Raichur | ಕಾಲುವೆ ಬಂದ್ ವಿರೋಧಿಸಿ ಸಿಂಧನೂರಿನಲ್ಲಿ ಮುಂದುವರಿದ ರೈತರ ಪ್ರತಿಭಟನೆ
ಐಸಿಸಿ ಸಭೆ ನಿರ್ಣಯದಂತೆ ನೀರು ಹರಿಸಲು ಆಗ್ರಹ
ಸಿಂಧನೂರು: ಸೆಪ್ಟೆಂಬರ್ 22ರಿಂದ ಕಾಲುವೆಗಳನ್ನು ಬಂದ್ ಮಾಡುವ ಜಿಲ್ಲಾಧಿಕಾರಿಗಳ ನಿರ್ಧಾರವನ್ನು ವಿರೋಧಿಸಿ ಮಂಗಳವಾರ ತಾಲೂಕಿನ 36ನೇ ಉಪಕಾಲುವೆ ಗೇಟ್ ಬಳಿ ಶಾಸಕ, ಮಾಜಿ ಸಂಸದ ಹಾಗೂ ಮಾಜಿ ಸಚಿವರ ನೇತೃತ್ವದಲ್ಲಿ ರೈತರ ಪ್ರತಿಭಟನೆ ಎರಡನೇ ದಿನವೂ ಮುಂದುವರಿದಿದ್ದು, ಜಿಲ್ಲಾಡಳಿತದ ನಡೆ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾಲುವೆ ಬಂದ್ ನಿರ್ಧಾರದಿಂದ ಮೇಲ್ಭಾಗ ಹಾಗೂ ಕೆಳಭಾಗದ ರೈತರ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿದ್ದು, ರಾಜಕೀಯ ನಾಯಕರಿಂದಲೂ ಜಿಲ್ಲಾಧಿಕಾರಿಗಳ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ. ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ವೆಂಕಟರಾವ್ ನಾಡಗೌಡ ಹಾಗೂ ಪ್ರತಾಪಗೌಡ ಪಾಟೀಲ್ ನೇತೃತ್ವದಲ್ಲಿ 36ನೇ ಉಪಕಾಲುವೆ ಬಳಿ ರೈತರು ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಳೆಗಳಿಗೆ ನೀರಿನ ಅಗತ್ಯವಿರುವ ಸಂದರ್ಭದಲ್ಲಿ ಕಾಲುವೆಗಳನ್ನು ಬಂದ್ ಮಾಡುವ ನಿರ್ಧಾರ ಕೈಗೊಳ್ಳುವ ಮುನ್ನ ರೈತರ ಹಿತಾಸಕ್ತಿಯನ್ನು ಪರಿಗಣಿಸಬೇಕಿತ್ತು ಎಂದು ತ್ರಿವಳಿ ನಾಯಕರು ಜಿಲ್ಲಾಧಿಕಾರಿಗಳ ಕ್ರಮದ ಬಗ್ಗೆ ಅಸಮಾಧಾನ ಹೊರಹಾಕಿದರು. ಐಸಿಸಿ ಸಭೆಯ ನಿರ್ಣಯದಂತೆ ಸಿಂಧನೂರು ವ್ಯಾಪ್ತಿಯ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳ ಆದೇಶ ಕೇವಲ ಸಿಂಧನೂರು ಹಾಗೂ ಕೆಳಭಾಗದ ಕಾಲುವೆಗಳಿಗೆ ಮಾತ್ರ ಯಾಕೆ ಅನ್ವಯಿಸಬೇಕು ಎಂದು ಪ್ರಶ್ನಿಸಿದ ರೈತರು, ಕಾಲುವೆಗಳನ್ನು ಬಂದ್ ಮಾಡಲೇಬೇಕಾದರೆ ಕೊಪ್ಪಳದಿಂದ ಮೇಲ್ಭಾಗದ ಎಲ್ಲ ಕಾಲುವೆಗಳನ್ನು ಬಂದ್ ಮಾಡಬೇಕು ಎಂದು ಒತ್ತಾಯಿಸಿದರು. ಯಾವುದೇ ಕಾರಣಕ್ಕೂ ತಾಲೂಕಿನ ಉಪಕಾಲುವೆಗಳನ್ನು ಬಂದ್ ಮಾಡಲು ಅವಕಾಶ ನೀಡುವುದಿಲ್ಲ ಎಂದು ಶಾಸಕ ಸೇರಿದಂತೆ ಎಲ್ಲಾ ರಾಜಕೀಯ ನಾಯಕರು ಮತ್ತು ರೈತರು ಎಚ್ಚರಿಕೆ ನೀಡಿದರು.
ಕಾಲುವೆ ಬಂದ್‌ನಿಂದ ರೈತರ ಬೆಳೆಗಳಿಗೆ ತೀವ್ರ ತೊಂದರೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನೀರು ಪೂರೈಕೆಯನ್ನು ಮುಂದುವರಿಸಬೇಕು ಎಂದು ರೈತರು ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿದರು. ರೈತರ ಬೆಳೆಗಳ ಹಿತದೃಷ್ಟಿಯಿಂದ ಕಾಲುವೆ ಬಂದ್ ನಿರ್ಧಾರವನ್ನು ಮರುಪರಿಶೀಲಿಸಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಎಸಿ ಮನವೊಲಿಕೆಗೂ ಜಗ್ಗದ ನಾಯಕರು :
ಕಾಲುವೆ ಬಂದ್ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 6 ಗಂಟೆಯಿಂದಲೇ ಹಂಪನಗೌಡ ಬಾದರ್ಲಿ, ಕೆ. ವಿರೂಪಾಕ್ಷಪ್ಪ ಹಾಗೂ ವೆಂಕಟರಾವ್ ನಾಡಗೌಡ ನೇತೃತ್ವದಲ್ಲಿ ರೈತರು ಧರಣಿ ಆರಂಭಿಸಿದರು. ಪ್ರತಿಭಟನಾ ಸ್ಥಳಕ್ಕೆ ಲಿಂಗಸುಗೂರು ಸಹಾಯಕ ಆಯುಕ್ತರು ಖುದ್ದು ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು.
ಆದರೆ ಸಹಾಯಕ ಆಯುಕ್ತರ ಮನವಿಗೂ ರಾಜಕೀಯ ನಾಯಕರು ಮತ್ತು ರೈತರು ಜಗ್ಗದೆ ತಮ್ಮ ಹೋರಾಟವನ್ನು ಮುಂದುವರಿಸಿದರು. ಸಾವಿರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಐಸಿಸಿ ಸಭೆ ಕರೆದು ರೈತರು ಹಾಗೂ ರಾಜಕೀಯ ನಾಯಕರೊಂದಿಗೆ ಚರ್ಚೆ ನಡೆಸಬೇಕು. ನೀರಿನ ಲಭ್ಯತೆ ಹಾಗೂ ವಿತರಣೆಯ ಕುರಿತು ಎಲ್ಲರ ಒಪ್ಪಿಗೆಯೊಂದಿಗೆ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹ ವ್ಯಕ್ತಪಡಿಸಿದರು.