Raichur | ಲಂಚಕ್ಕೆ ಬೇಡಿಕೆಯಿಟ್ಟ ಆರೋಪ : ಪಿಡಿಒ ಲೋಕಾಯುಕ್ತ ಬಲೆಗೆ
ರಾಯಚೂರು: ನಿವೇಶನಗಳಿಗೆ ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಪಿಡಿಒ ಒಬ್ಬರು ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ ನಡೆದಿದೆ.
ರಾಯಚೂರು ತಾಲೂಕಿನ ಬೀಜನಗೆರಾ ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಲಕ್ಷ್ಮೀ ವಿರುದ್ಧ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಉಮ್ರಾಳದೊಡ್ಡಿ ಗ್ರಾಮದ ಮಹೆಬೂಬ್ ಎಂಬುವವರು ತಮ್ಮ 2 ಎಕರೆ 6 ಗುಂಟೆ ಜಮೀನಿನಲ್ಲಿ ಬಡಾವಣೆ ನಿರ್ಮಿಸಿದ್ದು, ನಿವೇಶನಗಳಿಗೆ ಖಾತೆ ಮಾಡಿಕೊಡುವಂತೆ ಪಿಡಿಒ ಅವರನ್ನು ಮನವಿ ಮಾಡಿದ್ದರು. ಈ ವೇಳೆ ಪಿಡಿಒ ಲಕ್ಷ್ಮೀ ಅವರು 2.50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಆರೋಪದ ಪ್ರಕಾರ, ಲಂಚದ ಮೊತ್ತದಲ್ಲಿ 1.50 ಲಕ್ಷ ರೂ. ವನ್ನು ತಮ್ಮ ಪತಿಯ ಫೋನ್‌ಪೇ ಖಾತೆಗೆ ವರ್ಗಾಯಿಸಿಕೊಳ್ಳುವಂತೆ ಸೂಚಿಸಿದ್ದು, ಉಳಿದ ಹಣವನ್ನು ಬಳಿಕ ನೀಡುವಂತೆ ತಿಳಿಸಿದ್ದರು. ಈ ಸಂಬಂಧ ದೂರುದಾರ ಮಹೆಬೂಬ್ ಅವರು ಹಣ ವರ್ಗಾವಣೆ ಮಾಡಿದ ಫೋನ್‌ಪೇ ಸ್ಕ್ರೀನ್‌ಶಾಟ್ ಸೇರಿದಂತೆ ದಾಖಲೆಗಳೊಂದಿಗೆ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ದೂರಿನ ಆಧಾರದ ಮೇಲೆ ಕ್ರಮ ಕೈಗೊಂಡ ಲೋಕಾಯುಕ್ತ ಪೊಲೀಸರು ಪಿಡಿಒ ಲಕ್ಷ್ಮೀ ಹಾಗೂ ಅವರ ಪತಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.