Raichur | ಎಸ್‌ಐಆರ್ ಪ್ರಕ್ರಿಯಲ್ಲಿ ಶೇ.71.15ರಷ್ಟು ಪ್ರಗತಿ : ಡಿಸಿ ಪೂವಿತಾ ಎಸ್.
ರಾಯಚೂರು, ಜು. 6: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನವು ರಾಯಚೂರು ಜಿಲ್ಲೆಯಲ್ಲಿ ವೇಗವಾಗಿ ಸಾಗುತ್ತಿದ್ದು, ಜುಲೈ 5ರ ಸಂಜೆ ವೇಳೆಗೆ ಒಟ್ಟು 12,19,859 ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪೂವಿತಾ ಎಸ್. ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 17,14,559 ಮತದಾರರು ಇದ್ದು, ಇದುವರೆಗೆ ಶೇ.71.15ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈವರೆಗೆ ವಿತರಿಸಲಾದ ನಮೂನೆಗಳ ಪೈಕಿ 2.38 ಲಕ್ಷ ಮತದಾರರ ಗಣತಿ ನಮೂನೆಗಳನ್ನು ಡಿಜಿಟಲೀಕರಿಸಲಾಗಿದೆ. ಜೊತೆಗೆ 1,051 ಮತದಾರರು ಆನ್‌ಲೈನ್ ಮೂಲಕ ತಮ್ಮ ಗಣತಿ ನಮೂನೆಗಳನ್ನು ಭರ್ತಿ ಮಾಡಿದ್ದಾರೆ.
ಇದಲ್ಲದೆ, ಪರಿಶೀಲನೆ ವೇಳೆ ಸ್ಥಳದಲ್ಲಿ ಇಲ್ಲದವರು, ಬೇರೆ ವಿಳಾಸಕ್ಕೆ ಸ್ಥಳಾಂತರಗೊಂಡವರು, ಮೃತಪಟ್ಟವರು ಹಾಗೂ ಎರಡು ಕಡೆ ನೋಂದಣಿಯಾಗಿರುವವರು ಸೇರಿ ಒಟ್ಟು 3,009 ಮತದಾರರ ವಿವರಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.