ಮುತ್ತಿನ ನಗರಿಯ ಮುತ್ತಿನಂಥ ‘ನಾಟ್ಯರಂಗ’

ಹೈದರಾಬಾದಿನಲ್ಲಿ ನೆಲೆ ನಿಂತು ರಂಗಭೂಮಿ ಚಟುವಟಿಕೆ ನಡೆಸುವ ‘ಕನ್ನಡ ನಾಟ್ಯರಂಗ’ ಗಮನಾರ್ಹವಾದುದು. ಇದರ ಸಂಸ್ಥಾಪಕ ಕೆರೋಡಿ ಗುಂಡೂರಾಯರು. ಅನ್ಯ ರಾಜ್ಯದಲ್ಲಿ ಕನ್ನಡ ಸಂಘವನ್ನು ಕಟ್ಟಿ ಬೆಳೆಸುವುದು ಸಾಮಾನ್ಯವಲ್ಲ. ಅದರಲ್ಲೂ ಹವ್ಯಾಸಿ ತಂಡವಾದ ನಾಟ್ಯರಂಗ 55 ವರ್ಷಗಳಿಂದ ಮುನ್ನಡೆದಿದೆ ಎಂದರೆ ಸಾಧನೆಯೇ ಸರಿ.

Update: 2024-02-23 06:04 GMT

ಕರಾವಳಿಯವರು ಹಾಗೆಯೇ. ಇದ್ದಲ್ಲಿ ನೆಲೆಯೂರಿ, ಸ್ಥಳೀಯ ಸಂಘಟನೆಗಳಲ್ಲಿ ತೊಡಗಿಕೊಂಡು ನಂತರ ತಾವೇ ಸಂಘಗಳನ್ನು ಆರಂಭಿಸಿ ಕರಾವಳಿಯ ಯಕ್ಷಗಾನ, ನಾಟಕ ತರಿಸಿ ಆಡಿಸುತ್ತಾರೆ. ಇದಕ್ಕೆ ಹೈದರಾಬಾದಿನ ಕನ್ನಡ ನಾಟ್ಯರಂಗ ಅತ್ಯುತ್ತಮ ಉದಾಹರಣೆ. ಇದರ ಅಧ್ಯಕ್ಷರಾದ ಮಾರಣಕಟ್ಟೆ ಕೃಷ್ಣಮೂರ್ತಿ ಅವರು ಮೂಲತಃ ಕುಂದಾಪುರ ಹತ್ತಿರದ ಮಾರಣಕಟ್ಟೆಯವರು. ಚಿಕ್ಕವಯಸ್ಸಿನಲ್ಲಿ ಹೈದರಾಬಾದಿಗೆ ದುಡಿಯಲು ಹೋಗಿ, ಹೊಟೇಲಲ್ಲಿ ಕೆಲಸ ಮಾಡಿ, ಈಗ ಅವರೇ ಹತ್ತಾರು ಹೊಟೇಲುಗಳ ಮಾಲಕರು ಜೊತೆಗೆ ಸಾಂಸ್ಕೃತಿಕ ಪೋಷಕರು. ಇದರ ಪರಿಣಾಮ; ಕನ್ನಡದ ನಾಟಕ, ಯಕ್ಷಗಾನ ನೋಡಲು ಅಲ್ಲಿನ ಕನ್ನಡಿಗರಿಗೆ ಸಾಧ್ಯವಾಗುತ್ತಿದೆ.

ಇರಲಿ, ಹೈದರಾಬಾದಿಗೆ ಮುತ್ತಿನ ನಗರಿ, ಭಾಗ್ಯನಗರ ಎನ್ನುವುದು ನಿಮಗೆ ಗೊತ್ತಿದೆ. ಆದರೆ ಅಲ್ಲಿ ನೆಲೆ ನಿಂತು ರಂಗಭೂಮಿ ಚಟುವಟಿಕೆ ನಡೆಸುವ ‘ಕನ್ನಡ ನಾಟ್ಯರಂಗ’ ಗಮನಾರ್ಹವಾದುದು. ಇದರ ಸಂಸ್ಥಾಪಕ ಕೆರೋಡಿ ಗುಂಡೂರಾಯರು. ಅನ್ಯ ರಾಜ್ಯದಲ್ಲಿ ಕನ್ನಡ ಸಂಘವನ್ನು ಕಟ್ಟಿ ಬೆಳೆಸುವುದು ಸಾಮಾನ್ಯವಲ್ಲ. ಅದರಲ್ಲೂ ಹವ್ಯಾಸಿ ತಂಡವಾದ ನಾಟ್ಯರಂಗ 55 ವರ್ಷಗಳಿಂದ ಮುನ್ನಡೆದಿದೆ ಎಂದರೆ ಸಾಧನೆಯೇ ಸರಿ.

ಸುವರ್ಣ ಮಹೋತ್ಸವ ಆಚರಿಸಿದ್ದಲ್ಲದೆ, ಈಗಲೂ ನಾಟಕಗಳನ್ನು ಆಡುತ್ತ, ಆಡಿಸುತ್ತಿರುವ ನಾಟ್ಯರಂಗವನ್ನು ಪೋಷಿಸಿ ಬೆಳೆಸಿದವರು ಗುಂಡೂರಾವ್ ದಂಪತಿ.

ಗುಂಡೂರಾಯರ ಮಾರ್ಗದರ್ಶನದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡದ ಹಲವಾರು ಗಣ್ಯರು ಈ ಸಂಸ್ಥೆಯ ಏಳಿಗೆಗಾಗಿ ದುಡಿದಿದ್ದಾರೆ. ಹೈದರಾಬಾದ್-ಸಿಕಂದರಾಬಾದ್ ಜಂಟಿ ನಗರದ ಕನ್ನಡದವರಿಗೆ ನಿರಂತರವಾಗಿ ನಾಟಕ, ನೃತ್ಯ, ಸಂಗೀತ ಹಾಗೂ ಯಕ್ಷಗಾನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಿರುವ ಏಕೈಕ ಸಂಸ್ಥೆ ನಾಟ್ಯರಂಗ.

ಹೊರನಾಡಿನಲ್ಲಿ ಕನ್ನಡಿಗರನ್ನು ಒಂದು ಗೂಡಿಸಿ, ಕಲಾವಿದರಿಗೆ ತರಬೇತಿ ನೀಡಿ ನಾಟಕ ಆಡಿಸುವುದು ಸುಲಭವಲ್ಲ. ಇದನ್ನು ಸಾಧಿಸಿದ್ದು ಗುಂಡೂರಾವ್.

ಅವರಿಗೆ ರಂಗಭೂಮಿ ಆಸಕ್ತಿ ಬಂದುದು ಅವರ ತಂದೆ ಕೆರೋಡಿ ನರಸಿಂಗರಾವ್ ಮತ್ತು ಅಜ್ಜ ಕೆರೋಡಿ ಸುಬ್ಬರಾಯ ಅವರಿಂದ. ಅಜ್ಜ ಸುಬ್ಬರಾಯರು ನವೋದಯ ಕಾಲದ ಸಾಹಿತಿ. ತಂದೆ ನರಸಿಂಗರಾವ್ ಸಂಗೀತ, ನಾಟಕಗಳಲ್ಲಿ ಅಭಿರುಚಿ ಹೊಂದಿದ್ದರು. ಇಂಥ ವಾತಾವರಣ ಇರುವಾಗ ಗುಂಡೂರಾಯರು ಕುತ್ಪಾಡಿ ಮನೆಯಂಗಳದಲ್ಲಿ ರಂಗಭೂಮಿ ಪ್ರವೇಶಿಸಿದರು. ತಾನೇ ರಚಿಸಿದ್ದ ಪ್ರಥಮ ನಾಟಕ ‘ದ್ರೌಪದಿ ಸ್ವಯಂವರ’ದಲ್ಲಿ, ಹನ್ನೆರಡನೆಯ ವಯಸ್ಸಿನಲ್ಲಿ. ಅವರ ತಂದೆ ಸ್ಥಾಪಿಸಿದ್ದ ಲಕ್ಷ್ಮೀ ನರಸಿಂಹ ನಾಟಕ ಮಂಡಳಿಯ ಮೂಲಕ ಪಾತ್ರಗಳಿಗೆ ಬಣ್ಣ ಹಚ್ಚಿದರು. ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ರಚಿಸಿದ ‘ದೀಪಾವಳಿ’ ನಾಟಕವನ್ನು ಅವರ ತಂದೆ ನರಸಿಂಗರಾಯರೇ ನಿರ್ದೇಶಿಸಿದ್ದು ಗಮನಾರ್ಹ.

