Raichur | ಬಾಲ್ಯವಿವಾಹ ತಡೆಗೆ ಜಿಲ್ಲೆಯಲ್ಲಿ 6 ಕಿಶೋರಿ ಕೇಂದ್ರ ಸ್ಥಾಪನೆ : ಸಿಇಒ ಈಶ್ವರ್ ಕಾಂದೂ
ರಾಯಚೂರು : ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಜಿಲ್ಲಾದ್ಯಂತ ಪೈಲಟ್ ಮಾದರಿಯಲ್ಲಿ ಆರು ಕಿಶೋರಿ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲ್ಯವಿವಾಹದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು, ಹದಿಹರೆಯದ ಮಕ್ಕಳನ್ನು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವುದು, ಶಿಕ್ಷಣದ ಮಹತ್ವ ಹಾಗೂ ಮುಟ್ಟಿನ ನಿರ್ವಹಣೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಈ ಕಿಶೋರಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ತಜ್ಞರು, ಸ್ತ್ರೀರೋಗ ತಜ್ಞರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಪ್ರಕರಣಗಳು ವರದಿಯಾಗುತ್ತಿವೆ. ಬಡತನ, ಅನಕ್ಷರತೆ ಸೇರಿದಂತೆ ವಿವಿಧ ಕಾರಣಗಳಿಂದ ಹದಿಹರೆಯದಲ್ಲೇ ಮಕ್ಕಳು ಮದುವೆಗೆ ಒಳಗಾಗುತ್ತಿದ್ದು, ಇದರಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಬಾಲ್ಯದಲ್ಲಿಯೇ ಗರ್ಭಧಾರಣೆಯಾಗುವುದರಿಂದ ಅವಧಿಪೂರ್ವ ಪ್ರಸವ, ಅಪೌಷ್ಟಿಕ ಮಕ್ಕಳ ಜನನ, ರಕ್ತಹೀನತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದ್ದು, ಇವು ದೇಶದ ಅಭಿವೃದ್ಧಿಗೂ ತೊಡಕಾಗುತ್ತವೆ ಎಂದು ಹೇಳಿದರು.
ಮಳೆ ಕೊರತೆಯಿಂದ ನೀರಿನ ಸಮಸ್ಯೆ ಉಂಟಾಗದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಬಾಡಿಗೆ ಬೋರ್‌ವೆಲ್‌ಗಳನ್ನು ಗುರುತಿಸಿ, ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಅಳವಡಿಸಲಾದ ಪೈಪ್‌ಲೈನ್‌ಗಳ ನಿರ್ವಹಣೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸೂಚಿಸಿದರು.
ಗ್ರಂಥಪಾಲಕರು ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕಗಳ ಸಿಬ್ಬಂದಿಯ ವೇತನವನ್ನು ಸಕಾಲಕ್ಕೆ ಪಾವತಿಸಬೇಕು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ಕೈಗೊಂಡು, ಚುನಾವಣಾ ಆಯೋಗದ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದರು.
ಮಹಿಳಾ ಸಬಲೀಕರಣಕ್ಕಾಗಿ ಆರಂಭಿಸಲಾದ ಅಕ್ಕ ಕೆಫೆಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಸಾರ್ವಜನಿಕರಿಗೆ ಶುಚಿ ಹಾಗೂ ರುಚಿಕರ ಆಹಾರ ಒದಗಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಜಿಲ್ಲಾ ಪಂಚಾಯಿತಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರಕ್ಕಾಗಿ ರೂಪಿಸಿರುವ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು.
ರಾಜೀವ್ ಗಾಂಧಿ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕ ಉಸ್ಮಾನ್ ಪಾಷಾ ಮಾತನಾಡಿ, ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ಶೀಘ್ರ ಪೂರ್ಣಗೊಳಿಸಲು ಫಲಾನುಭವಿಗಳಿಗೆ ಮಾಹಿತಿ ನೀಡಬೇಕು. ಹಳೆಯ ಗುರಿಗಳನ್ನು ಪೂರ್ಣಗೊಳಿಸಿದರೆ ಹೊಸ ಪ್ರಸ್ತಾವನೆಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗುತ್ತದೆ ಎಂದರು.
ಪ್ರಶಸ್ತಿ ಪ್ರದಾನ: ಮಸ್ಕಿ ತಾಲೂಕಿನ ಹಿರೇದಿನ್ನಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ ಹಾಗೂ ರಾಯಚೂರು ತಾಲೂಕಿನ ಕಲ್ಮಲಾ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಅವರಿಗೆ ಉತ್ತಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಸ್ತಿಯನ್ನು ಸಿಇಒ ಈಶ್ವರ್ ಕಾಂದೂ ಪ್ರದಾನಿಸಿದರು.
ಈ ವೇಳೆ ಜಿಪಂ ಉಪಕಾರ್ಯದರ್ಶಿಗಳಾದ ಶ್ರೀ ಹಾಲಸಿದ್ದಪ್ಪ ಪೂಜೇರಿ, ಯೋಜನಾ ನಿರ್ದೇಶಕರಾದ ಶ್ರೀ ಶರಣಬಸವರಾಜ್, ಮುಖ್ಯ ಲೆಕ್ಕಧಿಕಾರಿಗಳಾದ ಶ್ರೀ ವಿಜಯಶಂಕರ್, ಮುಖ್ಯ ಯೋಜನಾಧಿಕಾರಿಗಳಾದ ಡಾ.ಟಿ.ರೋಣಿ, ವಿವಿಧ ತಾಪಂಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಭಿಯಂತರರು, ಸಹಾಯಕ ನಿರ್ದೇಶಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.