Raichur | ಕಾಲುವೆ ಬಂದ್‌ನಿಂದ ಅಮರೇಶ್ವರ ಕಾಲೊನಿಯಲ್ಲಿ ನೀರು ನಿಲ್ಲುವ ಸಮಸ್ಯೆ; ತೆರವುಗೊಳಿಸಲು ನಿವಾಸಿಗಳ ಆಗ್ರಹ

Update: 2026-08-04 21:37 IST

ರಾಯಚೂರು : ನಗರದ ಅಮರೇಶ್ವರ ಕಾಲೊನಿಯಲ್ಲಿ ಮಳೆನೀರು ಹಾಗೂ ಚರಂಡಿ ನೀರು ಹರಿಯುವ ಕಾಲುವೆಯನ್ನು ಬಂದ್ ಮಾಡಿರುವುದರಿಂದ ನಿವಾಸಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಕಾಲುವೆಯನ್ನು ತಕ್ಷಣ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ಈ ಸಂಬಂಧ ಸ್ಥಳೀಯ ನಿವಾಸಿಗಳ ಸಮಿತಿಯ ಪದಾಧಿಕಾರಿಗಳು ಮಂಗಳವಾರ ಮಹಾನಗರ ಪಾಲಿಕೆ ಅಧಿಕಾರಿಗೆ ಮನವಿ ಸಲ್ಲಿಸಿದರು.

ಅಮರೇಶ್ವರ ಕಾಲೊನಿಯ ಮನೆ ಸಂಖ್ಯೆ 1-4-157/198 ಪಕ್ಕದಲ್ಲಿ ಕಳೆದ ಸುಮಾರು 50 ವರ್ಷಗಳಿಂದ ಪೂರ್ವದಿಂದ ಪಶ್ಚಿಮದವರೆಗೆ ಮಳೆನೀರು ಹಾಗೂ ಸುತ್ತಮುತ್ತಲಿನ ಮನೆಗಳ ಬಳಕೆಯ ನೀರು ಕಾಲುವೆ ಮೂಲಕ ಹರಿದು ಹೋಗುತ್ತಿತ್ತು. ಆದರೆ ಜುಲೈ 21ರಂದು ಕಾಲುವೆಯನ್ನು ಬಂದ್ ಮಾಡಿರುವ ಪರಿಣಾಮ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ನುಗ್ಗಿ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ಮಳೆಗಾಲ ಹಿನ್ನೆಲೆಯಲ್ಲಿ ಮನೆಗಳ ಆವರಣ ಹಾಗೂ ರಸ್ತೆಗಳಲ್ಲಿ ನೀರು ನಿಂತು ದುರ್ವಾಸನೆ ಮತ್ತು ಅಸ್ವಚ್ಛತೆ ಉಂಟಾಗಿದೆ. ಕುಡಿಯುವ ನೀರಿನ ಟ್ಯಾಂಕ್‌ಗಳಿಗೆ ಕಲುಷಿತ ನೀರು ಸೇರುವ ಆತಂಕ ಎದುರಾಗಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಮಕ್ಕಳು, ವೃದ್ಧರು ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯೂ ಇದೆ ಎಂದು ಹೇಳಿದರು.

ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಸ್ಥಳ ಪರಿಶೀಲನೆ ನಡೆಸಿ, ಬಂದ್ ಮಾಡಿರುವ ಕಾಲುವೆಯನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಅಗತ್ಯ ಕ್ರಮ ಕೈಗೊಂಡು ಅಮರೇಶ್ವರ ಕಾಲೊನಿಯ ನಿವಾಸಿಗಳ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹರಿ, ಅಜೀಜ್ ಜಾಗೀರ್ದಾರ್, ವಿಜಯಕುಮಾರಿ, ಮಾರುತಪ್ಪ, ರಾಜಪ್ಪ, ಸೈಯದ್ ಸಿಕಂದರ್, ಕಲಾಂ, ನಾಗೇಶ್, ರಾಜೇಶ್, ಅಮೀನುದ್ದೀನ್, ಸುರೇಶ್, ವೆಂಕಟೇಶ, ಆಂಜನೇಯ, ಅಗಸ್ಟಿಂಗ್ ಮಿತ್ರ ಹಾಗೂ ಬಾಬಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News