ರಾಯಚೂರು: ನಗರದ ಸರ್ಕಾರಿ ಒಪೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಾದಗಿರಿ ಮೂಲದ ಮಹೇಶ್ವರಿ (30) ಅವರು ಗುರುವಾರ ತಡರಾತ್ರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡದೆ, ಗಾಯಕ್ಕೆ ಸರಿಯಾಗಿ ಬ್ಯಾಂಡೇಜ್ ಮಾಡದೆ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮಹೇಶ್ವರಿ ಅವರು ಅ.9ರಂದು ರಾತ್ರಿ ಅಪಘಾತಕ್ಕೀಡಾಗಿ ಒಪೆಕ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರ ತಲೆಗೆ ಗಾಯವಾಗಿತ್ತು. ಆದರೆ, ಗಾಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದ್ದರಿಂದ ತಲೆಯಲ್ಲಿ ಹುಳುಗಳು ಕಾಣಿಸಿಕೊಂಡಿದ್ದವು. ಇದರಿಂದ ಮಹಿಳೆ ತೀವ್ರ ನೋವು ಅನುಭವಿಸುತ್ತಿದ್ದರೂ ಆಸ್ಪತ್ರೆಯ ಸಿಬ್ಬಂದಿ ಸರಿಯಾಗಿ ಸ್ಪಂದಿಸಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.

ಒಪೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಹಿಳೆಗೆ ಸೂಕ್ತ ಆರೈಕೆ ದೊರೆಯದ ಕಾರಣ ಇಂತಹ ಪರಿಸ್ಥಿತಿ ಉಂಟಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡ ಹಾಗೂ ಸಾಮಾನ್ಯ ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕಾದ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಘಟನೆ ನಡೆದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಹಿಳೆಯ ಸಾವಿಗೆ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣವೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು. ತನಿಖೆಯಲ್ಲಿ ತಪ್ಪಿತಸ್ಥರು ಕಂಡುಬಂದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor