ಅಕ್ಕಮಹಾದೇವಿಯಾಗುವ ಮಹಾದೇವ
‘‘ಅಜ್ಜಾವರ ಕಂಪನಿಯಲ್ಲಿ ಅದೇ ಮೊದಲ ಪಾತ್ರ. ನಂತರ ಉಕ್ಕಡಗಾತ್ರದಲ್ಲಿ ಕರಿಬಸವೇಶ್ವರ ಜಾತ್ರೆಯಲ್ಲಿ ಅಕ್ಕಮಹಾದೇವಿ ಪಾತ್ರಕ್ಕೆ ಬಣ್ಣ ಹಚ್ಚಿದೆ. ಅಲ್ಲಿಂದ 22 ವರ್ಷಗಳಿಂದ ಅಕ್ಕಮಹಾದೇವಿ ಪಾತ್ರ ಮಾಡುತ್ತಿರುವೆ’’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಮಹಾದೇವ.
ನೀವು ಅಜ್ಜಾವರ ಕಂಪನಿ ಅಂದರೆ ಗದಗಿನ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘದ ನಾಟಕಗಳನ್ನು ನೋಡಿದ್ದರೆ ಈ ಮಹಾದೇವ ಹೊಸೂರು ಅವರ ಪಾತ್ರಗಳನ್ನು ನೋಡಿರುತ್ತೀರಿ. ಆದರೆ ಅವರು ಬಣ್ಣ ಅಳಿಸಿದಾಗ ಇವರೇನಾ ಎಂದು ಅಚ್ಚರಿಪಡುತ್ತೀರಿ ಮತ್ತು ಹಾಗೆ ಅಚ್ಚರಿಪಟ್ಟವರಿದ್ದಾರೆ. ಅವರ ಹಾಗೆ ಕಂಪನಿಯಲ್ಲಿ ಉಳಿದ ಕಲಾವಿದರು ಪುರುಷರು. ಸ್ತ್ರೀಯರಿಲ್ಲ. ಪುರುಷರೇ ಸ್ತ್ರೀಪಾತ್ರಗಳನ್ನು ನಿರ್ವಹಿಸುವುದು ಈ ಕಂಪನಿಯ ವಿಶೇಷ. ಇಂಥ ಕಂಪನಿಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವವರು ಮಹಾದೇವ ಹೊಸೂರು.
ಅವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹೊಸೂರು ಗ್ರಾಮದವರು. ಅಲ್ಲಿ ಐದನೇ ತರಗತಿಯಲ್ಲಿ ಅವರು ಓದುತ್ತಿದ್ದಾಗ ಗ್ಯಾದರಿಂಗ್ ಅಂದರೆ ಶಾಲಾ ವಾರ್ಷಿಕೋತ್ಸವಕ್ಕೆಂದು ‘ದೇವಿ ಮಹಾತ್ಮೆ’ ನಾಟಕದಲ್ಲಿ ದೇವಿ ಪಾತ್ರಕ್ಕೆ ಮಹಾದೇವ ಅವರಿಗೆ ಶಿಕ್ಷಕರು ಬಣ್ಣ ಹಚ್ಚಿದರು. ‘‘ಭಾರೀ ಪಾತ್ರ ಮಾಡಿದ’’ ಎಂದು ಪ್ರಚಾರ ಸಿಕ್ಕಿತು. ಆಗ ಎಪ್ಪತ್ತು ರೂಪಾಯಿ ಆಯೇರಿ (ಕಾಣಿಕೆ)ಯೂ ಆಯಿತು. ಬಳಿಕ ಅವರ ಊರಿನ ಶಿರಾಜ್ ಸಾಹೇಬ್ ಮುರಾಜ್ ಸಾಹೇಬ್ ಪ್ರಸಿದ್ಧ ದರ್ಗಾದ ಜಾತ್ರೆಗೆ ರೇಣುಕಾದೇವಿ ನಾಟ್ಯ ಸಂಘದ ಎಚ್.