‘ಒಡ್ಡೋಲಗ’ದ ಬಹು ಆಯಾಮದ ‘ಬಹುಮುಖಿ’

Update: 2024-01-26 06:53 GMT

ನೀನಾಸಂ ಪದವಿ ಪಡೆದು, ತಿರುಗಾಟ ನಡೆಸಿದ ನಂತರ ಬೆಂಗಳೂರು ಸೇರಿ ಸೀರಿಯಲ್, ಸಿನೆಮಾ ಎಂದು ಅವಕಾಶಕ್ಕಾಗಿ ಅಲೆಯುವವರ ನಡುವೆ ತಮ್ಮೂರಲ್ಲೇ ನೆಲೆ ನಿಂತು ರಂಗಭೂಮಿ ಚಟುವಟಿಕೆಗಳನ್ನು ನಡೆಸುವವರು ಅಪರೂಪ. ಇಂಥವರಲ್ಲಿ ಗಣಪತಿ ಬಿ. ಹಿತ್ಲಕೈ ಒಬ್ಬರು. ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟವರು ಅವರ ಹೆಂಡತಿ ಪ್ರಜ್ಞಾ ಹೆಗಡೆ. ಇವರೂ ನೀನಾಸಂನಲ್ಲಿದ್ದು, ತಿರುಗಾಟದಲ್ಲಿದ್ದವರು. ಶಿರಸಿಯಲ್ಲಿ ಉರ್ದು ಪ್ರೌಢಶಾಲೆಯಲ್ಲಿ ರಂಗಶಿಕ್ಷಕಿಯಾಗಿದ್ದಾರೆ ಜೊತೆಗೆ ಗಣಪತಿ ಅವರ ಎಲ್ಲ ರಂಗಚಟುವಟಿಕೆಗಳಿಗೆ ಬೆನ್ನೆಲುಬಾಗಿರುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಿತ್ಲಕೈದವರಾದ ಗಣಪತಿ, ನೀನಾಸಂ ತಿರುಗಾಟದಲ್ಲಿದ್ದಾಗ ಪುತಿನ ಅವರ ‘ಗೋಕುಲ ನಿರ್ಗಮನ’ ನಾಟಕದಲ್ಲಿ ಮಿಂಚಿದ್ದರು. ನಂತರ ‘ಒಡ್ಡೋಲಗ’ ತಂಡವನ್ನು 1998ರಲ್ಲಿ ಕಟ್ಟಿಕೊಂಡು ಯಕ್ಷಗಾನ, ತಾಳಮದ್ದಳೆ, ಸಂಗೀತ ಜೊತೆಗೆ ನಾಟಕಗಳನ್ನು ನಿರಂತರವಾಗಿ ಆಡುತ್ತಿದ್ದಾರೆ. ಪ್ರತೀ ವರ್ಷ ವೃತ್ತಿನಿರತ ಹಾಗೂ ಗ್ರಾಮೀಣ ಪ್ರತಿಭೆಗಳನ್ನು ಒಳಗೊಂಡ ಅವರ ರಂಗತಂಡ ಹೊಸ ಹೊಸ ನಾಟಕಗಳನ್ನು ಆಡುತ್ತಿದೆ. ಕಳೆದ ವಾರ ಸಿದ್ದಾಪುರದ ಶಂಕರಮಠದಲ್ಲಿ ವಿವೇಕ ಶಾನಭಾಗ ಅವರ ‘ಬಹುಮುಖಿ’ ನಾಟಕ ಪ್ರದರ್ಶಿಸಿದರು. ಇದರಲ್ಲಿ ಅವರು ಪ್ರಮುಖ ಪಾತ್ರವಾದ ಪತ್ರಿಕೆಯ ಸಂಪಾದಕನ ಪಾತ್ರವನ್ನು ನಿರ್ವಹಿಸಿ ಯಶಸ್ವಿಗೊಂಡರು. ಆದರೆ ನಾಟಕವಾಡಲು ಅವರು ಪಡುವ ಪಾಡು ಹೇಳತೀರದು ಅಂದರೆ ತಾಲೂಕು ಸ್ಥಳವಾದ ಸಿದ್ದಾಪುರದಲ್ಲಿ ಸುಸಜ್ಜಿತವಾದ ರಂಗಮಂದಿರವಿಲ್ಲ. ಇದಕ್ಕಾಗಿ ಅಲ್ಲಿನ ಶಂಕರಮಠ ಇಲ್ಲವೇ ರಾಘವೇಂದ್ರ ಮಠದಲ್ಲಿ ನಾಟಕ ಆಡಬೇಕು. ಆದರೆ ಪರದೆ, ಲೈಟುಗಳನ್ನು ಕಟ್ಟಿಕೊಂಡು ಮತ್ತೆ ಬಿಚ್ಚಬೇಕು. ಅಲ್ಲದೆ ಅಲ್ಲಿ ಬೇರೆ ಕಾರ್ಯಕ್ರಮಗಳಿದ್ದರೆ ಇವರ ನಾಟಕದ ತಾಲೀಮು ನಡೆಯುವುದಿಲ್ಲ. ಹೀಗೆ ಜಾಗವನ್ನು ಹೊಂದಿಸಿಕೊಂಡು, ಕೃಷಿಯ ಜೊತೆಗೆ ಬೇರೆ ಬೇರೆ ಉದ್ಯೋಗದಲ್ಲಿರುವವರನ್ನು, ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ನಾಟಕ ಆಡುವುದು ಕಷ್ಟಸಾಧ್ಯ. ಆದರೂ ಪೂರ್ಣಾವಧಿ ರಂಗಕರ್ಮಿ ಆಗಿರುವ ಕಾರಣ ಕಷ್ಟನಷ್ಟಗಳ ನಡುವೆ ‘ಷೋ ಮಸ್ಟ್‌ಗೋ ಆನ್’ ಎನ್ನುವ ಬದ್ಧತೆ ಉಳ್ಳವರು ಗಣಪತಿ. ಅವರು ನಾಟಕ ಕಟ್ಟುವುದರ ಜೊತೆಗೆ ಅಭಿನಯಿಸುವ ಮೂಲಕ ಗಮನಸೆಳೆಯುತ್ತಾರೆ. ಹೀಗೆ ಅಭಿನಯಿಸುವ ಮೂಲಕ ತಮ್ಮೊಳಗಿನ ನಟ ಕಳೆದುಹೋಗಬಾರದೆಂಬ ಕಾಳಜಿ ಅವರಿಗಿದೆ.

ಇನ್ನು ನಾಟಕದ ಕುರಿತು; ಹೆಸರೇ ಹೇಳುವ ಹಾಗೆ ಇದು ‘ಬಹುಮುಖಿ’ ಅಂದರೆ ಬಹು ಆಯಾಮದ, ಬಹು ವಿಧದ ನಾಟಕ. 2007ರಲ್ಲಿ ರಚನೆಗೊಂಡರೂ ಇಂದಿಗೂ ಪ್ರಸ್ತುತವಾಗುವ, ಪ್ರಸ್ತುತ ವಿದ್ಯಮಾನಗಳನ್ನು ಅನಾವರಣಗೊಳಿಸುವ ನಾಟಕವಿದು. ಅದರಲ್ಲೂ ಪತ್ರಿಕೋದ್ಯಮದ ಸ್ಥಿತಿಗತಿಯನ್ನು ಬಿಚ್ಚಿಡುತ್ತದೆ. ಇದನ್ನು ಪುಷ್ಟೀಕರಿಸಲು ‘ಕರ್ನಾಟಕ ಧ್ವನಿ’ ಪತ್ರಿಕೆಯ ಸಂಪಾದಕರಾದ ಆನಂದ ಬಿರಾಜದಾರ ಅಂದರೆ ಪಾತ್ರಧಾರಿ ಗಣಪತಿ ತನ್ನ ಸಹೋದ್ಯೋಗಿಗೆ ಹೇಳುವ ಮಾತು-‘‘ಹುಡುಕಬೇಕು, ಕಣ್ಣಿದ್ದೂ ಕಾಣದವರಿಗೆ ನಾವು ಕಣ್ಣು ಕೊಟ್ಟು ಕಾಣಿಸಬೇಕು. ಮತ್ತ ಧಾಡಸೀತನ ಬೇಕು. ಮುನ್ನುಗ್ಗಿ ತಗೋಬೇಕು. ಇವತ್ತಿನ ಕಾಲದಾಗ ಸುದ್ದೀನ ಬ್ಯಾರೇವರ ಕಣ್ಣಿಂದ, ಕಿವಿಯಿಂದ, ತಲಿಯಿಂದ ಕಸಕೊಂಡು ಬರಬೇಕಾಗತದ...’’ ಎನ್ನುವಲ್ಲಿಗೆ ಇಂದಿನ ಪತ್ರಿಕೋದ್ಯಮ, ಪತ್ರಕರ್ತರ ಕುರಿತು ಹೇಳುವ ಮಾತು ಸತ್ಯವಾದುದು. ಪೈಪೋಟಿಗೆ ಬಿದ್ದಿರುವ ಸುದ್ದಿವಾಹಿನಿಗಳು, ಸಾಮಾಜಿಕ ಜಾಲತಾಣಗಳು ಬಿತ್ತರಿಸಲು ಹಂಬಲಿಸುವ ಸುದ್ದಿಗಳು, ಅವುಗಳ ಸತ್ಯಾಸತ್ಯತೆಯನ್ನು ಒರೆಗಲ್ಲಿಗೆ ಹಚ್ಚದೆ ಸ್ಟೋರಿಗಳನ್ನು ಬಿತ್ತರಿಸುವ ಭರದಲ್ಲಿ ಮರೆತ ನೈತಿಕತೆಯನ್ನು ನಾಟಕ ಸೂಕ್ಷ್ಮವಾಗಿ ಬಿಚ್ಚಿಡುತ್ತದೆ.

ಜೀವನ್ ಪಾತ್ರಧಾರಿ ಹೇಳುವ ಮಾತು ಗಮನಿಸಿ; ‘‘ನಿನ್ನೆ ಸಂಪಾದಕರು ಸಿಕ್ಕಿದ್ರು ಕಾಫಿಹೌಸಿನಲ್ಲಿ. ಚಂದ್ರಾಣಿ, ಅದೇ ಖ್ಯಾತ ಲೇಖಕಿ. ಅವರ ಜೊತೆ ಕೂತಿದ್ರು. ನಮಸ್ಕಾರ ಅಂದಿದ್ದೇ ಯಾಕೋ ನನ್ನ ಕರೆದು ಕೂರಿಸಿಕೊಂಡರು. ಭಾಷಣ ನನಗೋ ಚಂದ್ರಾಣಿಯವರಿಗೋ ಅಂತ ಅನುಮಾನ ಶುರು ಅಯ್ತು. ಈಗಿನ ತಲೆಮಾರಿಗೆ ಸೆನ್ಸ್ ಆಫ್ ಹಿಸ್ಟರಿ ಇಲ್ಲ, ಇತಿಹಾಸ ಪ್ರಜ್ಞೆ ಎಷ್ಟು ಮುಖ್ಯ ಅಂತ ಅರ್ಧ ಗಂಟೆ ಮಾತಾಡಿದರು. ಆಮೇಲೆ ಬೆಂಗಳೂರಿನವರ ಮೇಲೆ ಹರಿಹಾಯ್ದರು. ಹಿಂದೆ ಮುಂದೆ ಇಲ್ಲದ ಜನ; ಹಿಸ್ಟರಿ ಬಿಡಿ ತಮ್ಮ ರೂಟ್ಸೇ ಗೊತ್ತಿರಲ್ಲ ಅಂದರು. ಬರೀ ಗ್ಲಾಸ್‌ಹಿಡಿದ ಚಿತ್ರಗಳಿಂದ ಪತ್ರಿಕೋದ್ಯಮ ಬೆಳೆಯುತ್ತ್ತಾ ಹೇಳು ಅಂದರು. ಎಲ್ಲಾ ಹೆಡ್‌ಲೈನೂ ಪನ್‌ಮಾಡಿದರೆ ಕಾರ್ಟೂನಿಗೆ ನಗು ಬರುತ್ತಾ ಹೇಳು...’’ ಎನ್ನುವ ಮಾತು ಎಷ್ಟೊಂದು ಅರ್ಥಗಳನ್ನು ಹೊರಡಿಸುತ್ತದೆ!

