Raichur | ತಿಡಿಗೋಳ ದಲಿತರ ಮೇಲಿನ ಹಲ್ಲೆ ಖಂಡಿಸಿ ನ. 8ರಂದು ‘ತಿಡಿಗೋಳ ಚಲೋ’ ಬೈಕ್ ರ‍್ಯಾಲಿ : ಎಸ್.ಮಾರೆಪ್ಪ
ರಾಯಚೂರು: ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ದಲಿತರ ಮೇಲೆ ನಡೆದ ಸಾಮೂಹಿಕ ಹಲ್ಲೆ ಪ್ರಕರಣವನ್ನು ಖಂಡಿಸಿ, ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬಿ ನೈತಿಕ ಬೆಂಬಲ ಸೂಚಿಸುವ ಉದ್ದೇಶದಿಂದ ನವೆಂಬರ್ 8ರಂದು ‘ತಿಡಿಗೋಳ ಚಲೋ’ ಬೈಕ್ ರ‍್ಯಾಲಿ ನಡೆಸಲಾಗುವುದು ಎಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಎಸ್.ಮಾರೆಪ್ಪ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 18ರಂದು ತಿಡಿಗೋಳ ಗ್ರಾಮದಲ್ಲಿ ನಡೆದ ಆಂಜನೇಯ ಸ್ವಾಮಿ ಜಾತ್ರೆಯಲ್ಲಿ ಪರಿಶಿಷ್ಟ ಜಾತಿಯ ಯುವಕರು ಪಾಲ್ಗೊಂಡಿದ್ದಕ್ಕೆ ಸವರ್ಣೀಯರ ತಂಡವೊಂದು ಮನಸೋ ಇಚ್ಛೆ ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿದೆ ಎಂದು ಆರೋಪಿಸಿದರು. ಘಟನೆ ನಡೆದು ಹಲವು ದಿನಗಳಾದರೂ ಎಲ್ಲ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಗ್ರಾಮದಲ್ಲಿ ಭಯದ ವಾತಾವರಣವಿದ್ದು, ಸಮಾಜದ ಜನರಲ್ಲಿ ನೈತಿಕ ಸ್ಥೈರ್ಯ ತುಂಬಲು ಬೈಕ್ ರ‍್ಯಾಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಿಂಧನೂರು ಡಿವೈಎಸ್‌ಪಿ ಚಂದ್ರಶೇಖರ ಅವರು ರ‍್ಯಾಲಿಗೆ ಅನುಮತಿ ನಿರಾಕರಿಸಿದ್ದರೂ ಅದನ್ನು ನಡೆಸಲಾಗುವುದು. ದಲಿತರು ರ‍್ಯಾಲಿ ನಡೆಸಿದರೆ ಪ್ರತಿಯಾಗಿ ಹೋರಾಟ ನಡೆಸುತ್ತಾರೆ ಎಂಬ ಕಾರಣ ನೀಡಿ ಅನುಮತಿ ನಿರಾಕರಿಸುವುದು ಸರಿಯಲ್ಲ. ಕಾನೂನು ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳುವ ಅಧಿಕಾರ ಪೊಲೀಸರಿಗಿದೆ. ಆದರೆ, ಪ್ರತಿಭಟನಾಕಾರರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಪೊಲೀಸರು ಅನುಮತಿ ನೀಡದಿದ್ದರೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಘಟನೆ ನಡೆದು ಹಲವು ದಿನಗಳಾದರೂ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಕಂದಾಯ ವ್ಯಾಪ್ತಿಗೆ ಬರುವ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಅವರು ಸೌಜನ್ಯಕ್ಕಾದರೂ ಸಂತ್ರಸ್ತರನ್ನು ಭೇಟಿ ಮಾಡಿಲ್ಲ. ಸಾಮಾಜಿಕ ಬಹಿಷ್ಕಾರದಂತಹ ಘಟನೆಗಳು ನಡೆದಿದ್ದರೂ ಶಾಸಕರು ಸ್ಪಂದಿಸದಿರುವುದು ಖಂಡನೀಯ ಎಂದು ಮಾರೆಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರವೀಂದ್ರನಾಥ ಪಟ್ಟಿಮಾತನಾಡಿದರು. ಹೇಮರಾಜ ಅಸ್ಕಿಹಾಳ, ಎಂ.ಆರ್. ಭೇರಿ, ಶರಣಪ್ಪ ದಿನ್ನಿ, ಭೀಮಣ್ಣ ಮರ್ಚಟ್ಹಾಳ, ಜೈಭೀಮ ವಲ್ಲಭ್ ಹಾಗೂ ಲಕ್ಷ್ಮಣ ಕಲ್ಲೂರು ಉಪಸ್ಥಿತರಿದ್ದರು.