ರಾಯಚೂರು: ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಿಗೆ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು ಸೇವೆ ದೊರೆತಿರುವುದು ಈ ಭಾಗದ ಜನರಿಗೆ ಸಂತಸದ ಸಂಗತಿಯಾಗಿದೆ. ಬಹುದಿನಗಳಿಂದ ಜನರು ನಡೆಸುತ್ತಿದ್ದ ಹೋರಾಟ ಹಾಗೂ ಬೇಡಿಕೆಗೆ ಕೊನೆಗೂ ಜಯ ಸಿಕ್ಕಿದೆ ಎಂದು ಬಾಬುರಾವ್ ಹೇಳಿದರು.

ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲಿನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ರೈಲು ಗಂಟೆಗೆ 180 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಉನ್ನತ ದರ್ಜೆಯ ಹಾಗೂ ಹೈ ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡಿದೆ. ಉದ್ಯಾನ್ ಎಕ್ಸ್‌ಪ್ರೆಸ್ ರೈಲು ಪ್ರಯಾಣ ಪೂರ್ಣಗೊಳಿಸಲು ಸುಮಾರು 24 ಗಂಟೆಗಳನ್ನು ತೆಗೆದುಕೊಂಡರೆ, ವಂದೇ ಭಾರತ್ ಸ್ಲೀಪರ್ ರೈಲು ಸುಮಾರು 16 ಗಂಟೆಗಳಲ್ಲಿ ಪ್ರಯಾಣ ಮುಗಿಸಲಿದೆ. ಇದರಿಂದ ಪ್ರಯಾಣಿಕರಿಗೆ ಸಮಯ ಉಳಿತಾಯವಾಗುವುದರ ಜೊತೆಗೆ ಆರಾಮದಾಯಕ ಪ್ರಯಾಣದ ಅನುಕೂಲವೂ ದೊರೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಕಲ್ಯಾಣ ಕರ್ನಾಟಕದ ಜನರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.

ಮಾಜಿ ಸಂಸದ ರಾಜಾ ಅಮರೇಶ್ ನಾಯಕ ಮಾತನಾಡಿ, ಈ ರೈಲು ಸೇವೆಯಿಂದ ಕಲ್ಯಾಣ ಕರ್ನಾಟಕ ಭಾಗದ ರೈಲ್ವೆ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ. ವ್ಯಾಪಾರ, ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೂ ಇದು ಸಹಕಾರಿಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದೇವದುರ್ಗ ಶಾಸಕಿ ಕರೆಮ್ಮ ಜಿ. ನಾಯಕ, ಸಿಕಂದರಾಬಾದ್‌ನ ಡಿಆರ್‌ಎಂ ಗೋಪಾಲ ಕೃಷ್ಣ, ಸ್ಟೇಷನ್ ಮಾಸ್ಟರ್ ಅಶೋಕ ಕುಮಾರ್ ಮೀನಾ, ಓಂ ಪ್ರಕಾಶ್, ಹೇಮರಾಜ್, ಬಸವರಾಜ್, ಮಾರೆಪ್ಪ, ಚಂದ್ರು, ಚಂದ್ರಶೇಖರ್, ಪಂಪನಗೌಡ, ದರೂರ ಬಸವರಾಜ್ ಸೇರಿದಂತೆ ರೈಲ್ವೆ ಪೊಲೀಸರು, ಸಿಬ್ಬಂದಿ ಹಾಗೂ ಸಾವಿರಾರು ಜನರು ಪಾಲ್ಗೊಂಡಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor