×
Ad

ವಿಬಿ-ಜಿ ರಾಮ್ ಜಿ ಕಾಯ್ದೆಯಿಂದ ಬಡವರ ಬದುಕು ಸರ್ವನಾಶ : ಮುಖ್ಯಮಂತ್ರಿ ಸಿದ್ದರಾಮಯ್ಯ

"ಬಡವರು, ರೈತರು, ಮಹಿಳೆಯರು, ದಲಿತರ ಬಾಳಿಗೆ ಬರೆ ಎಳೆದ ಮೋದಿ ಸರಕಾರ"

Update: 2026-01-03 19:55 IST

PC | X@siddaramaiah

ರಾಯಚೂರು : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮ-ನರೇಗಾ) ಯನ್ನು ಹೊಸ ಹೆಸರಲ್ಲಿ ಹೊಸ ಕಾಯ್ದೆಯೆಂದು ಘೋಷಿಸಿರುವ ಕೇಂದ್ರ ಸರಕಾರ ಬಡವರು, ಮಹಿಳೆಯರು, ದಲಿತರು, ಸಣ್ಣ ರೈತರ ಬದುಕಿಗೆ ಬರೆ ಹಾಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಅವರು ಇಂದು(ಜ.3) ಶ್ರೀ ಅಂಬಾಮಠ ಆವರಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಅಂಬಾ ಮಹೋತ್ಸವ -2026 ಜಾತ್ರಾ ಮಹೋತ್ಸವ ಹಾಗೂ ಸಿಂಧನೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾನು ಮೊದಲಬಾರಿಗೆ ಅಂಬಾ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, ತಾಯಿಯ ದರ್ಶನವಾಗಿದ್ದು ನನ್ನ ಪುಣ್ಯ. ಇಂದು ಈ ಕ್ಷೇತ್ರದಲ್ಲಿ ಸಾಲಗುಂದಾ ಏತನೀರಾವರಿ ಮುಳ್ಳೂರು ಏತ ನೀರಾವರಿ ಮತ್ತು ವಳಬಳ್ಳಾರಿ ವಿಯರ್ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

30 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗಿದೆ :

ನೀರಾವರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಎಲ್ಲಾ ನಿಗಮಗಳಿಗೆ 176 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಸಾಲಗುಂದಾ ಏತ ನೀರಾವರಿಗೆ 71 ಕೋಟಿ ರೂ., ಮಳ್ಳೂರುಏತ ನೀರಾವರಿಗೆ 21 ಕೋಟಿ ರೂ., ಒಳಬಳ್ಳಾರಿ ಏತ ನೀರಾವರಿಗೆ 43 ಕ್ಕೂ ಹೆಚ್ಚು ಅನುದಾನವನ್ನು ಒದಗಿಸಲಾಗಿದೆ. ಹಂಪನಗೌಡ ಬಾದರ್ಲಿ ಅವರು ಈ ಕ್ಷೇತ್ರದ ಅಭಿವೃದ್ಧಿಯನ್ನು ಉತ್ತಮವಾಗಿ ಮಾಡುತ್ತಿದ್ದಾರೆ. ನೀರಾವರಿಗೆ 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೀರು ಒದಗಿಸುವ ಪ್ರಯತ್ನದಲ್ಲಿ 30 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗಿದೆ. ಉಳಿದ 12 ಲಕ್ಷ ಪ್ರದೇಶಕ್ಕೆ ನೀರು ಒದಗಿಸುವ ಕಾರ್ಯ ವಿವಿಧ ಹಂತಗಳಲ್ಲಿದೆ ಎಂದರು.

431 ಕೋಟಿ ರೂ.ಗಳನ್ನು ಪಾಪಯ್ಯ ಟನಲ್ ಮತ್ತು ಕಾಲುವೆ ಅಭಿವೃದ್ಧಿಗೆ ಹಾಗೂ ತುಂಗಭದ್ರಾ 33 ಗೇಟ್ ಗಳನ್ನು ಅಳವಡಿಸುವ ಕೆಲಸ ಮಾಡಲಾಗುತ್ತಿದೆ. ಜೂನ್ ಒಳಗೆ ಈ ಕೆಲಸವನ್ನು ಪೂರ್ಣಗೊಳಿಸಿ ಮುಂದಿನ ಮುಂಗಾರು ಬೆಳೆಗೆ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಎಷ್ಟೇ ವೆಚ್ಚವಾದರೂ ಹೊಸ ಗೇಟ್ ಗಳನ್ನು ಅಳವಡಿಸಿ ನೀರು ಒದಗಿಸುತ್ತೇವೆ ಎಂದರು.

ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎನ್ನುವುದು ಅಪ್ಪಟ ಸುಳ್ಳು :

ನಮ್ಮ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎನ್ನುವುದು ಅಪ್ಪಟ ಸುಳ್ಳು. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ತಡೆ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿಗಳು, ಗ್ಯಾರಂಟಿಗಳಿಗೆ ಒಂದು ಲಕ್ಷದ 12 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ. ಶಕ್ತಿ ಯೋಜನೆಯಡಿ 643 ಕೋಟಿ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದು, ಸುಮಾರು 16 ಸಾವಿರ ಕೋಟಿ ರೂ. ವೆಚ್ಚವಾಗಿದೆ ಎಂದರು. ಒಟ್ಟು 52,000 ಕೋಟಿ ಗಳನ್ನು ಈ ವರ್ಷ ವೆಚ್ಚ ಮಾಡಲಾಗಿದೆ ಎಂದರು.

ಹಸಿರು ವಲಯ ಹೆಚ್ಚಳಕ್ಕೆ ಕ್ರಮ :

ದೇಶದಲ್ಲಿಯೇ ಕರ್ನಾಟಕ ಅತಿ ಹೆಚ್ಚು ಒಣ ಭೂಮಿಯನ್ನು ಹೊಂದಿರುವ ಎರಡನೇ ರಾಜ್ಯ. ಆದ್ದರಿಂದ ರಾಜ್ಯದಲ್ಲಿ ಹೆಚ್ಚಿನ ನೀರಾವರಿ ಕೈಗೊಂಡು ಹಸಿರು ವಲಯ ಮಾಡುವುದು ನಮ್ಮ ಉದ್ದೇಶ ಎಂದರು.

ಸಿಂಧನೂರು ಮಾತ್ರವಲ್ಲದೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಚುರುಕುಗೊಳಿಸಲಾಗುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆಯನ್ನು ಇನ್ನೂ ಹೊರಡಿಸಿಲ್ಲ. 2003 ರಲ್ಲಿಯೇ ಇತ್ಯರ್ಥವಾಗಿ ನಮಗೆ ನ್ಯಾಯ ದೊರಕಿದ್ದರೂ 173 ಟಿಎಂಸಿ ನೀರನ್ನು ಬಳಕೆ ಮಾಡಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯವನ್ನು ಹೇರಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಅಭಿವೃದ್ಧಿ ಕೆಲಸಗಳನ್ನು ಮಾಡಲು ನಾವು ಹಿಂದೆ ಬೀಳುವುದಿಲ್ಲ. ನುಡಿದಂತೆ ನಡೆಯುವ ಸರ್ಕಾರ ನಮ್ಮದು ಎಂದರು.

ಕಟ್ಟಕಡೆಯ ಭಾಗದ ರೈತರಿಗೆ ನೀರು ಒದಗಿಸಲಾಗುವುದು :

ನೀರಾವರಿ ಯೋಜನೆಗಳನ್ನು ಆದಷ್ಟು ಶೀಘ್ರವಾಗಿ ಕಟ್ಟಕಡೆಯ ಭಾಗದ ರೈತರಿಗೆ ನೀರು ಒದಗಿಸುವ ಕೆಲಸವನ್ನು ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು.

ದೇವಸ್ಥಾನದ ಅಭಿವೃದ್ಧಿಗೆ ಮೊದಲನೇ ಹಂತದಲ್ಲಿ 6.30 ಕೋಟಿ ರೂ. ಅನುದಾನದ ಪೈಕಿ 2 ಕೋಟಿ ರೂ. ಈಗಾಗಲೇ ವೆಚ್ಚ ಮಾಡಲಾಗಿದೆ. ಉಳಿದ ಹಣವನ್ನೂ ಬಿಡುಗಡೆ ಮಾಡಲಾಗುವುದು. ದೇವಸ್ಥಾನ ಮತ್ತು ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು.

ವಿಬಿ ಜಿ ರಾಮ್ ಜಿ ರದ್ದುಗೊಳ್ಳಬೇಕು :

6,000 ಕೋಟಿ ರೂ. ಗಳನ್ನು ಪ್ರತಿ ವರ್ಷ ಖರ್ಚು ಮಾಡಲಾಗುತ್ತಿತ್ತು. ಆದರೆ ಕೇಂದ್ರದವರು ಈಗ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮ-ನರೇಗಾ) ಯೋಜನೆಯನ್ನು ಬದಲಾಯಿಸಿ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿ ಮಾಡಿದ್ದಾರೆ. ಬಡವರು, ಮಹಿಳೆಯರು, ದಲಿತರು, ಸಣ್ಣ ರೈತರಿಗೆ ತೀವ್ರ ತೊಡಕುಂಟು ಮಾಡುವ ಈ ಹೊಸ ಕಾಯ್ದೆಯನ್ನು ರಾಜ್ಯ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಎಂದರು.

ಜನಪರ ಯೋಜನೆಯ ಸ್ವರೂಪವೇ ಬದಲಾಗಿದೆ :

ವಿಬಿ ಜಿ ರಾಮ್ ಜಿ ಕಾನೂನನ್ನು ರದ್ದು ಮಾಡಿ ,ಮ ನರೇಗಾ ಕಾನೂನು ಪುನರ್ ಸ್ಥಾಪನೆಯಾಗಬೇಕೆಂಬುದೇ ನಮ್ಮ ಉದ್ದೇಶ. ಈ ಕಾನೂನಿನ ಸ್ವರೂಪವನ್ನೇ ಬದಲಾಯಿಸಲಾಗಿದೆ. ಹಿಂದಿನ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ ಪೂರ್ಣ ಅನುದಾನವನ್ನು ಭರಿಸುತ್ತಿತ್ತು. ಆದರೆ ಈಗ ಕೇಂದ್ರವು ಶೇ.60 ರಷ್ಟು ಹಾಗೂ ರಾಜ್ಯ ಸರ್ಕಾರ ಶೇ. 40 ರಷ್ಟು ಅನುದಾನ ಭರಿಸಬೇಕೆಂಬ ಹೊಸ ನಿಯಮ ತಂದಿರುವುದು ಸೂಕ್ತವಾಗಿರುವುದಿಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಜಾರಿಗೊಳಿಸಿದ್ದ ಜನಪರವಾಗಿದ್ದ ಮ ನರೇಗಾ ಕಾನೂನನ್ನು 20 ವರ್ಷಗಳ ನಂತರ ಪ್ರಧಾನಿ ಮೋದಿಯವರು ಮಹಾತ್ಮಾ ಗಾಂಧಿಯವರ ಹೆಸರನ್ನೂ ಬದಲಾಯಿಸಿ ವಿಬಿ ಜಿ ರಾಮ್ ಜಿ ಎಂದು ಹೆಸರಿಟ್ಟಿದ್ದಾರೆ. ಕೇಂದ್ರದ ಈ ಕ್ರಮವನ್ನು ರಾಜ್ಯದ ಜನರೆಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕು ಎಂದರು.

ಶಾಸಕ ಹಂಪನಗೌಡ ಬಾದರ್ಲಿ ಅವರು ಮಾತನಾಡಿ, ಸಿಂಧನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು. ಅಲ್ಲದೇ ಅಂಬಾದೇವಿ ದೇವಸ್ಥಾನ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿದ್ದು, ಈ ದೇವಸ್ಥಾನದ ಮಹತ್ವ ನಾಡಿಗೆ ಸಾರುವ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷವಾಗಿ ಜಾತ್ರಾ ಮಹೋತ್ಸವ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಡಾ.ಶರಣಪ್ರಕಾಶ್‌ ಪಾಟೀಲ್, ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ್, ಶಾಸಕರಾದ ಆರ್.ಬಸನಗೌಡ ತುರ್ವಿಹಾಳ, ನಾಗರಾಜ.ಬಿ.ಎಂ, ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ, ವಸಂತಕುಮಾರ,ಜಿಲ್ಲಾಧಿಕಾರಿ ನಿತೀಶ್.ಕೆ, ತಹಶೀಲ್ದಾರ್ ಅರುಣ ದೇಸಾಯಿ, ಇಒ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ವಿಶೇಷ ಭೂಸ್ವಾಧೀನಾಧಿಕಾರಿ ಶೃತಿ ಇನ್ನಿತರರಿದ್ದರು.

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News