ಬಿಡದಿ ಟೌನ್‍ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್-ಬಿಜೆಪಿ ಪಾದಯಾತ್ರೆ

Update: 2026-08-09 19:10 IST

ಬೆಂಗಳೂರು : ಬಿಡದಿ ಟೌನ್‍ಶಿಪ್ ಯೋಜನೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಜೆಡಿಎಸ್ ಹಾಗೂ ಬಿಜೆಪಿ ವತಿಯಿಂದ ಬಿಡದಿಯಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಗೊಂಡಿದ್ದು, ಉಭಯ ಪಕ್ಷಗಳ ನಾಯಕರು ಪಾಲ್ಗೊಂಡು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ರವಿವಾರ ಟೌನ್‍ಶಿಪ್ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಧರಣಿ ಸ್ಥಳವಾದ ಬೈರಮಂಗಲ ವೃತದಿಂದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಆರಂಭಗೊಂಡ ಪಾದಯಾತ್ರೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಸಾವಿರಾರು ಜೆಡಿಎಸ್ ಕಾರ್ಯಕರ್ತರ ಸಮ್ಮುಖದಲ್ಲಿ ಚಾಲನೆ ಸಿಕ್ಕಿತು.

ಈ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‍ಬಾಬು, ಸಂಸದ ಮಲ್ಲೇಶ್ ಬಾಬು, ಶಾಸಕರಾದ ಎ.ಮಂಜು, ಹರೀಶ್‍ಗೌಡ, ಮಾಜಿ ಶಾಸಕ ಎ.ಮಂಜುನಾಥ್ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್‍ನ ಹಲವು ಮುಖಂಡರು ಜತೆಯಾದರು.

ಬೈರಮಂಗಲದಿಂದ ಆರಂಭವಾದ ಪಾದಯಾತ್ರೆಯಲ್ಲಿ ಸಾವಿರಾರು ರೈತರು, ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಬಿಡದಿ ಉಪನಗರ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸುತ್ತಾ ಹೆಜ್ಜೆ ಹಾಕಿದರು. ರೈತರು ಹಸಿರು ಶಾಲು, ಹಸಿರು ಟೋಪಿ ಹಾಕಿದ್ದರೆ, ಕಾರ್ಯಕರ್ತರು ಕೈಯಲ್ಲಿ ಜೆಡಿಎಸ್-ಬಿಜೆಪಿ ಬಾವುಟ ಹಿಡಿದು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಪಾದಯಾತ್ರೆಗೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಬಿಡದಿ ಉಪನಗರ ಯೋಜನೆ ಕೈಬಿಡುವಂತೆ ಆಗ್ರಹಿಸಿ ಬೈರಮಂಗಲದಿಂದ ಆರಂಭವಾಗಿರುವ ಪಾದಯಾತ್ರೆಯು ಆ.11ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾರೋಪಗೊಳ್ಳಲಿದೆ. ಅಂದು ಮಧ್ಯಾಹ್ನ ಬಹಿರಂಗ ಸಮಾವೇಶದ ಮೂಲಕ ಪಾದಯಾತ್ರೆಗೆ ತೆರೆ ಬೀಳಲಿದೆ. ಇನ್ನೂ, ಪಾದಯಾತ್ರೆಯು ತಿಮ್ಮೇಗೌಡನದೊಡ್ಡಿ, ವೃಷಭಾವತಿಪುರ, ಅಬ್ಬನಕುಪ್ಪೆ, ಜೋಗರದೊಡ್ಡಿಯ ವರೆಗೆ ಸಾಗಿತು. ಮಧ್ಯಾಹ್ನದ ನಂತರ ಜೋಗರದೊಡ್ಡಿ, ಮೇಡನಹಳ್ಳಿ, ಬೈರಮಗಂಲ ಕ್ರಾಸ್, ಬಿಜಿಎಸ್ ವೃತ್ತದ ಮೂಲಕ ಸಂಜೆ ವೇಳೆಗೆ ಬಿಡದಿ ತಲುಪಿತು. ರವಿವಾರ ರಾತ್ರಿ ಬಿಡದಿಯಲ್ಲಿ ವಾಸ್ತವ್ಯ ಹೂಡಿದ್ದು ಕಂಡುಬಂದಿತು.

ಪಾದಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಆರ್.ಅಶೋಕ್, ಬಿಡದಿ ಟೌನ್‍ಶಿಪ್ ಯೋಜನೆ ರೈತರ ವಿರೋಧಿಯಾಗಿದೆ. ಇದರಲ್ಲಿ 35ಸಾವಿರ ಕೋಟಿ ರೂ. ವ್ಯವಹಾರ ಅಡಗಿದೆ. ಹಣ ಲೂಟಿ ಮಾಡಲು, ರಿಯಲ್ ಎಸ್ಟೇಟ್ ದಂಧೆ ಮಾಡಲು ಕಾಂಗ್ರೆಸ್ ಸರಕಾರ ಈ ಯೋಜನೆ ರೂಪಿಸಲು ಹೊರಟಿದೆ. ಜೆಡಿಎಸ್, ಬಿಜೆಪಿ ಒಟ್ಟಿಗೆ ಸೇರಿ ಹೋರಾಟ ಮಾಡಲು ತೀರ್ಮಾನಿಸಿ ಇಲ್ಲಿಗೆ ಬಂದಿದ್ದೇನೆ. ರೈತರ ಒಪ್ಪಿಗೆ ಇಲ್ಲದೆ ಫಲವತ್ತಾದ ಜಮೀನಿನಲ್ಲಿ ಯೋಜನೆ ಜಾರಿಯಾಗುತ್ತಿರುವುದರಿಂದ ನಮ್ಮ ವಿರೋಧವಾಗಿದೆ ಎಂದು ತಿಳಿಸಿದರು.

ಈಗಾಗಲೆ ಕಾಂಗ್ರೆಸ್ ಪಕ್ಷವೇ ಸತ್ಯ ಶೋಧನ ಸಮಿತಿ ಮಾಡಿ, ಕಾಂಗ್ರೆಸ್ ಶಾಸಕರೇ ಯೋಜನೆ ಬೇಡ ಎಂದು ಸಹಿ ಮಾಡಿ ಕೊಟ್ಟಿದ್ದಾರೆ. ಆದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಯೋಜನೆ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ. ಈಗ ಮತ್ತೊಮ್ಮೆ ಸಮಿತಿ ಮಾಡಲು ಹೊರಟಿದ್ದಾರೆ. ಈ ಸಮಿತಿ ಯೋಜನೆ ಪರವಾಗಿ ತೀರ್ಪು ನೀಡುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಸರಕಾರ ಈ ಯೋಜನೆಯಿಂದ ಕೊನೆಗಾಣಲಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಬಿಡದಿ ಮಣ್ಣಿನಲ್ಲಿ ರೈತರ ಭಾವನೆ ಅಡಗಿದೆ. ಅವರ ಭಾವನೆಗಳಿಗೆ ಬೆಲೆ ನೀಡುವ ನಿಟ್ಟಿನಲ್ಲಿ ಈ ಪಾದಯಾತ್ರೆಗೆ ಕೈಗೊಂಡಿದ್ದೇವೆ. ಜೊತೆಗೆ ಕಾನೂನಾತ್ಮಕ ಹೋರಾಟವನ್ನೂ ಮಾಡುತ್ತಿದ್ದೇವೆ. ರೈತರ ಅಸ್ತಿತ್ವವನ್ನು ಉಳಿಸಲು ನಮ್ಮ ಹೋರಾಟ ಮತ್ತು ಸರಕಾರ ಬಿಡದಿ ಟೌನ್‍ಶಿಪ್ ನಿಲ್ಲಿಸುವವರೆಗೆ ನಮ್ಮ ಹೋರಾಟ ನಡೆಯಲಿದೆ ಎಂದು ರೈತರಿಗೆ ಭರವಸೆ ನೀಡಿದರು.