ಹೀಗೆ ಸಾಗುವ ನಾಟಕದಲ್ಲಿ ತಲೆ ಮೇಲೆ ಹೊಡೆದ ಹಾಗೆ ಸ್ಟೋರಿ ತರಬೇಕೆಂದು ತಾಕೀತು ಮಾಡುವ ಸಂಪಾದಕರ ಮಾತಿಗೆ ಕಟ್ಟುಬಿದ್ದ ಸಂಜಯ್ ಪಾತ್ರಧಾರಿ ನಾಗರಾಜು ಶಿರಸಿ, ಕೆಂಪೇಗೌಡನಿಗೆ ‘ಮಿನಿಸ್ಟರ್ ಲಂಚದ ಕತೆಯಾದ್ರೆ ನನಗೆ ಆಸಕ್ತಿಯಿಲ್ಲ. ಹಾದರದ ಕಥೆನೂ ಬೇಡ. ಗುಟ್ಟಾಗಿ ನಡೆದ ಎರಡನೇ ಮದುವೆ- ಅದೂ ಬೇಡ’ ಎನ್ನುವಲ್ಲಿಗೆ ಪತ್ರಕರ್ತರ ಆಸಕ್ತಿಗಳೇನು ಎಂದು ಹೇಳುತ್ತಾರೆ. ಹೀಗೆ ಸಿಕ್ಕ ಕೆಂಪೇಗೌಡ ತಾನು ಕೆಂಪೇಗೌಡ ಮರಿಮಗನ ಮರಿಮರಿ ಮೊಮ್ಮಗನ ಮಗ ಅನ್ನಬಹುದು ಎಂದು ಪರಿಚಯಿಸಿಕೊಳ್ಳುತ್ತಾನೆ. ತನ್ನಲ್ಲಿರುವ ತಾಮ್ರಪತ್ರ, ಗಿಂಡಿ, ಶಾಸನದ ಪ್ರತಿ ತೋರಿಸಿ ನಂಬಿಸುತ್ತಾನೆ. ಇದರಿಂದ ಲಾಭವೇನು ಎಂದು ಸಂಜಯ ಕೇಳಿದಾಗ ‘‘ಸಭೆಗಳಿಗೆ ಆಹ್ವಾನ, ಆಮೇಲೆ ಒಂದು ಸನ್ಮಾನ. ಇಂಗ್ಲಿಷ್ ಪತ್ರಿಕೆಯಲ್ಲಿ ಫೋಟೋ, ಬೆಂಗಳೂರು ಹಬ್ಬದಲ್ಲಿ ಶಾಲು ಇತ್ಯಾದಿ. ಬಿಳೇ ಜನರ ಪಾರ್ಟಿಗೂ ಆಹ್ವಾನ ಬರುತ್ತೆ. ಬೆಂಗಳೂರಿನ ಸ್ಥಾಪಕನ ವಂಶದವರೆಂದರೆ ಸಾಮಾನ್ಯವೆ? ಕನ್ನಡದ ಕಹಳೆಯನ್ನೂ ಊದಬಹುದು ನಾನು. ಮತ್ತೆ ನನ್ನ ಮೇಲೆ ಒಂದು ಪಿಕ್ಚರ್! ಒಂದು ಎಳೆ ನೂಲು ಸಿಕ್ಕರೆ ಸಾಕು... ಹಗ್ಗ ನೇಯ್ದು ಮೇಲೆ ಹತ್ತಿಬಿಡ್ತೀನಿ’’ ಎನ್ನುವ ಮೂಲಕ ಇಂದಿನ ಜನರ ಮನಸ್ಥಿತಿ, ಹೇಗಾದರೂ ಪ್ರಸಿದ್ಧಿ ಆಗಬೇಕು, ಪ್ರಶಸ್ತಿ ಹೊಡೆದುಕೊಳ್ಳಬೇಕೆಂಬ ಧಾವಂತ ಕುರಿತು ಕನ್ನಡಿ ಹಿಡಿಯುತ್ತದೆ ಈ ಮಾತುಗಳು.