ಆರ್.ಭಸ್ಮೆ ಅವರ ‘ಬಡವ ಬದುಕಲೇಬೇಕು’ ಸಾಮಾಜಿಕ ನಾಟಕದಲ್ಲಿ ಸುಜಾತಾ ಎಂಬ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದರು. ಹೇಗೆಂದರೆ; ನಾಯಕಿ ಪಾತ್ರ ಮಾಡುವ ಮಹಿಳೆ ಕೈಕೊಟ್ಟಿದ್ದರು. ಆಗ ಕಂಪನಿಯವರು ಮಹಾದೇವರ ಮನೆಯವರೆಗೆ ತೆರಳಿ ಕೇಳಿದಾಗ ಅವರಪ್ಪ ಮಲ್ಲಪ್ಪ ಗೂಟ್ಲಿ ಅವರು ಕರೆಯಲು ಬಂದವರನ್ನು ಬೈದು ಕಳಿಸಿದ್ದರು. ನಂತರ ತನ್ನ ತಂದೆಗೆ ಗೊತ್ತಾಗದಂತೆ ನಾಟಕದ ತಾಲೀಮಿಗೆ ಹೋದರು. ನಾಟಕದ ನಂತರ ‘‘ಈ ಹುಡುಗ ಚೆಂದ ಪಾತ್ರ ಮಾಡ್ತಾನ’’ ಅಂತ ಊರವರು ಮೆಚ್ಚಿದರು. ಹೀಗೆ ತಮ್ಮ ಊರಿನ ಸುತ್ತಮುತ್ತಲಿನ ಊರುಗಳಿಗೆ ಪಾತ್ರ ಮಾಡಲು ಹೋದರು. ರೈತಾಪಿ ಕುಟುಂಬ ಅವರದು. ಆದರೆ ಅವರಪ್ಪ ಹೆಚ್ಚು ದುಡಿಯುತ್ತಿರಲಿಲ್ಲ. ವಾರದವರೆಗೆ ದುಡಿದರೂ ನೂರು ರೂಪಾಯಿ ಕೂಲಿ ಸಿಗುತ್ತಿರಲಿಲ್ಲ. ಆದರೆ ನಾಟಕದ ದಿನ ಮಹಾದೇವರ ಪಾತ್ರಕ್ಕೆ 200-300 ಸಂಭಾವನೆ ಸಿಗುತ್ತಿತ್ತು. ಇದರೊಂದಿಗೆ ಆಯೇರಿಯೂ ಸಿಗುತ್ತಿತ್ತು. ಆಗ ಮನೆಯವರೆಲ್ಲ ದುಡಿಯುತ್ತಾನೆಂದು ಸುಮ್ಮನಾದರು. ಹೀಗಿರುವಾಗ ಮಹಾದೇವ ಅವರಿಗೆ ಶಾಲೆಗೆ ಹೋಗುವ ಆಸಕ್ತಿಯೇ ಕಡಿಮೆಯಾಯಿತು. ನಾಟಕದಿಂದ ಮೆಚ್ಚುಗೆ ಸಿಕ್ಕಿತು. ಒಂಭತ್ತನೇ ಪಾಸಾದ ಮೇಲೆ ಎಸೆಸೆಲ್ಸಿಗೆ ಹೋಗಲೇ ಇಲ್ಲ ಅವರು.
