ರಾಯಚೂರು: ಗೃಹ ಸಚಿವರ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಖಂಡಿಸಿ ಜೆಡಿಎಸ್ ಮುಖಂಡರಿಂದ ಪ್ರತಿಭಟನೆ
ರಾಯಚೂರು: ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕರಾಗಿರುವ ಹೆಚ್ ಡಿ ಕುಮಾರ ಸ್ವಾಮಿ ಅವರ ಕುರಿತು ಮಾತನಾಡುವಾಗ 'ಹಳ್ಳಿ ಗುಗ್ಗು' ಎಂದು ಸಂಬೋಧಿಸಿ ಹಳ್ಳಿ ಜನರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.
ಎತ್ತುಗಳ ಸಮೇತ ಬಂಡಿಯೊಂದಿಗೆ ಆಗಮಿಸಿದ ಜೆಡಿಎಸ್ ಮುಖಂಡರು, ಕಾರ್ಯಕರ್ತರು 'ಗೃಹ ಸಚಿವರೆ ಹೌದು ನಾವು ಹಳ್ಳಿ ಗುಗ್ಗು ಏನಿವಾಗ?' ಎಂದು ಪೋಸ್ಟರ್ ಹಿಡಿದು ಪ್ರತಿಭಟಿಸಿದರು.
ಇದೇ ವೇಳೆ ರಾಜ್ಯ ಸರ್ಕಾರ ಹಾಲಿನ ದರ, ಬಸ್ ಟಿಕೆಟ್ ದರ ಹೆಚ್ಚಳ ಮಾಡಿದ್ದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಸೇರಿದಂತೆ ನಾವೆಲ್ಲಾ ಹಳ್ಳಿ ಜನ ನಮ್ಮನ್ನು ವಿಲೇಜ್ ಈಡಿಯಟ್ ಎಂದು ಹೇಳಿ ಅವಮಾನಿಸಿದ್ದೀರಿ ಅದರ ಬದಲು ಜಾಣರಾದ ನೀವು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರಿಗೆ ದರ ಕಡಿಮೆ ಮಾಡಿ ಅನುಕೂಲ ಮಾಡಲು ಹೇಳಿ ಎಂದು ವ್ಯಂಗ್ಯವಾಡಿದರು.
ಪ್ರತಿಭಟನಾ ನಿರತ ಜೆಡಿಎಸ್ ಕಾರ್ಯಾಧ್ಯಕ್ಷ ಎನ್ ಶಿವಶಂಕರ್ ವಕೀಲ ಮಾತನಾಡಿ, ದೇಶದಲ್ಲಿ ಶೇಕಡಾ 75 ರಷ್ಟು ಜನ ಹಳ್ಳಿ ಯಲ್ಲಿ ವಾಸವಾಗಿದ್ದಾರೆ, ಸಚಿವ ಪ್ರಿಯಾಂಕ ಖರ್ಗೆ ಅವರು ಕುಮಾರಸ್ವಾಮಿ ಬಗ್ಗೆ ಮಾತನಾಡುವಾಗ ಹಳ್ಳಿ ಗುಗ್ಗು,ವಿಲೇಜ್ ಇಡಿಯಟ್ ಎಂದು ಇಡೀ ಹಳ್ಳಿ ಜನರಿಗೆ ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಕುಮಾರಸ್ವಾಮಿ ಹಾಗು ಮಾಜಿ ಪ್ರಧಾನಿ ದೇವೆಗೌಡರು ಹಳ್ಳಿಯಿಂದ ನೀರಾವರಿ ಸೌಲಭ್ಯ ಕಲ್ಪಿಸಿ ಅನುಕೂಲ ಮಾಡಿದ್ದಾರೆ ತಾವು ಅವರ ಬಗ್ಗೆ ಅವಮಾನ ಮಾಡಿ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ ಕೂಡಲೇ ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಮುಖಂಡರಾದ ಲಕ್ಷ್ಮೀಪತಿ ಗಾಣಧಾಳ,ನರಸಿಂಹ ನಾಯಕ, ನಾಗರಾಜ ಗೌಡ, ಜಂಬುನಾಥ ಯಾದವ್ ಇದ್ದರು.