ಸಿಂಧನೂರು: ನಗರದ ದನದ ಮಾರುಕಟ್ಟೆಯಲ್ಲಿ ದನಗಳ ಖರೀದಿ ಹಾಗೂ ಮಾರಾಟದ ಸಂದರ್ಭದಲ್ಲಿ ರೈತರು ಮತ್ತು ಖರೀದಿದಾರರಿಗೆ ಅನ್ಯಾಯ ಹಾಗೂ ಸಮಸ್ಯೆಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರತಿನಿಧಿಗಳು ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ರೈತರು ಹಾಗೂ ಖರೀದಿದಾರರೊಂದಿಗೆ ಮಾತುಕತೆ ನಡೆಸಿದ ಪ್ರತಿನಿಧಿಗಳು ಅವರ ಸಮಸ್ಯೆಗಳನ್ನು ಆಲಿಸಿ, ಮಾರುಕಟ್ಟೆಯಲ್ಲಿ ನಡೆಯುತ್ತಿರುವ ವ್ಯವಹಾರಗಳ ಕುರಿತು ಮಾಹಿತಿ ಪಡೆದುಕೊಂಡರು. ರೈತರು ತಮ್ಮ ಜಾನುವಾರುಗಳನ್ನು ನ್ಯಾಯಯುತ ಬೆಲೆಗೆ ಮಾರಾಟ ಮಾಡಿಕೊಳ್ಳುವಂತಾಗಬೇಕು. ಯಾವುದೇ ರೀತಿಯ ಅನ್ಯಾಯದ ವಸೂಲಿ, ಮಧ್ಯವರ್ತಿಗಳ ಹಸ್ತಕ್ಷೇಪ ಅಥವಾ ರೈತರಿಗೆ ಅನಗತ್ಯ ತೊಂದರೆ ಉಂಟಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಪ್ರತಿನಿಧಿಗಳು ಒತ್ತಾಯಿಸಿದರು.

ರೈತರಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಮಾಡಬೇಕು. ದನಗಳ ಖರೀದಿ ಹಾಗೂ ಮಾರಾಟ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡಬೇಕು. ಅನಗತ್ಯ ವಸೂಲಿ ಹಾಗೂ ತೊಂದರೆಗೆ ಕಡಿವಾಣ ಹಾಕಿ, ರೈತರು ಮತ್ತು ಖರೀದಿದಾರರ ಹಕ್ಕುಗಳನ್ನು ರಕ್ಷಿಸಬೇಕು. ಪಶುವೈದ್ಯಾಧಿಕಾರಿಗಳಿಂದ ದನಗಳ ಆರೋಗ್ಯದ ಕುರಿತು ಪ್ರಮಾಣಪತ್ರ ನೀಡಬೇಕು. ಸರ್ಕಾರದಿಂದ ದನಗಳ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿದರು.

ರೈತರ ಹಿತ ಕಾಪಾಡುವವರೆಗೆ ನಮ್ಮ ಧ್ವನಿ ನಿಲ್ಲದು. ಅನ್ಯಾಯದ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ತಿಳಿಸಿದರು.

ರೈತ ಮುಖಂಡ ನಿರುಪಾದಿ ಕೆ. ಗೋಮರ್ಸಿ, ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಬಿಂಗಿ, ಕಾರ್ಯಾಧ್ಯಕ್ಷ ನಿರುಪಾದೆಪ್ಪ ಅಡ್ಡಿ, ಉಪಾಧ್ಯಕ್ಷ ಯಮನಪ್ಪ ಪಗಡದಿನ್ನಿ ಹಾಗೂ ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ಬನ್ನಿಗನೂರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor