ ಒಳಜಗಳದಲ್ಲೇ ನಿರತವಾಗಿದೆ ಎಂದು ನಾಡಗೌಡ ಟೀಕಿಸಿದರು.

ರೈತರ ಸಮಸ್ಯೆಗಳಿಗೆ ಆದ್ಯತೆ ನೀಡಿ ಜೋಳ ಮಾರಾಟದ ಬಾಕಿ ಹಣವನ್ನು ತಕ್ಷಣ ಪಾವತಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ರವಿಕುಮಾರ ಪನ್ನೂರು, ಮುಖಂಡರಾದ ಮುಖಂಡರಾದ ಚಂದ್ರಶೇಖರ ಮೈಲಾರ, ದಾಸರಿ ಸತ್ಯನಾರಾಯಣ, ಅಲ್ಲಮಪ್ರಭು ಪೂಜಾರ್, ಜಿ.ಸತ್ಯನಾರಾಯಣ, ವೆಂಕೋಬ ಕಲ್ಲೂರು, ಸುಮಿತ್ ತಡಕಲ್, ಎಂ.ಡಿ.ಆಸೀಪ್ ಸೇರಿದಂತೆ ಇನ್ನಿತರರಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News