ಬಿಡದಿ ಟೌನ್‍ಶಿಪ್ ಯೋಜನೆಗೆ ವಿರೋಧ: ಮೂವರು ಮಹಿಳೆಯರು ಸೇರಿ 11 ಮಂದಿ ವಿರುದ್ಧ ಎಫ್‍ಐಆರ್
ಬೆಂಗಳೂರು : ಬಿಡದಿ ಟೌನ್‍ಶಿಪ್ ಯೋಜನೆಗೆ ಸಂಬಂಧಿಸಿದಂತೆ ಜಂಟಿ ಸರ್ವೆ ಕಾರ್ಯಕ್ಕೆ (ಜೆಎಂಸಿ) ತೆರಳಿದ್ದ ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಮೂವರು ಮಹಿಳೆಯರು ಸೇರಿ 11ಮಂದಿ ರೈತರ ವಿರುದ್ಧ ಬಿಡದಿ poಲೀಸ್ ಠಾಣೆಯಲ್ಲಿ ಎರಡು ಎಫ್‍ಐಆರ್‍ಗಳು ದಾಖಲಾಗಿವೆ.
ಹೊಸೂರು ಗ್ರಾಮದ ಪ್ರಕಾಶ್, ಕೃಷ್ಣ, ಮಂಡಲಹಳ್ಳಿಯ ನಾಗರಾಜು, ಭಾಗ್ಯ, ಮದ್ದೂರಿನ ಯಶವಂತ್, ಬನ್ನಿಗಿರಿಯ ರೇವಣ್ಣ, ಜಯಮ್ಮ, ಕಂಚುಗಾರನಹಳ್ಳಿಯ ಮೋಹಾನ್, ಬೈರಮಂಗಲದ ವರಲಕ್ಷ್ಮೀ, ಕೆಂಪಶೆಟ್ಟಿದೊಡ್ಡಿಯ ಹರೀಶ್ ಸೇರಿ ಮತ್ತಿತರ ರೈತರ ಮೇಲೆ ಎಫ್‍ಐಆರ್ ದಾಖಲಾಗಿದೆ.
ರಾಮನಗರ ಗ್ರಾಮಾಂತರ poಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮುರುಳಿ ಮತ್ತು ವಾಹನ ಚಾಲಕ ಮುಹಮ್ಮದ್ ಸಮೀರ್ ಅವರು ನೀಡಿದ ದೂರಿನ ಅನ್ವಯ ಭಾರತೀಯ ನೀತಿ ಸಂಹಿತೆಯ 189(2), 126(2), 352, 351(2), 109(1), 115(2), 118(1), 132, 133, 74, 190 ಸೆಕ್ಷನ್‍ಗಳ ಅಡಿಯಲ್ಲಿ ರೈತರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಡಲಹಳ್ಳಿ ಗ್ರಾಮದ ಜಮೀನನ್ನು ಅಳತೆ ಮಾಡಲು ಬಂದಾಗ ಸರ್ವೆ ಭೂಸ್ವಾದೀನ ಪ್ರಕ್ರಿಯೆಯ ವಿರೋಧ ವ್ಯಕ್ತಪಡಿಸುತ್ತಿರುವ ರೈತರು ಏಕಾಏಕಿ ಗುಂಪು ಕಟ್ಟಿಕೊಂಡು ಕೈಯಲ್ಲಿಪೊರಕೆಗಳು, ಕಲ್ಲುಗಳು ಹಿಡಿದುಕೊಂಡು ಬಂದು ಸರ್ವೆ ಕಾರ್ಯ ಮಾಡದಂತೆ ಅಡ್ಡಗಟ್ಟಿ ತಡೆದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಅಧಿಕಾರಿಗಳ ಮೇಲೆ ಕಲ್ಲುಗಳಿಂದ ಮತ್ತು ಪೊರಕೆಗಳಿಂದ ಹಲ್ಲೆ ಮಾಡಲಾಗಿದೆ. ಅಲ್ಲದೆ ವಾಹನಗಳ ಗಾಜುಗಳನ್ನು ಪುಡಿಗೈಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.