×
Ad

Raichur | ಬೇಸಿಗೆಯಲ್ಲಿ ಆರೋಗ್ಯದ ರಕ್ಷಣೆಗೆ ಹೆಚ್ಚಿನ ಆಧ್ಯತೆ ನೀಡಿ: ಡಾ.ಸುರೇಂದ್ರ ಬಾಬು

Update: 2026-05-05 21:47 IST

ರಾಯಚೂರು : ಜಿಲ್ಲೆಯಾದ್ಯಂತ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಂದ್ರ ಬಾಬು ತಿಳಿಸಿದ್ದಾರೆ.

ದೇವದುರ್ಗ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶಾಖಾಘಾತ ನಿರ್ವಹಣಾ ವಾರ್ಡ್‌ಗೆ ಭೇಟಿ ನೀಡಿ ಮಾತನಾಡಿದ ಅವರು, ಮಧ್ಯಾಹ್ನ ವೇಳೆ ತಾಪಮಾನ 40 ಡಿಗ್ರಿಗಿಂತ ಹೆಚ್ಚಾಗುತ್ತಿರುವುದರಿಂದ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವಯೋವೃದ್ಧರು ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ಸೂಚಿಸಿದರು.

ಮನೆಯಿಂದ ಹೊರಗೆ ಹೋಗುವಾಗ ಹತ್ತಿ ಬಟ್ಟೆ ಧರಿಸುವುದು, ಕುಡಿಯುವ ನೀರು ಹಾಗೂ ಛತ್ರಿ ಬಳಸುವುದು ಅಗತ್ಯ. ದ್ರವ ಆಹಾರಗಳಾದ ಲಿಂಬು ಪಾನಕ, ಎಳೆನೀರು, ಮಜ್ಜಿಗೆ, ಗಂಜಿ ಸೇವನೆ ಹೆಚ್ಚಿಸಬೇಕು. ಮನೆಯಲ್ಲೇ ಓಆರ್‌ಎಸ್ (ಜೀವಜಲ) ಪ್ಯಾಕೆಟ್ ಇಟ್ಟುಕೊಂಡು ನಿರ್ಜಲೀಕರಣ ತಡೆಯಲು ಬಳಸಬೇಕು ಎಂದು ಸಲಹೆ ನೀಡಿದರು.

ಪ್ರಖರ ಬಿಸಿಲಿನ ಸಮಯದಲ್ಲಿ ಸಾಧ್ಯವಾದಷ್ಟು ಹೊರಗೆ ಹೋಗುವುದನ್ನು ತಪ್ಪಿಸಿ ನೆರಳು ಪ್ರದೇಶಗಳಲ್ಲಿ ವಿಶ್ರಾಂತಿ ಪಡೆಯಬೇಕು. ಮಸಾಲೆಯುಕ್ತ ಆಹಾರಗಳನ್ನು ಕಡಿಮೆ ಸೇವಿಸಬೇಕು. ಚಿಕ್ಕ ಮಕ್ಕಳು ಬಿಸಿಲಿನಲ್ಲಿ ನಿಲ್ಲಿಸಿದ ವಾಹನಗಳನ್ನು ಮುಟ್ಟದಂತೆ ನೋಡಿಕೊಳ್ಳಬೇಕು ಹಾಗೂ ಅಸುರಕ್ಷಿತ ಆಹಾರ ಸೇವನೆ ತಪ್ಪಿಸಲು ಪೋಷಕರು ಗಮನ ಹರಿಸಬೇಕು ಎಂದರು.

ನವಜಾತ ಶಿಶುಗಳಿಗೆ ತಾಯಿ ಹಾಲು ಮಾತ್ರ ನೀಡುವುದು ಅತ್ಯಂತ ಮುಖ್ಯ. ನಿರ್ಜಲೀಕರಣ ತಪ್ಪಿಸಲು ತಾಯಿ ಹಾಲು ಪದೇಪದೇ ಕೊಡಬೇಕು. 6 ತಿಂಗಳೊಳಗಿನ ಶಿಶುಗಳಿಗೆ ಬೇರೆ ಆಹಾರ ನೀಡಬಾರದು. ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ಹಾಕಿಸುವುದು ಅಗತ್ಯ ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಓಆರ್‌ಎಸ್ ಪ್ಯಾಕೆಟ್‌ಗಳು ಮತ್ತು ಅಗತ್ಯ ಔಷಧಿಗಳು ಲಭ್ಯವಿದ್ದು, ತುರ್ತು ಪರಿಸ್ಥಿತಿಯಲ್ಲಿ 108 ಆಂಬ್ಯುಲೆನ್ಸ್ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಅಧಿಕಾರಿ ಡಾ. ಶಿವಕುಮಾರ ನಾರಾ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಗಣೇಶ ಕೆ., ತಾಲೂಕು ಆರೋಗ್ಯಾಧಿಕಾರಿ ಡಾ.ಬನದೇಶ್ವರ, ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ.ಗಂಗಾಧರ್, ಡಾ.ಶಿವಕುಮಾರ್, ಡಾ.ನಾಗರಾಜ ಮಲ್ಕಾಪೂರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸೋಮಪ್ಪ ಸೇರಿದಂತೆ ಸಿಬ್ಬಂದಿಯವರು ಹಾಗೂ ಸಾರ್ವಜನಿಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News