ಸಾಮಾಜಿಕ ಜಾಲತಾಣ ಬಳಕೆ ಮುನ್ನ ಎಚ್ಚರಿಕೆ ಅಗತ್ಯ: ವೆಂಕಟೇಶ್ ಹೊಗೆಬಂಡಿ
ಲಿಂಗಸುಗೂರು: ಮೊಬೈಲ್, ಆನ್ ಲೈನ್ ಶಾಪಿಂಗ್ ಹಾಗೂ ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಎಚ್ಚರಿಕೆ ವಹಿಸಬೇಕೆಂದು ರಾಯಚೂರಿನ ಸೈಬರ್ ಕ್ರೈಂ ಉಪ ಅಧೀಕ್ಷಕ ವೆಂಕಟೇಶ್ ಹೊಗೆಬಂಡಿ ತಿಳಿಸಿದರು.
ಲಿಂಗಸುಗೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸೈಬರ್ ಅಪರಾಧ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ವೆಂಕಟೇಶ ಹೊಗೆಬಂಡಿ, ಸಾಮಾಜಿಕ ಜಾಲತಾಣ ನಮ್ಮ ದಿನನಿತ್ಯದ ಆಗ ಹೋಗುಗಳ ತಿಳುವಳಿಕೆಗೆ ಬಳಕೆ ಮಾಡುವಾಗ ನಮಗೆ ಅರಿವಿರದೇ ಮೋಸಕ್ಕೆ ಒಳಗಾಗುತ್ತೇವೆ. ಇದನ್ನು ಎಚ್ಚರಿಕೆಯಿಂದ ಬಳಕೆ ಮಾಡಿದರೆ ವಂಚನೆಯಿಂದ ತಪ್ಪಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಮೋಹದ ಜಾಲದೊಳಗೆ ಸಿಲುಕಿ ವಂಚನೆಗೆ ಒಳಗಾಗದೇ, ಸೈಬರ್ ಕೃತ್ಯಗಳಿಗೆ ಸಿಲುಕದೇ ಎಚ್ಚರಿಕೆಯಿಂದ ಇರಬೇಕು. ಈ ದೃಷ್ಟಿಯಿಂದ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ತಹಶೀಲ್ದಾರ್ ಸತ್ಯಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸೇರಿ ಹಲವರು ಉಪಸ್ಥಿತರಿದ್ದರು.