ರಾಯಚೂರು: ಕೈತೊಳೆದುಕೊಳ್ಳುವು ಸರಿಯಾದ ವಿಧಾನ ಅಭ್ಯಾಸ ಮಾಡಿಕೊಂಡರೆ ಶೇ 80 ರಷ್ಟು ಕಾಯಿಲೆಗಳಿಂದ ದೂರ ಇರಬಹುದು. ಕಾಯಿಲೆ ಬರುವ ಮುಂಚೆ ಜಾಗೃತಿ ವಹಿಸುವುದು ಮುಖ್ಯವಾಗಿದೆ ಎಂದು ಎಜುಕೇಶನ್ ಫಾರ್ ಆಲ್ (ಇಫಾ) ಫೌಂಡೇಶನ್ ನಿರ್ದೇಶಕ ಹಾಗೂ ಬೆಂಗಳೂರು ವಿಭಾಗದ ಉಸ್ತುವಾರಿ ಎಂ.ಎನ್ ನಿಸಾರ್ ಅಹ್ಮದ್ ತಿಳಿಸಿದರು.

ಅವರು ರಾಯಚೂರಿನ ಎಲ್ ಬಿಎಸ್ ನಗರದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಲಮಪ್ರಭು ಕಾಲೊನಿಯಲ್ಲಿ ರವಿವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಅನೇಕರು ವಾತಾವರಣ ಬದಲಾವಣೆಯಿಂದ ಕಾಯಿಲೆಗಳು ಬರುತ್ತದೆ ಎಂದು ಹೇಳುತ್ತಾರೆ ಇದು ನಿಜವಲ್ಲ, ಕಾಯಿಲೆಗಳು ನಮ್ಮ ದೈನಂದಿನ ಕೆಲಸ ಕಾರ್ಯಗಳ ನಿರ್ವಹಣೆಯಲ್ಲಿನ ಲೋಪಗಳಿಂದ ಬರುತ್ತವೆ, ಕೊಳಗೇರಿ ಬಡಾವಣೆಗಳು, ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಸರಿಯಾಗಿ ಕೈ ತೊಳೆದುಕೊಳ್ಳದೇ ಊಟ ಮಾಡುತ್ತಾರೆ ಕಾಯಿಲೆಗಳು ಇಲ್ಲಿಂದಲೇ ಹರಡುತ್ತವೆ ವೈಜ್ಞಾನಿಕ ವಿಧಾನದಿಂದ ಕೈತೊಳೆದುಕೊಂಡರೆ ಕಾಯಿಲೆಗಳಿಂದ ಬಚವಾಗಬಹುದು ಎಂದರು.

ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಳೆಗಾಲದಲ್ಲಿ ಸೊಳ್ಳೆಗಳು ಸಾಂಕ್ರಾಮಿಕ ರೋಗಗಳು ಉಂಟು ಮಾಡುತ್ತವೆ. ಕುಡಿಯುವ ಹಾಗೂ ಬಳಸುವ ನೀರನ್ನು ಎರೆಡು ದಿನಕ್ಕಿಂತ ಹೆಚ್ಚು ದಿನ ಸಂಗ್ರಹಿಸಬಾರದು ಎಂದು ಸಲಹೆ ನೀಡಿದರು.

ಅಲ್ಲಮಪ್ರಭು ಗೃಹ ನಿರ್ಮಾಣ ಸಂಘದ ನಿರ್ದೇಶಕ ವೀರೇಶ ನಾಗಲದಿನ್ನಿ ಮುಖ್ಯ ಅತಿಥಿಯಾಗಿ ಮಾತನಾಡಿ, ವೃದ್ಧಾಶ್ರಮ, ರಕ್ತದಾನ ಶಿಬಿರ, ರಿಮ್ಸ್ ಆಸ್ಪತ್ರೆ ಆವರಣದಲ್ಲಿ ಪ್ರತಿದಿನ ಉಚಿತ ಆಹಾರ ವಿತರಣೆ, ಕೋವಿಡ್ ವೇಳೆ ಆಕ್ಸಿಜನ್ ವಿತರಣೆಯಂತಹ ಅನೇಕ ಸಮಾಜಮುಖಿ ಕೆಲಸ ಮಾಡುತ್ತಿರುವ ಇಫಾ ಫೌಂಡೇಶನ್ ಕೊಳಗೇರಿ ಬಡಾವಣೆಗಳಲ್ಲಿ ಪ್ರತಿ ವಾರ ಆರೋಗ್ಯ ತಪಾಸಣೆ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ. ಕೊಳಗೇರಿ ಬಡಾವಣೆಗಳಲ್ಲಿ ಜನರು ಆರೋಗ್ಯದ ಕಡೆ ಹೆಚ್ಚು ಗಮನಹರಿಸುವುದಿಲ್ಲ, ಸಣ್ಣಪುಟ್ಟ ಕಾಯಿಲೆಗಳು ಬಂದಾಗ ನಿರ್ಲಕ್ಷಿಸುವುದರಿಂದ ಗಂಭೀರವಾದಾಗ ಲಕ್ಷಾಂತರ ರೂ.ವ್ಯಯಿಸುತ್ತಾರೆ ಜನರ ಜಾಗೃತಿಗೆ ಆರೋಗ್ಯ ಶಿಬಿರ ಆಯೋಜಿಸಿದ್ದರಿಂದ ಅನುಕೂಲವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಇಫಾ ಫೌಂಡೇಶನ್ ಹುಬ್ಬಳ್ಳಿ ವಿಭಾಗದ ಮುಜೀಬ್ ಮಕಾಂದಾರ್, ರಿಮ್ಸ್ ಡಾ. ಚಂದ್ರಶೇಖರ ಮಾತನಾಡಿ, ಆರೋಗ್ಯದ ಕಾಳಜಿಯ ಕುರಿತು ಉಪನ್ಯಾಸ ನೀಡಿದರು.

ಶಿಬಿರದಲ್ಲಿ ರೋಗಿಗಳಿಗೆ ಬಿ.ಪಿ,ಶುಗರ್, ಇಸಿಜಿ, ಕಣ್ಣು,ಕಿವಿಗಳ ತಪಾಸಣೆ ಮಾಡಿ ಔಷಧಿಗಳನ್ನು ನೀಡಲಾಯಿತು. ಬಡಾವಣೆಯ ನೂರಾರು ಜನರು ಇದರ ಸದುಪಯೋಗ ಪಡಿಸಿಕೊಂಡರು.

ಡಾ.ಅಲ್ತಾಫ್, ಇಫಾ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಸಾಜೀದ್, ಕಾರ್ಯದರ್ಶಿ ಜಬೀನ್, ಸದಸ್ಯರಾದ ಎಂಎಚ್ ಪಾಶ, ಜಯರಾಜ, ಮುಸ್ಕಾನ್, ಮುಖಂಡ ಖಾಜಾ ಮೊಯಿನುದ್ದೀನ್ ಮತ್ತಿತರರು ಪಾಲ್ಗೊಂಡಿದ್ದರು.

ಮೊಹಮ್ಮದ್ ಅತೀಕ್ ಅಹ್ಮದ್ ನಿರೂಪಿಸಿದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor