ರಾಯಚೂರು | ವಿಜೃಂಭಣೆಯಿಂದ ನಡೆದ ಮಾನಸಗಲ್ ಲಕ್ಷ್ಮೀ ರಂಗನಾಥ ಜಾತ್ರೆ
ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಅತಿ ದೊಡ್ಡ ಜಾತ್ರೆ ಮಾನಸಗಲ್ ಗ್ರಾಮದ ಲಕ್ಷ್ಮಿ ರಂಗನಾಥ ಸ್ವಾಮಿಯ ರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ರಂಗನಾಥ ಸ್ವಾಮಿ ವಿಗ್ರಹವನ್ನು ಹೂವು, ಚಿನ್ನದ ಆಭರಣಗಳಿಂದ ಅಲಂಕರಿಸಿದ್ದರು. ರಂಗನಾಥ ಸ್ವಾಮಿ ರಥಕ್ಕೆ ಹಾರ, ಎಲೆ, ಛತ್ರಿ, ಚಾಮರ, ದೀಪಗಳಿಂದ ಅಲಂಕರಿಸಿದ್ದರು. ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಬಳಿಕ ದೊಡ್ಡ ಹೂವಿನ ಹಾರಗಳಿಂದ ಅಲಂಕರಿಸಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಂಗನಾಥ ಸ್ವಾಮಿ ಪೂಜಾರಿ ರಥ ಏರುತ್ತಿದ್ದಂತೆ ಭಕ್ತರು ಬಾಳೆಹಣ್ಣು ತೂರಿ ಭಕ್ತಿ ಸಮರ್ಪಿಸಿದರು. ಭಕ್ತರು ಪೂರ್ವಾಭಿಮುಖವಾಗಿ ರಥ ಎಳೆದರು.
ರಥೋತ್ಸವದ ಅಂಗವಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ಇತ್ತು. ಬೆಳಿಗ್ಗೆಯಿಂದಲೇ ಹೊಸಬಟ್ಟೆಗಳನ್ನು ಧರಿಸಿ ಮಹಿಳೆಯರು, ಮಕ್ಕಳು ಮನೆಗಳಲ್ಲಿ ಸಂಭ್ರಮದಿಂದ ಸಂಚರಿಸುವ ದೃಶ್ಯ ಸಾಮಾನ್ಯವಾಗಿತ್ತು. ಎಲ್ಲ ಮನೆಗಳ ಮುಂದೆ ಮಾವಿನ ತೋರಣ, ಬಾಳೆಕಂದುಗಳನ್ನು ಕಟ್ಟಿ ಸಜ್ಜುಗೊಳಿಸಲಾಗಿತ್ತು.
ಬೆಂಗಳೂರು ಪುಣೆ ನಗರಗಳಿಗೆ ದುಡಿಯಲು ಬೇರೆ ಊರಿಗೆ ಹೋಗಿದ್ದ ಜನರು ಜಾತ್ರೆಯಲ್ಲಿ ಭಾಗಿಯಾಗಿದ್ದರು. ಸುರಪುರ, ಶಹಾಪುರ, ಸಿರವಾರ, ದೇವದುರ್ಗ, ರಾಯಚೂರು ಸೇರಿದಂತೆ ಅಂಧ್ರ, ತೆಲಂಗಾಣದಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಒಂದು ತಿಂಗಳ ಕಾಲ ಜಾತ್ರೆ ನಡೆಯುತ್ತದೆ. ಸುಮಾರು 20 ಸಾವಿರಕ್ಕೂ ಹೆಚ್ಚು ಜಾನುವಾರಗಳ ಜಾತ್ರೆಗೆ ಬರುವ ನಿರೀಕ್ಷೆ ಇದೆ ಎಂದು ರಂಗನಾಥ ಪೂಜಾರಿ ತಿಳಿಸಿದರು.