×
Ad

ರಾಯಚೂರು ಮಹಾನಗರ ಪಾಲಿಕೆಯಿಂದ ವಿವಿಧೆಡೆ ದಾಳಿ : 3 ಟನ್ ಪ್ಲಾಸ್ಟಿಕ್ ಪೌಚ್ ವಶಕ್ಕೆ

Update: 2025-05-17 16:38 IST

ರಾಯಚೂರು : ರಾಯಚೂರು ಮಹಾನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮೇ 17ರಂದು ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು 3 ಟನ್ ಪ್ಲಾಸ್ಟಿಕ್ ಪೌಚ್ ಗಳನ್ನು ವಶಕ್ಕೆ ಪಡೆದುಕೊಂಡರು.

ಮಹಾನಗರ ಪಾಲಿಕೆಯ ಪರಿಸರ ಇಂಜಿನಿಯರ್ ಮತ್ತು ನೈರ್ಮಲ್ಯ ನಿರೀಕ್ಷಕರು ಹಾಗೂ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ ವೇಳೆಯಲ್ಲಿ, ಕೆಲವು ಅಂಗಡಿಗಳ ಮಾಲಕರಿಗೆ ಮತ್ತು ಕಾರ್ಖಾನೆಗಳಿಗೆ ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಪ್ಲಾಸ್ಟಿಕ್ ನಿಷೇಧ ಇದ್ದರು ಸಹ ಅನಧೀಕೃತವಾಗಿ ನಿರ್ಮಾಣ ಮತ್ತು ಮಾರಾಟ ಮಾಡುವುದನ್ನು ಕಂಡ ಅಧಿಕಾರಿಗಳು, ಕೆಲವು ಅಂಗಡಿಗಳನ್ನು ಸೀಝ್‌ ಮಾಡಿ ಎಚ್ಚರಿಕೆ ನೀಡಿದರು.

ಇದೆ ರೀತಿ ತಾವು ಮನಬಂದಂತೆ ವರ್ತಿಸಿ ಕಾಯಿದೆ ಉಲ್ಲಂಘಿಸಿ ಮತ್ತೆ ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿದಲ್ಲಿ ಕಠಿಣ ಕಾನೂನುಕ್ರಮ ಜರುಗಿಸಲಾಗುವುದು ಎಂದು ಆಧಿಕಾರಿಗಳು, ಕಾರ್ಖಾನೆ ಮಾಲಕರು ಮತ್ತು ಅಂಗಡಿಗಳ ಮಾಲಕರಿಗೆ ಎಚ್ಚರಿಕೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಿವೆ. ಆದಾಗ್ಯೂ ರಾಯಚೂರು ನಗರದಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಪಡೆಯದೆ ನೀರಿನ ಪ್ಲಾಸ್ಟಿಕ್ ಪೌಚ್‌ಗಳು ಮತ್ತು ಪೆಟ್ ಬಾಟಲ್ ಹಾಗೂ ಎಲ್ಲಾ ಅನ್ ಬ್ರಾಂಡೆಡ್ ಕಾರ್ಬೋನೇಟ್ ವಾಟರನ್ನು ತಯಾರಿಸುತ್ತಿರುವುದು ಮಹಾನಗರ ಪಾಲಿಕೆಯ ಗಮನಕ್ಕೆ ಬಂದಿದೆ. ಅಂತಹ ಕಾರ್ಖಾನೆಗಳು ಕೂಡಲೇ ಎಚ್ಚೆತ್ತುಕೊಂಡು ನಿಷೇಧಿತ ಪ್ಲಾಸ್ಟಿಕ್ ನಿರ್ಮಾಣ ಮತ್ತು ಮಾರಾಟವನ್ನು ಕೈಬಿಡಬೇಕು ಎಂದು ದಾಳಿ ವೇಳೆ ಅಧಿಕಾರಿಗಳು ತಿಳಿವಳಿಕೆ ನೀಡಿದರು.

ಸಾರ್ವಜನಿಕರಿಗೆ ಸೂಚನೆ :

ಲಾಭವನ್ನೇ ಮುಖ್ಯವಾಗಿಸಿಕೊಂಡು ಕೆಲವು ಕಾರ್ಖಾನೆಗಳು ಮತ್ತು ಅಂಗಡಿಗಳ ಮಾಲಕರು ನಿಷೇಧಿತ ಪ್ಲಾಸ್ಟಿಕ್‌ ಬಾಟಲ್ ಮತ್ತು ಪೌಚ್‌ನಲ್ಲಿ ನೀರು ಶೇಖರಿಸಿ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ನೀರಿನ ಸ್ಯಾಂಪಲ್ ಪರೀಕ್ಷಿಸದೇ ಹಾಗೂ ನೀರಿನ ಗುಣಮಟ್ಟದ ಪರಿಶೀಲಿಸದೇ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಸಾರ್ವಜನಿಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಸಾರ್ವಜನಿಕರು ಬಾಟಲಿಯ ನೀರು ಬಳಸಬೇಕು. ಇನ್ನುಳಿದಂತೆ ಅನಧೀಕೃತ ಕಂಪನಿಗಳ ಬಾಟಲಿ ನೀರನ್ನು ಬಳಸಕೂಡದು ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News