Raichur | ದೇಶದ ಅಭಿವೃದ್ಧಿಗೆ ಸಾರ್ವಜನಿಕರ ಭಾಗವಹಿಸುವಿಕೆ ಅತ್ಯಗತ್ಯ: ಡಿಸಿ ಪೂವಿತಾ ಎಸ್.
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ, ಯುವ ಸಂಸತ್ತು ಕಾರ್ಯಕ್ರಮ
ರಾಯಚೂರು: ದೇಶದ ಅಭಿವೃದ್ಧಿ ಮತ್ತು ಸುಶಾಸನಕ್ಕೆ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಹೇಳಿದರು.
ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ತಾಲೂಕು ಮತ್ತು ಜಿಲ್ಲಾ ಮಟ್ಟದ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವುದು, ಮಾನವ ಹಕ್ಕುಗಳನ್ನು ಉತ್ತೇಜಿಸುವುದು ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವುದೇ ಪ್ರಜಾಪ್ರಭುತ್ವದ ಪ್ರಮುಖ ಉದ್ದೇಶವಾಗಿದೆ. ಚುನಾಯಿತ ಪ್ರತಿನಿಧಿಗಳಷ್ಟೇ ಅಲ್ಲ, ಅಧಿಕಾರಿಗಳೂ ಜನರ ಬಳಿಗೆ ತೆರಳಿ ಅವರ ಅಭಿಪ್ರಾಯ ಹಾಗೂ ಮಾಹಿತಿಯನ್ನು ಪಡೆದು ಆಡಳಿತ ನಡೆಸುವುದು ಅಗತ್ಯ ಎಂದು ಹೇಳಿದರು.
1950ರ ಜನವರಿ 26ರಂದು ಭಾರತ ಸಂವಿಧಾನ ಜಾರಿಯಾದ ನಂತರ ದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪುಗೊಂಡಿತು. ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರು ನಾಗರಿಕರ ಹಕ್ಕು, ಕರ್ತವ್ಯ ಹಾಗೂ ಸಾಮಾಜಿಕ ನ್ಯಾಯವನ್ನು ಒಳಗೊಂಡ ದೂರದೃಷ್ಟಿಯ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.
ಸಂವಿಧಾನದ ಪೀಠಿಕೆ “ಭಾರತೀಯರಾದ ನಾವು” ಎಂಬ ಪದಗಳಿಂದ ಆರಂಭವಾಗುತ್ತದೆ. ಇದು ಪ್ರತಿಯೊಬ್ಬ ನಾಗರಿಕನಿಗೂ ಸಾರ್ವಜನಿಕ ಜವಾಬ್ದಾರಿ ಇದೆ ಎಂಬ ಸಂದೇಶ ನೀಡುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕುಮಾರ್ ಕಾಂದೂ ಮಾತನಾಡಿ, ಭಾರತದ ಸಂವಿಧಾನವು ನಾಗರಿಕರಿಗೆ ಮೂಲಭೂತ ಹಕ್ಕುಗಳು, ಕರ್ತವ್ಯಗಳು ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಿರುವ ಶ್ರೇಷ್ಠ ದಾಖಲೆ ಎಂದರು. ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆ ಅಲ್ಲ; ನಾಗರಿಕರ ಪಾಲ್ಗೊಳ್ಳುವಿಕೆ, ಪ್ರಶ್ನಿಸುವ ಹಕ್ಕು ಮತ್ತು ಅಭಿಪ್ರಾಯ ಸ್ವಾತಂತ್ರ್ಯವೂ ಅದರ ಪ್ರಮುಖ ಅಂಶಗಳಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಬಳಿಕ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಜೆ.ಎಸ್. ಪಾಟೀಲ್ ಅವರು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹಾಪಾತ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ತಹಶೀಲ್ದಾರ್ ಸುರೇಶ್ ವರ್ಮಾ, ಡಿಡಿಪಿಐ ಮಲ್ಲಿಕಾರ್ಜುನ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೃಷ್ಣ ಶಾವಂತಗೇರಾ, ವಕೀಲರ ಸಂಘದ ಅಧ್ಯಕ್ಷ ಎನ್. ಶಿವಶಂಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.