×
Ad

ರಾಯಚೂರು | ಪರಿಶಿಷ್ಟ ಜಾತಿ ಸಂಘಟಿತವಾದರೆ ಸೌಲಭ್ಯ: ದ್ವಾರಕನಾಥ್

ಸಿಂಧೋಳ್ ಸಮಾಜದ ಕುಂದುಕೊರತೆ ಸಭೆ

Update: 2026-01-03 23:03 IST

ರಾಯಚೂರು, ಜ. 3: ಪರಿಶಿಷ್ಟ ಜಾತಿಯ ಎಲ್ಲಾ ಉಪಜಾತಿಗಳು ಪರಸ್ಪರ ಸೌಹಾರ್ದ ಒಗ್ಗಟ್ಟಿನಿಂದ ಇರಬೇಕು. ಸಂಘಟಿತರಾಗಿದ್ದಲ್ಲಿ ಸರಕಾರದ ಸೌಲಭ್ಯಗಳು, ನ್ಯಾಯಯುತವಾದ ಹಕ್ಕು ಪಡೆಯಬಹುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಬುಡಕಟ್ಟು ಮಹಾಸಭಾ (ನೋಂದಾಯಿತ) ಸಂಘದ ಸಂಸ್ಥಾಪಕ ಗೌರವಾಧ್ಯಕ್ಷ ಸಿ.ದ್ವಾರಕನಾಥ್ ಸಲಹೆ ನೀಡಿದರು.

ರಾಯಚೂರಿನ ಎಲ್‌ಬಿಎಸ್ ನಗರದ ಸಿಂಧೋಳ್ ಸಮಾಜದ ಓಣಿಗೆ ಭೇಟಿ ನೀಡಿ ಸಮಾಜದ ಕುಂದು ಕೊರತೆ ಆಲಿಸಿದರು.

ಬಳಿಕ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಬುಡಕಟ್ಟು ಮಹಾಸಭಾ (ನೋಂದಾಯಿತ) ರಾಯಚೂರು ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ಅವರು, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ನಮ್ಮ ಹಕ್ಕು ಪಡೆಯಬೇಕು ಎಂದು ಹೇಳಿದ್ದರು, ಅದರಂತೆ ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು, ವೃತ್ತಿ ಕೆಲಸದ ಜೊತೆಗೆ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು ಶಿಕ್ಷಣದಿಂದ ಸಮಾಜದ ಮುಖ್ಯವಾಹಿನಿಗೆ ಬರಬಹುದು ಎಂದರು.

ಸಂವಿಧಾನದ ಅಡಿಯಲ್ಲಿ ಹಕ್ಕುಗಳನ್ನು ಪಡೆದುಕೊಳ್ಳಲು ಶಿಕ್ಷಣವೇ ಮುಖ್ಯ ಶಕ್ತಿ. ಮೌಢ್ಯ ತೊರೆದು ಹೆಣ್ಣು ಮಕ್ಕಳಿಗೂ ಸಮಾನ ಶಿಕ್ಷಣ ನೀಡಬೇಕು ಎಂದು ದ್ವಾರಕಾನಾಥ್ ನುಡಿದರು.

ಮಹಾಸಭಾದ ಜಿಲ್ಲಾಧ್ಯಕ್ಷ ರಂಗಮುನಿದಾಸ ಮಾತನಾಡಿ, ಸ್ವಾತಂತ್ರ್ಯ ನಂತರವೂ ಗುರುತಿಸದ ಅಲೆಮಾರಿ ಹಾಗೂ ಬುಡಕಟ್ಟು ಜನಾಂಗಗಳನ್ನು ರಾಜ್ಯದ ಮೂಲೆಮೂಲೆಗಳಲ್ಲಿ ಸಂಚರಿಸಿ ಗುರುತಿಸಿ ಸರಕಾರದ ಮುಂದೆ ಪಟ್ಟಿ ಮಂಡಿಸಿದ ಶ್ರೇಯಸ್ಸು ಡಾ.ಸಿ.ಎಸ್.ದ್ವಾರಕನಾಥ್ ಅವರಿಗೆ ಸಲ್ಲುತ್ತದೆ. ಅಲೆಮಾರಿ ಬುಡಕಟ್ಟು ಸಮಾಜದ ಅಸ್ತಿತ್ವಕ್ಕೆ ಅವರು ನೀಡಿದ ಕೊಡುಗೆ ಇತಿಹಾಸಾತ್ಮಕವಾಗಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಹುಸೇನಪ್ಪ ಬಿ. ವಿಭೂತಿ ಮಾತನಾಡಿದರು. ಮಹಾಸಭಾದ ಕಾರ್ಯಾಧ್ಯಕ್ಷ ಸಿಂಹಾದ್ರಿ, ಉಪಾಧ್ಯಕ್ಷ ಶ್ರೀನಿವಾಸ ಮುಖಂಡರಾದ ಮಲ್ಲೇಶ ನಾಯಕ, ಡೊಕ್ಕ ಜಂಬಣ್ಣ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News