ರಾಯಚೂರು: ಪಂಚ ಗ್ಯಾರಂಟಿ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು. ಯೋಜನೆಗಳ ದುರುಪಯೋಗವಾಗದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಅವರಿಗೆ ಬಸ್ ನಿಲ್ದಾಣಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಬಸ್ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಶೌಚಾಲಯಗಳ ಸ್ವಚ್ಛತೆ ಹಾಗೂ ತಾಯಂದಿರು ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಆಯಾ ತಾಲ್ಲೂಕಿಗೆ ಸಂಬಂಧಿಸಿದ ಗ್ಯಾರಂಟಿ ಯೋಜನೆಗಳ ಪ್ರತಿನಿಧಿಗಳನ್ನು ಕರೆದು ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಬಸ್ ನಿಲ್ದಾಣಗಳಲ್ಲಿ ಕೆಲಸ ನಿರ್ವಹಿಸಲು ಟೆಂಡರ್ ಪಡೆದವರು ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಅವರ ಟೆಂಡರ್ ರದ್ದುಪಡಿಸಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯ ಎಂಟು ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳು, ನಗರ ಪ್ರದೇಶಗಳು ಹಾಗೂ ಇಲಾಖಾವಾರು ಅಧಿಕಾರಿಗಳು ಯೋಜನೆಗಳ ಸಂಪೂರ್ಣ ಮಾಹಿತಿ ಹೊಂದಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ಸಮುದಾಯಗಳ ಫಲಾನುಭವಿಗಳ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಐದು ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಯೋಜನೆಗಳ ಮಾಹಿತಿಯನ್ನು ಸಮಿತಿಯ ಸದಸ್ಯರಿಗೆ ತಿಳಿಸಿ, ಅವರ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂಬುದು ಮುಖ್ಯಮಂತ್ರಿಗಳ ಆದೇಶವಾಗಿದೆ. ಇದನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.

ಎಲ್ಲರ ಸಹಕಾರದಿಂದ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ. ರಾಯಚೂರು ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಜನರು ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಒಟ್ಟು 4,61,629 ಫಲಾನುಭವಿಗಳು ನೋಂದಣಿಯಾಗಿದ್ದು, ಅವರಲ್ಲಿ 4,36,460 ಫಲಾನುಭವಿಗಳಿಗೆ ತಲಾ 2 ಸಾವಿರ ರೂ. ನಂತೆ 2026ರ ಜುಲೈ ಅಂತ್ಯದವರೆಗೆ ಒಟ್ಟು 2,744.81 ಕೋಟಿ ರೂ. ಪಾವತಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ 4,57,145 ಫಲಾನುಭವಿಗಳು ನೋಂದಣಿಯಾಗಿದ್ದು, ಈವರೆಗೆ ಒಟ್ಟು 806.22 ಕೋಟಿ ರೂ. ವೆಚ್ಚ ಭರಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 3,14,741 ಫಲಾನುಭವಿಗಳು ನೋಂದಣಿಯಾಗಿದ್ದು, ಇದುವರೆಗೆ 557.31 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ವಯಸ್ಕರು ಹಾಗೂ ಮಕ್ಕಳು ಸೇರಿದಂತೆ ಒಟ್ಟು 14.59 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದು, ಇದಕ್ಕಾಗಿ 618.03 ಕೋಟಿ ರೂ. ವೆಚ್ಚ ಭರಿಸಲಾಗಿದೆ. ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಪದವಿ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದ 27,876 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಈವರೆಗೆ 78.87 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ನೀಡಿರುವ ಸೂಚನೆಗಳನ್ನು ಎಲ್ಲ ಅಧಿಕಾರಿಗಳು ಪಾಲಿಸಬೇಕು. ಅದರ ಅನುಪಾಲನಾ ವರದಿಯನ್ನು ತಮಗೆ ಸಲ್ಲಿಸಬೇಕು. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾಗಿರುವುದರಿಂದ ಎಲ್ಲರೂ ಹೆಚ್ಚಿನ ಆದ್ಯತೆ ನೀಡಿ ಕಾರ್ಯನಿರ್ವಹಿಸಬೇಕು. ಬಾಕಿ ಉಳಿದಿರುವ ಕೆಲವು ತಿಂಗಳ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಪಾಮಯ್ಯ ಮುರಾಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಡಾ. ಟಿ. ರೋಣಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ನಾಗೇಂದ್ರ, ರಾಮಣ್ಣ ಇರಬಗೇರಾ, ಗಫೂರ್ ಸಾಬ್, ಹನುಮಂತಪ್ಪ ಜಾಲಿಬೆಂಚಿ, ಶೇಖರಗೌಡ ತುರವಿಹಾಳ, ಪ್ರಾಧಿಕಾರದ ಸದಸ್ಯರಾದ ಬಿ.ಕೆ. ಅಂಬರೇಷಪ್ಪ, ಪವನ ಕಿಶೋರ್ ಪಾಟೀಲ, ಲಕ್ಷ್ಮಣ, ಮಹಬೂಬ್ ಸಾಬ್, ಅನಿಲ ಕುಮಾರ್, ವೆಂಕಟೇಶ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor