ರಾಜಕೀಯ ಅಧಿಕಾರವನ್ನು ಪಡೆಯುವುದೇ ನಮ್ಮ ಉದ್ದೇಶ : ನಟ ಚೇತನ್ ಅಹಿಂಸಾ
"ದಲಿತ, ಬಹುಜನ ಹಾಗೂ ಶೋಷಿತರನ್ನು ಒಗ್ಗೂಡಿಸಿ ಸಂಘಟನೆ"
ಲಿಂಗಸುಗೂರು: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಮಾನತೆಯ ಆಶಯಗಳನ್ನು ಸಾಕಾರಗೊಳಿಸುವ ಉದ್ದೇಶದಿಂದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಶೋಷಿತ ಸಮುದಾಯಗಳನ್ನು ಒಗ್ಗೂಡಿಸಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲಾಗುವುದು ಎಂದು ಚಿತ್ರ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ತಿಳಿಸಿದ್ದಾರೆ.
ಭಾನುವಾರ ಲಿಂಗಸುಗೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿವಿಧ ಸಮಾಜಪರ ಸಂಘಟನೆಗಳು, ದಲಿತ-ಬಹುಜನ ಹೋರಾಟಗಾರರನ್ನು ಒಗ್ಗೂಡಿಸಿ ಹೊಸ ರಾಜಕೀಯ ವೇದಿಕೆ ನಿರ್ಮಿಸಲಾಗುತ್ತಿದೆ. ಪಕ್ಷದ ಹೆಸರಿನಲ್ಲಿ ಸಂವಿಧಾನದ ಆಶಯಗಳನ್ನು ಪ್ರತಿಬಿಂಬಿಸುವ ಪದಗಳು ಇರಲಿವೆ ಎಂದು ಹೇಳಿದರು.
ಪ್ರಸ್ತುತ ಪಕ್ಷದ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇವೆ. ಕರ್ನಾಟಕದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಘಟನೆ ಕಟ್ಟುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
2027ರ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ 25 ಸಾವಿರಕ್ಕೂ ಅಧಿಕ ಜನರನ್ನು ಸೇರಿಸಿ ಬೃಹತ್ ಸಮಾವೇಶ ಆಯೋಜಿಸಲಾಗುವುದು. ಇದೇ ಸಮಾವೇಶದಲ್ಲಿ ಪಕ್ಷದ ಹೆಸರು, ಚಿಹ್ನೆ, ಧ್ವಜ, ಪ್ರಣಾಳಿಕೆ ಹಾಗೂ ರಾಜ್ಯ ಸಮಿತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದರು.
ಸಮ ಸಮಾಜ ನಿರ್ಮಾಣವೇ ಪಕ್ಷದ ಮುಖ್ಯ ಧ್ಯೇಯವಾಗಿದ್ದು, ಸಂವಿಧಾನದ ಮೌಲ್ಯಗಳ ಆಧಾರದ ಮೇಲೆ ರಾಜಕೀಯ ಪರ್ಯಾಯ ರೂಪಿಸುವ ಉದ್ದೇಶ ಹೊಂದಿದ್ದೇವೆ ಎಂದು ಚೇತನ್ ಅಹಿಂಸಾ ಹೇಳಿದರು.
ಈ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಅಮರೇಶ ವೆಂಕಟಾಪುರು, ದಲಿತ ಮುಖಂಡರಾದ ಲಿಂಗಪ್ಪ ಪರಂಗಿ, ಕುಪ್ಪಣ್ಣ ಕಸಬಾ, ಮೌನೇಶ ಐದನಾಳ, ಚಿದಾನಂದ ಕಸಬಾ, ಮಾದೇಶ ಸರ್ಜಾಪುರು, ಬಸವರಾಜ ಗೋಸ್ಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.