 

ಇದೇನು ಚೌಕಾಸಿ ವ್ಯಾಪಾರವೇ? : ಎಚ್.ಡಿ.ಕುಮಾರಸ್ವಾಮಿ

ಬೈರಮಂಗಲದಿಂದ ಕೈಗೊಂಡಿರುವ ಬಿಡದಿ ಟೌನ್‍ಶಿಪ್ ವಿರೋಧಿಸುವ ಪಾದಯಾತ್ರೆಯು ರೈತಪರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ದಿಕ್ಸೂಚಿಯಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ರವಿವಾರ ಬಿಡದಿಯ ಭೈರಮಂಗಲದಲ್ಲಿ ಟೌನ್‍ಶಿಪ್ ವಿರೋಧಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಭ್ರಷ್ಟಾಚಾರದ ಸರಕಾರ ಕಿತ್ತೊಗೆಯಲು ಈ ಪಾದಯಾತ್ರೆಯ ಮೂಲಕ ಇಲ್ಲಿನ ರೈತರು ಅಡಿಪಾಯ ಹಾಕಿದ್ದಾರೆ.ರಾಜ್ಯದ ಮುಖ್ಯಮಂತ್ರಿ ಈ ಯೋಜನೆ ವಿಷಯದಲ್ಲಿ ಅತಿಯಾದ ಕಾಳಜಿ ವಹಿಸುತ್ತಿದ್ದಾರೆ. ಯಾರಿಗೋ ಲಾಭ ಮಾಡಿಕೊಡಲು ಅವರು ಪ್ರಯತ್ನ ಮಾಡುತ್ತಿದ್ದಾರೆ. ಇದುರೆಗೂ ಒಂದು ಎಕರೆಗೆ 2 ಕೋಟಿ ಕೊಡುವುದಾಗಿ ಹೇಳುತ್ತಿದ್ದವರು ಇವತ್ತು ಬೆಳಗ್ಗೆ ವಿಡಿಯೊ ಮಾಡಿ ಒಂದು ಎಕರೆಗೆ 3 ಕೋಟಿ ಕೊಡುವುದಾಗಿ ಹೇಳಿದ್ದಾರೆ. ಇದಕ್ಕೆ ನೀವು ಮರುಳಾಗಬೇಡಿ. ಈ ಮುಖ್ಯಮಂತ್ರಿ ನಿಮಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನೈಸ್ (ಬಿಎಂಐಸಿ) ಯೋಜನೆಗೆ ಭೂಸ್ವಾಧೀನ ಮಾಡಿಕೊಂಡು 30 ವರ್ಷ ಕಳೆದರೂ ಭೂಮಿ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿಲ್ಲ, ನಿವೇಶನವನ್ನೂ ಕೊಟ್ಟಿಲ್ಲ ಎಂದು ಆರೋಪಿಸಿದ ಅವರು, ಬಿಡದಿಯಲ್ಲಿ ಭೂಸ್ವಾದೀನ ಮಾಡಿಕೊಳ್ಳುವ ಜಮೀನಿಗೆ ಒಂದು ಎಕರೆಗೆ 3 ಕೋಟಿ ರೂ. ಕೊಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಯಾವ ಆಧಾರದ ಮೇಲೆ ಹೇಳಿದ್ದಾರೆ. ಇದೇನು ಚೌಕಾಸಿ ವ್ಯಾಪಾರವೇ? ಎಂದು ಖಾರವಾಗಿ ಪ್ರಶ್ನಿಸಿದರು.

ಬಿಡದಿ ಟೌನ್‍ಶಿಪ್ ಭಾಗದಲ್ಲಿ 6 ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ. ಜೊತೆಗೆ ರೇಷ್ಮೆ, ಮಾವು, ಅಡಿಕೆ, ತೆಂಗು ಎಲ್ಲವೂ ಇದೆ. ಇಂತಹ ಭೂಮಿಯನ್ನು ಅವರೇ ನೀಡಿದ್ದ ಸತ್ಯಶೋಧನಾ ಸಮಿತಿ ವರದಿಗೆ ವಿರುದ್ಧವಾಗಿ ಟೌನ್‍ಶಿಪ್ ಮಾಡಲು ಹೊರಟಿದ್ದಾರೆ. ಪಿತ್ರಾರ್ಜಿತ ಆಸ್ತಿ ಹಾಗೂ ಭೂಮಿಯನ್ನೆ ನಂಬಿ ಬದುಕುತ್ತಿರುವ ರೈತರ ಪರವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೋರಾಟ ನಡೆಸುತ್ತಿವೆ. ಎರಡೂ ಪಕ್ಷಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡು ರೈತರಿಗೆ ಬೆಂಬಲ ವ್ಯಕ್ತಪಡಿಸಿವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News