ಸಿಂಧನೂರು : ತಿಡಿಗೊಳ ಆಂಜನೇಯ ಜಾತ್ರೆಯಲ್ಲಿ ದಲಿತ-ಸವರ್ಣೀಯರ ಮಧ್ಯೆ ಜಗಳ; ಹಲವರು ಆಸ್ಪತ್ರೆಗೆ ದಾಖಲು
ರಾಯಚೂರು: ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮ ಆಂಜನೇಯ ದೇವಸ್ಥಾನ ಜಾತ್ರೆಯ ಅಂಗವಾಗಿ ನಡೆದ ರಥೋತ್ಸವದಲ್ಲಿ ದಲಿತ ಹಾಗೂ ಸವರ್ಣೀಯ ಯುವಕರ ನಡುವೆ ಜಗಳ ನಡೆದಿದ್ದು, ಅನೇಕರು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
ರವಿವಾರ ರಾತ್ರಿ ಆಂಜನೇಯ ಸ್ವಾಮಿ ರಥ ಎಳೆಯುವ ಸಂದರ್ಭದಲ್ಲಿ ಡ್ರಮ್ ಬಾರಿಸುವ ವಿಷಯಕ್ಕೆ ದಲಿತ ಹಾಗೂ ಸವರ್ಣೀಯರ ನಡೆಯುವ ಗಲಾಟೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ಬಳಿಕ ಸ್ಥಳಕ್ಕೆ ಪೊಲಿಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ.
ಆಂಜನೇಯ ದೇವರ ಜಾತ್ರೆ ಸಂಬಂಧ ಮೂರು ವರ್ಷಗಳ ಹಿಂದೆ ಇದೇ ರೀತಿ ದಲಿತ ಹಾಗೂ ಸವರ್ಣಿಯರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.
ಗಲಾಟೆ ಬಗ್ಗೆ ಮರುದಿನ ಮುಂಜಾನೆವರೆಗೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಇನ್ನು ಮುಂದೆ ದಲಿತರ ಮೇಲೆ ಗಲಾಟೆಯಾಗದಂತೆ ನೋಡಿಕೊಳ್ಳುವುದಾಗಿ ಗ್ರಾಮದ ಮುಖಂಡರು ಭರವಸೆ ನೀಡಿದ ಕಾರಣ ಶಾಂತಿ ಸಭೆ ಮಾಡಿ ಯಾವುದೇ ಪ್ರಕರಣ ದಾಖಲು ಮಾಡಿರಲಿಲ್ಲ ಎಂದು ತಿಳಿದು ಬಂದಿದೆ.
ಅ.18ರಂದು ಗಲಾಟೆ ನಡೆದಿದ್ದು, ಪೋಲೀಸರು ಇದ್ಧರೂ ಸಹ ಪರಸ್ಪರ ಕಲ್ಲು, ಬಡಿಗೆ, ಚಪ್ಪಲಿಯಿಂದ ಹಲ್ಲೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ದ್ಯಾಮಪ್ಪ, ನಾಗರಾಜ, ಮುದಿಯಪ್ಪ, ದುರಗೇಶ, ಮರಿಸ್ವಾಮಿ ಹಾಗೂ ಇತರರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದ್ದು ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಗ್ರಾಮದಲ್ಲಿ ಶಾಂತಿ ಕಾಪಾಡುವ ಹಿತದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯ ಪೋಲೀಸರನ್ನು ನಿಯೋಜನೆ ಮಾಡಲಾಗಿದೆ. ಡಿವೈಎಸ್ಪಿ ಚಂದ್ರಶೇಖರ.ಜಿ ನಾಯಕ, ಗ್ರಾಮೀಣ ಸಿಪಿಐ ವಿನಾಯಕ, ಪಿಎಸ್ಐ ಯರಿಯಪ್ಪ ಅಂಗಡಿ ಭೇಟಿ ನೀಡಿ ಶಾಂತಿ ಕಾಪಾಡುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.