Raichur | ಬಾಕಿ ವೇತನ ಪಾವತಿಗೆ ಆಗ್ರಹಿಸಿ ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಪ್ರತಿಭಟನೆ
ರಾಯಚೂರು: ಜಿಲ್ಲೆಯ ಆರೋಗ್ಯ ಇಲಾಖೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರಿಗೆ ಬಾಕಿ ಇರುವ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿ ರಾಯಚೂರು ಜಿಲ್ಲಾ ಆರೋಗ್ಯ ಇಲಾಖೆ ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಸಂಘ ಹಾಗೂ ಟಿಯುಸಿಐ ಜಿಲ್ಲಾ ಸಮಿತಿ ವತಿಯಿಂದ ಶುಕ್ರವಾರ ಟಿಪ್ಪು ಸುಲ್ತಾನ್ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯಲ್ಲಿ ನೂರಾರು ಹೊರಗುತ್ತಿಗೆ ನೌಕರರು ಹಲವು ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸಕ್ತ ಸಾಲಿನ ಗುತ್ತಿಗೆ ಪಡೆದಿರುವ ಮೆ. ಪಾಪ್ಯುಲರ್ ಎಂಜಿನಿಯರಿಂಗ್ ಏಜೆನ್ಸಿ, ಬಳ್ಳಾರಿ, ಗುತ್ತಿಗೆ ಒಪ್ಪಂದದ ಷರತ್ತುಗಳನ್ನು ಪಾಲಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಾರ್ಮಿಕರ ವೇತನ ಪಾವತಿ ನಿಯಮದಂತೆ ಪ್ರತಿ ತಿಂಗಳ 7ನೇ ತಾರೀಖಿನೊಳಗೆ ವೇತನ ಪಾವತಿಸಬೇಕಾಗಿದ್ದರೂ, ನೌಕರರಿಗೆ ಸಮರ್ಪಕವಾಗಿ ವೇತನ ಪಾವತಿಯಾಗುತ್ತಿಲ್ಲ. ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ವೇತನ ಪಾವತಿಸುವಂತೆ ಒತ್ತಾಯಿಸಲಾಗಿತ್ತು. ಅಧಿಕಾರಿಗಳು ವೇತನ ಪಾವತಿಸುವುದಾಗಿ ಭರವಸೆ ನೀಡಿದ್ದರೂ, ಇದುವರೆಗೆ ಬಾಕಿ ವೇತನ ಪಾವತಿಯಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಆಗಸ್ಟ್ 5ರೊಳಗೆ ಎಲ್ಲ ಅರ್ಹ ನೌಕರರಿಗೆ ಸಂಪೂರ್ಣ ಬಾಕಿ ವೇತನ ಪಾವತಿಸಬೇಕು ಎಂದು ಈ ಹಿಂದೆ ಒತ್ತಾಯಿಸಲಾಗಿತ್ತು. ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಆ.14ರಂದು ಪ್ರತಿಭಟನೆ ನಡೆಸುವುದಾಗಿ ಸಂಘದ ವತಿಯಿಂದ ಎಚ್ಚರಿಕೆ ನೀಡಲಾಗಿತ್ತು. ಅದರಂತೆ ಶುಕ್ರವಾರ ಪ್ರತಿಭಟನೆ ನಡೆಸಿ, ಬಾಕಿ ವೇತನವನ್ನು ತಕ್ಷಣ ಪಾವತಿಸುವಂತೆ ಆಗ್ರಹಿಸಲಾಯಿತು.
ಸಂದರ್ಭದಲ್ಲಿ ಟಿಯುಸಿಐ ಜಿಲ್ಲಾಧ್ಯಕ್ಷ ಜಿ. ಅಡವಿರಾವ್, ಎಂ.ನಿರಂಜನ್ ಕುಮಾರ್, ಮಣಿ, ನಿಸರ್ಗ, ನರಸಪ್ಪ, ರಾಯಚೂರು ಶಂಕ್ರಪ್ಪ ಗುಂಡಸಾಗರ್, ಉಪಾಧ್ಯಕ್ಷರಾದ ಆಂಜನೇಯ ಅರಕೇರಿ, ದ್ಯಾಮಣ್ಣ ನಾಗರಾಳ, ಮಲ್ಲಿಕಾರ್ಜುನ, ಜಗದೀಶ, ಶರಣಬಸವ, ದೇವರಾಜ, ನಾಗಯ್ಯ ಚಿಕ್ಕಮಠ, ಫರ್ಝಾನ ಬೇಗಂ, ಚೈತ್ರ, ಗೌರಮ್ಮ, ಎಂ. ಗುಂಡಮ್ಮ, ಯಲ್ಲಪ್ಪ ಆನ್ವರಿ, ವೆಂಕಟೇಶ ಸೇರಿದಂತೆ ಹಲವು ನೌಕರರು ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.