ರಾಯಚೂರು: ತೀವ್ರ ಬರ ಹಾಗೂ ನೈಸರ್ಗಿಕ ವಿಕೋಪಗಳಿಂದ ಕಂಗಾಲಾಗಿರುವ ಅನ್ನದಾತರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಮತ್ತು ಕೃಷಿ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಶಿವಸೇನಾ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಆರಂಭವಾದ ಟ್ರ್ಯಾಕ್ಟರ್ ಜಾಥಾ ಹಾಗೂ ಪಾದಯಾತ್ರೆಯು ಪ್ರಮುಖ ಮಾರ್ಗಗಳ ಮೂಲಕ ಬಸವೇಶ್ವರ ವೃತ್ತವನ್ನು ತಲುಪಿತು. ಈ ವೇಳೆ ರಸ್ತೆ ಮಧ್ಯೆ ಮಾನವ ಸರಪಳಿ ರಚಿಸಿದ ಪ್ರತಿಭಟನಾಕಾರರು, ರೈತರು ಮತ್ತು ಕೃಷಿ ಕಾರ್ಮಿಕರ ಸಮಸ್ಯೆಗಳನ್ನು ಕಡೆಗಣಿಸುತ್ತಿರುವ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಮಳೆ ಕೊರತೆಯಿಂದ ಬೆಳೆ ಹಾನಿಗೊಳಗಾದ ಪ್ರದೇಶಗಳಲ್ಲಿ ಕಂದಾಯ ಇಲಾಖೆ ವೈಜ್ಞಾನಿಕ ಸಮೀಕ್ಷೆ ನಡೆಸಿ, ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂ. ತುರ್ತು ಪರಿಹಾರ ಬಿಡುಗಡೆ ಮಾಡಬೇಕು. ಸಂಕಷ್ಟದಲ್ಲಿರುವ ಎಲ್ಲ ಅರ್ಹ ರೈತರ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ತುಂಗಭದ್ರಾ ಎಡದಂಡೆ ಹಾಗೂ ನಾರಾಯಣಪುರ ಬಲದಂಡೆ ಕಾಲುವೆಗಳ ಹೂಳೆತ್ತುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಕೊನೆಯ ಭಾಗದ ಜಮೀನುಗಳಿಗೂ ಸಮರ್ಪಕವಾಗಿ ನೀರು ಹರಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ ಕನಿಷ್ಠ 12 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಸಬೇಕು. ಸಕಾಲದಲ್ಲಿ ಗುಣಮಟ್ಟದ ಬೀಜ ಹಾಗೂ ಗೊಬ್ಬರ ವಿತರಿಸಬೇಕು ಎಂದು ಆಗ್ರಹಿಸಿದರು.

ಭತ್ತ, ಹತ್ತಿ, ತೊಗರಿ ಹಾಗೂ ಮೆಣಸಿನಕಾಯಿ ಸೇರಿದಂತೆ ಪ್ರಮುಖ ಬೆಳೆಗಳಿಗೆ ನ್ಯಾಯಯುತ ಬೆಂಬಲ ಬೆಲೆ ನಿಗದಿಪಡಿಸಬೇಕು. ಸರ್ಕಾರಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿದ ಕೃಷಿ ಉತ್ಪನ್ನಗಳ ಬಾಕಿ ಹಣ ಹಾಗೂ ಬೆಳೆ ವಿಮೆ ಮೊತ್ತವನ್ನು ತಕ್ಷಣ ರೈತರ ಖಾತೆಗಳಿಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾಮೀಣ ಭಾಗದಲ್ಲಿ ಮೇವಿನ ಕೊರತೆಯನ್ನು ನೀಗಿಸಲು ತುರ್ತಾಗಿ ಸರ್ಕಾರಿ ಗೋಶಾಲೆಗಳನ್ನು ತೆರೆಯಬೇಕು. ಕೃಷಿ ಕಾರ್ಮಿಕರಿಗೆ ಮನರೇಗಾ ಯೋಜನೆಯಡಿ ನಿರಂತರ ಕೆಲಸ ಒದಗಿಸಿ, ಸಕಾಲದಲ್ಲಿ ಕೂಲಿ ಪಾವತಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಡಳಿತವು ರೈತ ಮುಖಂಡರು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ತುರ್ತು ಸಭೆ ಕರೆದು, ರೈತರ ಎಲ್ಲ ಬೇಡಿಕೆಗಳನ್ನು ಕಾಲಮಿತಿಯೊಳಗೆ ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಶಿವಸೇನೆ ರಾಯಚೂರು ಜಿಲ್ಲಾಧ್ಯಕ್ಷ ರಾಜಚಂದ್ರ ರಾಮನಗೌಡ, ಶಿವಸೇನೆ ರಾಯಚೂರು ಗ್ರಾಮೀಣ ಅಧ್ಯಕ್ಷ ಸಂತೋಷ್ ಗೌಡ ಗುಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭು ಮಡಿವಾಳ, ಶಿವಸೇನೆ ಯುವ ಘಟಕದ ಜಿಲ್ಲಾಧ್ಯಕ್ಷ ಹರೀಶ್ ಮಡಿವಾಳ, ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ, ಶಿವಸೇನೆ ಆಟೋ ಅಸೋಸಿಯೇಷನ್ ಯುವ ಘಟಕದ ಅಧ್ಯಕ್ಷ ಬಾಬು ಗಣೇಶ್ ಹಾಗೂ ಭಾರತೀಯ ಕೃಷಿಕ ಸಮಾಜದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಾಜಿದ್ ಹುಸೇನ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಮತ್ತು ನೂರಾರು ರೈತರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor