Raichur | ಮೆಟ್ರಿಕ್ ಪೂರ್ವ ವಸತಿ ನಿಲಯಗಳ ಉನ್ನತೀಕರಣ ನಿರ್ಧಾರ ಹಿಂಪಡೆಯಲು ಆಗ್ರಹ
ರಾಯಚೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯಗಳನ್ನು ಮೆಟ್ರಿಕ್ ನಂತರದ ವಸತಿ ನಿಲಯಗಳಾಗಿ ಉನ್ನತೀಕರಿಸುವ ನಿರ್ಧಾರವನ್ನು ಹಿಂಪಡೆದು, ಅವುಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿ ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ರಾಯಚೂರು ನಗರದ ಅರಬ್ ಮೊಹಲ್ಲಾ ಹಾಗೂ ಆಶಾಪುರ ರಸ್ತೆ, ಸಿರವಾರ ತಾಲೂಕಿನ ಕವಿತಾಳ, ದೇವದುರ್ಗ ತಾಲೂಕಿನ ನಿಲೋಗಲ್, ಲಿಂಗಸುಗೂರು ತಾಲೂಕಿನ ಮಟ್ಟೂರು ಮತ್ತು ಸಂತೆಕಲ್ಲೂರು ಸೇರಿ ಒಟ್ಟು ಆರು ಮೆಟ್ರಿಕ್ ಪೂರ್ವ ವಸತಿ ನಿಲಯಗಳಿವೆ. ಇವುಗಳಲ್ಲಿ ಆಶಾಪುರ ರಸ್ತೆ, ಸಂತೆಕಲ್ಲೂರು ಹಾಗೂ ಮಟ್ಟೂರು ವಸತಿ ನಿಲಯಗಳನ್ನು ಮೆಟ್ರಿಕ್ ನಂತರದ ವಸತಿ ನಿಲಯಗಳಾಗಿ ಉನ್ನತೀಕರಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ನಿಲೋಗಲ್ ವಸತಿ ನಿಲಯಕ್ಕೆ ಇನ್ನೂ ಅಧಿಕೃತ ಆದೇಶ ಹೊರಬರದ ಕಾರಣ ಪ್ರವೇಶ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಕವಿತಾಳ ವಸತಿ ನಿಲಯದಲ್ಲೂ ಉನ್ನತೀಕರಣದ ಕಾರಣ ಈ ವರ್ಷ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ನೀಡಿಲ್ಲ ಎಂದು ಅವರು ಆರೋಪಿಸಿದರು.
ಗ್ರಾಮೀಣ ಪ್ರದೇಶದ ಬಡ ಮತ್ತು ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಈ ವಸತಿ ನಿಲಯಗಳು ಶಿಕ್ಷಣ ಮುಂದುವರಿಸಲು ಸಹಕಾರಿಯಾಗಿವೆ. ಯಾವುದೇ ಕಾರಣಕ್ಕೂ ವಸತಿ ನಿಲಯಗಳನ್ನು ಮುಚ್ಚಬಾರದು ಅಥವಾ ವಿಲೀನಗೊಳಿಸಬಾರದು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ವಿದ್ಯಾರ್ಥಿನಿ ಲಕ್ಷ್ಮೀ, ವಸತಿ ನಿಲಯಗಳ ಸೌಲಭ್ಯದಿಂದ ದೂರದ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕಾರಣ ನೀಡಿ ಹಾಸ್ಟೆಲ್‌ಗಳನ್ನು ಮುಚ್ಚಿದರೆ ಅನೇಕ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧದಲ್ಲೇ ತೊರೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಶಾಪುರದ ಬಿಸಿಎಂ ವಸತಿ ನಿಲಯದಲ್ಲೇ ಸುಮಾರು 120 ವಿದ್ಯಾರ್ಥಿಗಳು ವಾಸವಾಗಿದ್ದು, ಶಿಕ್ಷಣವನ್ನು ಲಾಭ-ನಷ್ಟದ ದೃಷ್ಟಿಯಿಂದ ನೋಡಬಾರದು. ಶಿಕ್ಷಣವು ಮೂಲಭೂತ ಹಕ್ಕಾಗಿದ್ದು, ವಸತಿ ನಿಲಯಗಳು ಸೇವಾ ಮನೋಭಾವದಿಂದ ಮುಂದುವರಿಯಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಸವರಾಜ, ಮಲ್ಲಯ್ಯ, ಸ್ವಾತಿ, ಮಲ್ಲಿಕಾರ್ಜುನ, ಶಿವಪ್ಪ ಮತ್ತಿತರರು ಇದ್ದರು.