ಕೆಂಪೇಗೌಡ ವಂಶದವನೆಂದು ಪತ್ರಕರ್ತನಿಗೆ ಹೇಳಿಕೊಂಡು, ಎರಡು ಸಾವಿರವನ್ನೂ ಪಡೆದು ಸ್ಟೋರಿ ಕೊಡುವ ಅವನ ಜಾಣ್ಮೆಯೋ ಹೆಣೆದ ಬಲೆಯೋ ಅಂತೂ ಸ್ಟೋರಿ ಪ್ರಕಟಿಸಬೇಕೆಂಬ ಧಾವಂತದಲ್ಲಿ ಸಂಪಾದಕರಿಗೂ ತೋರಿಸದೆ ಪ್ರಕಟಿಸುತ್ತಾನೆ ವರದಿಗಾರ.

ಮರುದಿನ ಪ್ರಕಟಗೊಂಡ ಸ್ಟೋರಿಯ ಭಾನಗಡಿಗಳನ್ನು ಮುಂದಿನ ದೃಶ್ಯಗಳು ಕಟ್ಟಿಕೊಡುತ್ತವೆ. ಸ್ಟೋರಿ ಮೂಲಕ ಬಾಂಬ್ ಹಾಕಿದ್ದಾನೆಂದು ಫೋನಿನಲ್ಲಿ ಕೇಳುವ ಸಂಪಾದಕ, ಮತ್ತೊಮ್ಮೆ ಫ್ಯಾಕ್ಟ್‌ಚೆಕ್ ಮಾಡದೆ ಬರೆಯೋದೆ ಇಲ್ಲ. ಎಲ್ಲಾ ದಾಖಲೆ ನಾನ ನೋಡೀನಿ ಎಂದು ಹೇಳುವ ಮೂಲಕ ಪ್ರಕಟಗೊಂಡ ಸ್ಟೋರಿ ಸಮರ್ಥಿಸಿಕೊಳ್ಳುತ್ತಾರೆ. ಹೀಗೆ ಸ್ಟೋರಿಯಿಂದ ಉಂಟಾದ ಗೌಜುಗದ್ದಲ, ನಾಪತ್ತೆಯಾದ ಸಂಜಯ, ಆಮೇಲೆ ಇನ್‌ಸ್ಪೆಕ್ಟರ್ ನಾಯಕ್ ಬಂದು ರಿಯಲ್‌ಎಸ್ಟೇಟ್ ವ್ಯವಹಾರ ಎಂದು ತಿಳಿಸುತ್ತಾರೆ.

ಮುಂದಿನ ದೃಶ್ಯದಲ್ಲಿ ಸಂಜಯ ತನ್ನ ಗೆಳೆಯನಾದ ಜಗನ್ನಾಥ್ ಈಗ ಜಕ್ಕೂಜಿ ಆಗಿರುವ ಅಂದರೆ ಸ್ವಾಮೀಜಿಯಾಗಿರುವವರನ್ನು ಭೇಟಿಯಾಗುತ್ತಾನೆ. ಅಷ್ಟರಲ್ಲಿ ಫೋನಿನಲ್ಲಿ ಯೋಗ, ಧ್ಯಾನ ಎಂದು ಕ್ಲೈಂಟ್ ಜೊತೆ ಮಾತನಾಡುವ ಜಕ್ಕೂಜಿ ಹತ್ತು ವರ್ಷದ ಹಿಂದೆ ಸೇಲ್ಸ್‌ಮನ್ ಆಗಿದ್ದವನು ಉಳ್ಳವರ ಮಹಿಳೆಯರ ಕಿವಿಯಾದೆ ಎನ್ನುತ್ತ, ‘‘ಬರೀ ಕಿವಿ ಕೊಟ್ಟರೆ ಸಾಲದು. ಅದಕ್ಕೆ ಯೋಗ, ಧ್ಯಾನ ಸೇರಿಸಿ ಸಾತ್ವಿಕ ಕಳೆ ಕೊಟ್ಟೆ. ಅವರಿಗೂ ನನ್ನ ಫೀಸು ಕೊಡಲೊಂದು ದಾರಿಯಿರಬೇಕಲ್ಲ. ವ್ಯಾಲ್ಯೂ ಫಾರ್‌ಮನಿ ಅಂತ ಗಂಡಂದಿರಿಗೆ ಕಾಣಿಸಬೇಕಲ್ಲ. ಜಗನ್ನಾಥನಿದ್ದವನು ಗುರು ಜಕ್ಕೂಜಿ ಆದೆ’’ ಎನ್ನುವಲ್ಲಿಗೆ ಮಧ್ಯಮ ಹಾಗೂ ಮೇಲ್ಮಧ್ಯಮ ಹಾಗೂ ಶ್ರೀಮಂತ ಮಹಿಳೆಯರ ಬದುಕಿನ, ಆಲೋಚನಾ ಕ್ರಮವನ್ನು ಈ ಪಾತ್ರ ಹಿಡಿದಿಡುತ್ತದೆ. ತನ್ನ ಸ್ಟೋರಿಯಿಂದ ಉಂಟಾದ ಸಮಸ್ಯೆಯಿಂದ ಪಾರಾಗಲು ಭೇಟಿಗೆ ಬಂದ ಸಂಜಯನಿಗೆ ಗುರು ಜಕ್ಕೂಜಿ ಹೇಳುವ ಮಾತು -‘‘ನಮ್ಮೂರಿನ ಗುಡಿಗಾರ ಗಲ್ಲಿಯ ಸಂಜೂ ಆಗಿ ಇರ್ತೀನಿ ಅಂದ್ರೆ ಇಲ್ಲಿ ಬದುಕಕ್ಕೆ ಆಗಲ್ಲ. ಮೊದಲು ಬೇರು ಕಳಚಿಕೊಳ್ಳಬೇಕು. ಹಗುರಾದರೆ ಮಾತ್ರ ತೇಲಕ್ಕೆ ಆಗೋದು. ಈ ಸಿಟಿ ಹುಡುಗ್ರನ್ನ ನೋಡು, ಅವರಿಗೆ ಏನಾದ್ರೂ ಭಾರ ಇದೆಯಾ? ಮಾತೃಭಾಷೆಯ ಭಾರವಿಲ್ಲ, ದೇಶಭಕ್ತಿಯ ಭಾರವಿಲ್ಲ. ರಾಜಕೀಯದ ಭಾರವಿಲ್ಲ. ಸಮಾಜ ಸುಧಾರಣೆಯ ಭಾರವಿಲ್ಲ. ಸಾಮಾಜಿಕ ನ್ಯಾಯದ ಭಾರವೂ ಇಲ್ಲ. ಇಲ್ಲಿ ಕಳಚಿಕೋಬೇಕು, ಅಂಟಿಕೋಬಾರದು. ರಸ್ತೆ ಮೇಲೆ ಯಾರೋ ಸಾಯತ್ತಾ ಬಿದ್ದಿದ್ದರೂ ಮುಖ ತಿರುಗಿಸಿ ನಡೆಯಲು ಕಲಿಬೇಕು ಮತ್ತು ಅಂಥವರನ್ನು ಎತ್ತುತಾರಲ್ಲ, ಆ ಸಂಘದವರಿಗೆ ಚಾರಿಟಿ ಅಂತ ಹಣ ಕೊಡಬೇಕು. ಅದು ನಮ್ಮ ಮನಸ್ಸಿನ ಮತ್ತು ಸಮಾಜದ ಸ್ವಾಸ್ಥ್ಯಕ್ಕಾಗಿ’’ ಎನ್ನುವ ಮಾತುಗಳು ಸಿಟಿಯವರ ಸೊಗಲಾಡಿತನವನ್ನು ಬಿಚ್ಚಿಡುತ್ತದೆ.

ನಾಗರಾಜ ಶಿರಸಿ, ನವೀನಕುಮಾರ್ ಕುಣಜಿ, ಪ್ರೀತಿ ಹೆಗಡೆ, ಪುಷ್ಪಾ ರಾಘವೇಂದ್ರ ಸಾಗರ, ಮಾಧವ ಶರ್ಮಾ ಕಲಗಾರ, ಪ್ರಸನ್ನಕುಮಾರ ಎನ್.ಎಂ. ಸಾಗರ, ಸಂಧ್ಯಾ ಶಾಸ್ತ್ರಿ ಬೈರುಂಬೆ, ಕೇಶವ ಹೆಗಡೆ ಕಿಬ್ಳೆ, ಶ್ರೀರಾಮ ಯು. ಗೌಡ ಹೊಸೂರು, ನಂದಿತಾ ಭಾಗ್ವತ್‌ಯಲ್ಲಾಪುರ, ಸಮರ್ಥ ಹೊನ್ನೇಕೈ, ಯೋಗೀಶ ಕುಣಜಿ ಗಮನ ಸೆಳೆಯುತ್ತಾರೆ. ಹೀಗೆಂದಾಗ ಕೊರತೆಯಿಲ್ಲದ, ದೋಷಗಳಿಲ್ಲದ ನಾಟಕವಿದು ಎಂದಲ್ಲ. ಇನ್ನೊಂದೆರಡು ಪ್ರದರ್ಶನಗಳ ನಂತರ ಪಕ್ಕಾ ಆಗಲಿದೆ ಎನ್ನುವ ಭರವಸೆಯಿದೆ. ಮುಖ್ಯವಾಗಿ ತಾಲೀಮಿನ ಕೊರತೆಯ ಜೊತೆಗೆ ಮಾತುಗಳನ್ನು ಕಂಠಪಾಠ ಮಾಡದೆ ಅಂದರೆ ಒಪ್ಪಿಸದೆ ಅಭಿನಯಿಸಲಿ. ಇನ್ನು ತಾಂತ್ರಿಕ ಸಹಾಯದಲ್ಲಿ ಮುರುಗೇಶ್ ಬಸ್ತಿಕೊಪ್ಪ, ಗಣಪತಿ ಹೆಗಡೆ ವಡ್ಡಿನಗದ್ದೆ, ನಂದನಾ ಹೆಗಡೆ ಮಘೇಗಾರು, ಧಾತ್ರಿ ಜಿ.ಹೆಗಡೆ, ರಾಕೇಶ ಭಟ್ಟ ನೆರವಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಣೇಶ ಅಮೀನಗಡ

contributor

Similar News