Sindhanur | ವಸತಿ ನಿಲಯದ ಉಪಹಾರ ಸೇವಿಸಿ 13 ವಿದ್ಯಾರ್ಥಿನಿಯರು ಅಸ್ವಸ್ಥ; ಆಸ್ಪತ್ರೆಗೆ ದಾಖಲು

Update: 2026-08-04 20:10 IST

ಸಿಂಧನೂರು : ನಗರದ ಪೊಲೀಸ್ ಠಾಣೆ ಎದುರಿನ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಉಪಹಾರ ಸೇವಿಸಿದ 13 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಬುಧವಾರ ನಡೆದಿದೆ. ಅಸ್ವಸ್ಥ ವಿದ್ಯಾರ್ಥಿನಿಯರನ್ನು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಅವರನ್ನು ವಸತಿ ನಿಲಯಕ್ಕೆ ಕಳುಹಿಸಲಾಗಿದೆ.

ಬೆಳಿಗ್ಗೆ ವಸತಿ ನಿಲಯದಲ್ಲಿ ತಯಾರಿಸಿದ್ದ ಚಪಾತಿ, ಅನ್ನ ಮತ್ತು ಸಾಂಬಾರು ಸೇವಿಸಿದ ಬಳಿಕ ವಿದ್ಯಾರ್ಥಿನಿಯರಿಗೆ ಹೊಟ್ಟೆನೋವು ಹಾಗೂ ತಲೆಸುತ್ತಿನ ಲಕ್ಷಣಗಳು ಕಾಣಿಸಿಕೊಂಡಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ವಸತಿ ನಿಲಯದ ವಾರ್ಡನ್ ಶೋಭಾ ರಜೆಯಲ್ಲಿದ್ದು, ಪ್ರಭಾರವನ್ನು ತಾಲ್ಲೂಕು ಅಧಿಕಾರಿ ನಟರಾಜ್ ವಹಿಸಿಕೊಂಡಿದ್ದಾರೆ. ಅಡುಗೆ ಸಿಬ್ಬಂದಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಪಾಲಕರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವಾರವೂ ನಗರದ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಉಪಹಾರ ಸೇವಿಸಿದ್ದ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆ ಸಂದರ್ಭದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಮತ್ತು ಸುರಕ್ಷಿತ ವಾತಾವರಣ ಕಲ್ಪಿಸುವಂತೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿರುವುದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಘಟನೆಯ ಮಾಹಿತಿ ತಿಳಿದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. ಬಳಿಕ ಜಿಲ್ಲಾ ಕೆಡಿಪಿ ಸದಸ್ಯ ಶಫೀವುಲ್ಲಾ ಖಾನ್ ಹಾಗೂ ಮುಖಂಡರಾದ ಹನುಮಂತ ಗೋಮರ್ಸಿ ಮತ್ತು ನಾಗರಾಜ ಕವಿತಾಳ ಅವರು ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News