ಹೀಗಿರುವಾಗ ಗದಗಿನ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘದಲ್ಲಿ ನೃತ್ಯ, ಪಾತ್ರ ನಿರ್ವಹಿಸುವ, ಗಾಯಕ ಕೂಡಾ ಆಗಿದ್ದ ಬಾಬಣ್ಣ ಸಾಲಹಳ್ಳಿ ಅವರು ಬಾಗಲಕೋಟೆಗೆ ಬಂದಾಗ ಮಹಾದೇವ ಅವರನ್ನು ಭೇಟಿಯಾದರು. ‘‘ನಮ್ಮ ಅಜ್ಜಾವರ ಕಂಪನಿಗೆ ನೀ ಬರಬೇಕು. ಈ ಕಂಪನಿಯೊಳಗ ಗಂಡಸರೇ ಮಹಿಳೆಯರ ಪಾತ್ರ ಮಾಡೋದು. ನೀನು ಬಾ’’ ಅಂತ ಕರೆದುಕೊಂಡು ಹೋದರು. ಆಗ ಅಜ್ಜವರ ಕಂಪನಿ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿತ್ತು. ಈ ಅಜ್ಜಾವರ ಕಂಪನಿಯು ಯಾವುದೇ ಊರಲ್ಲಿ ಮೊಕ್ಕಾಂ ಮಾಡಿದಾಗ ಪುಟ್ಟರಾಜ ಗವಾಯಿಗಳವರ ರಚನೆಯ ‘ಅಕ್ಕಮಹಾದೇವಿ’ ನಾಟಕವಾಡುತ್ತಿತ್ತು. ಆಗ ಅಕ್ಕಮಹಾದೇವಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದ ವಿರೂಪಾಕ್ಷಯ್ಯಸ್ವಾಮಿ ದೇನಾಳ ಅವರಿಗೆ ವಯಸ್ಸಾಗಿತ್ತು. ಪುಟ್ಟರಾಜ ಗವಾಯಿಗಳ ಎದುರು ‘‘ಅಕ್ಕಮಹಾದೇವಿ ಪಾತ್ರ ಮಾಡಲು ಕಷ್ಟವಾಗ್ತದ. ಮುಂದ ಅಕ್ಕಮಹಾದೇವಿ ನಾಟಕವಾಡಲ್ಲ. ನನಗ ವಯಸ್ಸಾಗಿದೆ. ಸೂಕ್ತವಾಗಲ್ಲ’’ ಎಂದಿದ್ದರಂತೆ.
‘‘ಕುಷ್ಟಗಿ ಕ್ಯಾಂಪಿಗೆ ಪಾತ್ರ ಮಾಡು. ಮುಂದಿನ ಕ್ಯಾಂಪಿಗೆ ಕುಮಾರೇಶ (ಹಾನಗಲ್ ಕುಮಾರಸ್ವಾಮಿಗಳು) ಕಳಸ್ತಾನ’’ ಅಂದಿದ್ದರಂತೆ ಪುಟ್ಟರಾಜ ಗವಾಯಿಗಳು. ಅಷ್ಟೊತ್ತಿಗೆ ಕಂಪನಿಯಲ್ಲಿ ಚಿದಾನಂದಪ್ಪ ಅಬ್ಬಿಗೇರಿ, ಸಂಜೀವಪ್ಪ ಕಬ್ಬೂರು, ವಿಜಯಾನಂದ ಮಾನ್ವಿ, ಸೋಮು ಜಮಖಂಡಿ ಜೊತೆಗೆ ಬಾಬಣ್ಣ ಸಾಲಹಳ್ಳಿ ಅವರೆಲ್ಲ ಸ್ತ್ರೀಪಾತ್ರಗಳಿಗೆ ಪ್ರಸಿದ್ಧರಾಗಿದ್ದರು. ಪಿ.ಬಿ.ಧುತ್ತರಗಿ ಅವರ ‘ಮಲಮಗಳು’ ನಾಟಕವಾಡುತ್ತಿದ್ದರು. ಅವರ ಪಾತ್ರಗಳನ್ನು ನೋಡಿದ ಮಹಾದೇವ ಅವರಿಗೆ ಅಳುಕಿತ್ತು. ‘ಯಾವ ಸಿನೆಮಾ ನಾಯಕಿಯರಿಗಿಂತ ಕಡಿಮೆಯಿಲ್ಲ’ ಎಂದು ಗೊತ್ತಾಯಿತು. ‘‘ಆಗ ವಿರೂಪಾಕ್ಷಯ್ಯ ಅವರು ಅಕ್ಕಮಹಾದೇವಿ ಪಾತ್ರ ಮಾಡೆಂದರು. ಹಿಂಜರಿದೆ. ವಿರೂಪಾಕ್ಷಯ್ಯ ಅವರು ಧೈರ್ಯ ತುಂಬಿದರು. ಆಗ ಕಂಪನಿಯ ವ್ಯವಸ್ಥಾಪಕ ಕರೀಂಸಾಬ್ ದೇವಗಿರಿ ಅವರು ‘ಕಂಪನಿ ಕಲಾವಿದನಾದ್ರ ತಿಂಗಳಿಗೆ ಎರಡು ಸಾವಿರ ರೂಪಾಯಿ ಪಗಾರ ಕೊಡ್ತೀವಿ’ ಅಂದ್ರು. ಮನೆಗೆ ಫೋನ್ ಮಾಡಿ ತಿಳಿಸಿದಾಗ ಸಂತೋಷಪಟ್ಟರು.’’ ಎನ್ನುತ್ತಾರೆ ಮಹಾದೇವ. ಕುಷ್ಟಗಿಯಿಂದ ಹಾವೇರಿ ಜಿಲ್ಲೆಯ ಮೈಲಾರ ಜಾತ್ರೆಯ ಮೊಕ್ಕಾಂನಲ್ಲಿ ‘ಮಲಮಗಳು’ ನಾಟಕ ಪ್ರದರ್ಶನಗೊಂಡು ಯಶಸ್ವಿಯಾಯಿತು. ಆಗ ಕಂಪನಿಯಲ್ಲಿ ಎಚ್.ಎನ್. ಹೂಗಾರ ಅವರ ಕೊರವಂಜಿ ನಾಟಕವನ್ನು ಕಾಯಂ ಪ್ರದರ್ಶಿಸುತ್ತಿದ್ದರು. ಈ ನಾಟಕದ ಎರಡನೇ ನಾಯಕಿ ಶಾಂತಾ ಪಾತ್ರಕ್ಕೆ ಮಹಾದೇವ ಬಣ್ಣ ಹಚ್ಚಿದರು. ‘‘ಅಜ್ಜಾವರ ಕಂಪನಿಯಲ್ಲಿ ಅದೇ ಮೊದಲ ಪಾತ್ರ. ನಂತರ ಉಕ್ಕಡಗಾತ್ರದಲ್ಲಿ ಕರಿಬಸವೇಶ್ವರ ಜಾತ್ರೆಯಲ್ಲಿ ಅಕ್ಕಮಹಾದೇವಿ ಪಾತ್ರಕ್ಕೆ ಬಣ್ಣ ಹಚ್ಚಿದೆ. ಅಲ್ಲಿಂದ 22 ವರ್ಷಗಳಿಂದ ಅಕ್ಕಮಹಾದೇವಿ ಪಾತ್ರ ಮಾಡುತ್ತಿರುವೆ’’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
ಇದರೊಂದಿಗೆ ನಲವಡಿ ಶ್ರೀಕಂಠ ಶಾಸ್ತ್ರಿಗಳ ಹೇಮರಡ್ಡಿ ಮಲ್ಲಮ್ಮ ನಾಟಕದಲ್ಲಿ ಮಲ್ಲಮ್ಮ, ಕಂದಗಲ್ಲ ಹನುಮಂತರಾಯರ ‘ರಕ್ತರಾತ್ರಿ’ ನಾಟಕದಲ್ಲಿ ದ್ರೌಪದಿ, ಎನ್.ಎಸ್.ಜೋಶಿ ಅವರ ‘ಬಂಜೆತೊಟ್ಟಿಲು’ ನಾಟಕದಲ್ಲಿ ಸಾವಿತ್ರಿ, ಎಚ್.ಎನ್.ಸಾಳುಂಕೆ ಅವರ ‘ವರ ನೋಡಿ ಹೆಣ್ಣು ಕೊಡು’ ನಾಟಕದಲ್ಲಿ ನಾಯಕಿ ಶೈಲಾ ಪಾತ್ರ, ಸಾಳುಂಕೆ ಅವರ ‘ಕಿವುಡ ಮಾಡಿದ ಕಿತಾಪತಿ’ ನಾಟಕದಲ್ಲಿ ನಾಯಕಿ ಗೀತಾ ಪಾತ್ರದ ಜೊತೆಗೆ ಈಚೆಗೆ ಹಾಸ್ಯಪಾತ್ರ ನಿರ್ವಹಿಸುತ್ತಾರೆ. ಈಚಿನ ವರ್ಷಗಳಲ್ಲಿ ಬಿ.ಆರ್.ಅರಿಶಿನಗೋಡಿ ಅವರ ‘ಬಸ್ ಕಂಡಕ್ಟರ್’ ಅರ್ಥಾತ್ ‘ಖಾನಾವಳಿ ಚೆನ್ನಿ’ ನಾಟಕದಲ್ಲಿ ಚೆನ್ನಿ ಪಾತ್ರವನ್ನು ರಾಜು ತಾಳಿಕೋಟಿ ಅವರೊಂದಿಗೆ ನಟಿಸಿದರು. ಚೆನ್ನಿ ಪಾತ್ರವನ್ನು ರಾಜು ತಾಳಿಕೋಟಿ ಕಲಿಸಿದರೆಂಬ ಹೆಮ್ಮೆ ಅವರಿಗೆ. ಹೀಗೆ ಸಾಗಿದ ಅವರ ಬಣ್ಣದ ಬದುಕಿನಲ್ಲಿ ದೊಡ್ಡ ತಿರುವು ಸಿಕ್ಕಿತು. 2016ರಿಂದ ಕಂಪನಿಯ ಜವಾಬ್ದಾರಿಯನ್ನು ಕಲ್ಲಯ್ಯ ಅಜ್ಜಾವರು ಮಹಾದೇವ ಅವರಿಗೆ ಕೊಟ್ಟರು. ಅಲ್ಲಿಂದ ಪಾತ್ರಗಳ ಜೊತೆಗೆ ಕಂಪನಿಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದರೊಂದಿಗೆ ‘ಮತ್ತೊಮ್ಮೆ ಬಾ ಮುತ್ತೈದೆಯಾಗಿ’ ನಾಟಕ ರಚಿಸಿದ್ದು, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಅವರ ಕಂಪನಿಯು ಮೊಕ್ಕಾಂ ಹೂಡಿದಾಗ 150 ಪ್ರಯೋಗಗಳನ್ನು ಕಂಡಿತು. ಈ ನಾಟಕದ ಆದಾಯ 11 ಲಕ್ಷ ರೂಪಾಯಿ; ಖರ್ಚುವೆಚ್ಚ ಬಿಟ್ಟು. ಹೀಗೆ ಬಂದ ಆದಾಯವನ್ನು ಗದಗ ಪುಟ್ಟರಾಜ ಗವಾಯಿಗಳ ಆಶ್ರಮಕ್ಕೆ ಹೊಸ ತೇರು (ರಥ) ನಿರ್ಮಾಣಕ್ಕೆ ಕಾಣಿಕೆಯಾಗಿ ನೀಡಿದರು. ಇದೇ ನಾಟಕವನ್ನು ‘ಗಂಗಿ ಮನ್ಯಾಗ ಗೌರಿ ಹೊಲದಾಗ’ ಹೆಸರು ಬದಲಾಯಿಸಿ ಜೇವರ್ಗಿ ರಾಜಣ್ಣ ಅವರು ತಮ್ಮ ವಿಶ್ವಜ್ಯೋತಿ ಪಂಚಾಕ್ಷರ ನಾಟ್ಯ ಸಂಘದಿಂದ ಪ್ರದರ್ಶಿಸಿದರು.
ಅವರ ಎರಡನೆಯ ನಾಟಕ ‘ಅಕ್ಕ ಅಂಗಾರ ತಂಗಿ ಬಂಗಾರ’ ರಚಿಸಿದ್ದು, ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಒಳ್ಳೆಯ ಕಲೆಕ್ಷನ್ ಕೊಟ್ಟಿದೆ. ಬನಶಂಕರಿ ಜಾತ್ರೆಯಲ್ಲಿ ಈ ನಾಟಕವನ್ನು ಜೇವರ್ಗಿ ರಾಜಣ್ಣ ತಮ್ಮ ಕಂಪನಿಯಿಂದ ಆಡಿ ಲಾಭ ಕಂಡರು. ಹೀಗೆಯೇ ಧಾರವಾಡ ಆಕಾಶವಾಣಿಗೆ ಹೇಮರಡ್ಡಿ ಮಲ್ಲಮ್ಮ, ಪುಟ್ಟರಾಜ ಗವಾಯಿಗಳು ರಚಿಸಿದ ‘ಶ್ರೀ ಹಾನಗಲ್ ಕುಮಾರೇಶ್ವರ ಮಹಾತ್ಮೆ’ ನಾಟಕವನ್ನು ಸಿದ್ಧಪಡಿಸಿ, ನಿರ್ದೇಶಿಸಿದ್ದಾರೆ. ಗದಗ ಜಿಲ್ಲೆಯ ಮುಳಗುಂದದಲ್ಲಿ ಅವರ ಕಂಪನಿಯು ಕ್ಯಾಂಪು ಇದ್ದಾಗ ಡಾ.ಬಸೆಟ್ಟಿ ರಚನೆಯ ‘ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ಮಹಾತ್ಮೆ’ ನಾಟಕವನ್ನು ಮಹಾದೇವ ಹೊಸೂರು ನಿರ್ದೇಶಿಸಿ, ಮಹಾಂತ ಶಿವಯೋಗಿಗಳ ಪಾತ್ರಕ್ಕೆ ಬಣ್ಣ ಹಚ್ಚಿದರು. ಇದು ಅವರ ಮೊದಲ ಪುರುಷ ಪಾತ್ರ. ಈ ನಾಟಕವೂ ಯಶಸ್ವಿಯಾಯಿತು.
ಹೀಗೆ ಬಣ್ಣದ ಬದುಕನ್ನೇ ಸಾಗಿಸುತ್ತಿರುವ ಮಹಾದೇವ ಅವರಿಗೆ ಈಗ 43 ವರ್ಷ ವಯಸ್ಸಷ್ಟೇ. ಕರ್ನಾಟಕ ನಾಟಕ ಅಕಾಡಮಿಯ ವಾರ್ಷಿಕ ಪ್ರಶಸ್ತಿ ಪುರಸ್ಕೃತರು. ಸದ್ಯ ಕೊಪ್ಪಳ ಜಿಲ್ಲೆಯ ಹಿರೇಸಿಂದೋಗಿಯಲ್ಲಿ ಅವರ ಕಂಪನಿಯ ಕ್ಯಾಂಪಿದೆ. ಅವರ ಹೊಸ ನಾಟಕವನ್ನು ರಚಿಸಿದ್ದು, ಹಿರೇಸಿಂದೋಗಿಯಿಂದಲೇ ಜನವರಿ ಮೊದಲ ವಾರದಲ್ಲಿರುವ ಕೊಪ್ಪಳದ ಜಾತ್ರೆಯಲ್ಲಿ ಪ್ರದರ್ಶಿಸಲಿದ್ದಾರೆ. ಅವರ ಪತ್ನಿ ಭಾರತಿ ಅವರು ಮಕ್ಕಳಾದ ಮಲ್ಲಿಕಾರ್ಜುನ ಹಾಗೂ ಕುಮಾರೇಶ ಅವರೊಂದಿಗೆ ಹೊಸೂರು ಗ್ರಾಮದಲ್ಲಿದ್ದಾರೆ.