1950ರಲ್ಲಿ ಪತ್ನಿ ಸುಕನ್ಯಾ ಅವರೊಂದಿಗೆ ಹೈದರಾಬಾದಿಗೆ ತೆರಳಿದ ಗುಂಡೂರಾಯರು ಅಲ್ಲಿಯ ಹಲವು ಖಾಸಗಿ ಹಾಗೂ ಸರಕಾರಿ ಶಾಲೆಗಳಲ್ಲಿ ಅಧ್ಯಾಪಕರಾದರು.

ಮದುವೆಯಾದಾಗ ಕೇವಲ ಮೆಟ್ರಿಕ್ ಪಾಸಾಗಿದ್ದ ಅವರ ಪತ್ನಿ ಸುಕನ್ಯಾ ನಾಲ್ಕು ಮಕ್ಕಳನ್ನು ಹೆತ್ತ ಬಳಿಕ, ಪತಿಯ ಪ್ರೋತ್ಸಾಹ ಹಾಗೂ ಶ್ರಮದಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದರು ಜೊತೆಗೆ ಅಲ್ಲಿನ ರೆಡ್ಡಿ ಮಹಿಳಾ ಕಾಲೇಜಿನಲ್ಲಿ ಅಧ್ಯಾಪಕಿಯಾದರು. ವೃತ್ತಿಯಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಗುಂಡೂರಾಯರಿಗೆ, ತಮ್ಮ ತಂದೆಯ ಆಶಯದಂತೆ ಕನ್ನಡ ಸಾಂಸ್ಕೃತಿಕ ಸಂಘವೊಂದನ್ನು ಸ್ಥಾಪಿಸುವ ತೀವ್ರ ಹಂಬಲವಿತ್ತು. 1968 ರಲ್ಲಿ ಹೈದರಾಬಾದ್, ಲಿಂಗಂಪಲ್ಲಿ ರಾಘವೇಂದ್ರ ಸ್ವಾಮಿ ಮಠದ ಸಹಾಯಾರ್ಥವಾಗಿ ನಾಟಕವನ್ನು ಆಡಿಸುವ ಉದ್ದೇಶದಿಂದ ಕೆಲವು ಹವ್ಯಾಸಿ ನಟರನ್ನು ಕಲೆ ಹಾಕಿದರು. ಪರ್ವತವಾಣಿಯವರ ‘ಬಹಾದ್ದೂರ್ ಗಂಡ’ ಎಂಬ ನಾಟಕವು ಗುಂಡೂರಾಯರ ನಿರ್ದೇಶನದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು.

ನಾಟ್ಯರಂಗದ ಮೊದಲ ಅಧ್ಯಕ್ಷರಾಗಿ ಎಸ್.ಪುಟ್ಟಣ್ಣಯ್ಯ, ಗುಂಡೂರಾಯರು ಉಪಾಧ್ಯಕ್ಷರಾಗಿ, ಪಿ.ಕೆ.ಆಚಾರ್ಯರು ಕಾರ್ಯದರ್ಶಿಯಾಗಿ ಆಯ್ಕೆಗೊಂಡರು. ಇವರಿಗೆ ಪ್ರೋತ್ಸಾಹವನ್ನಿತ್ತವರು ಹೈದರಾಬಾದ್ ತಾಜ್‌ಮಹಲ್ ಹೊಟೇಲ್ ಮಾಲಕ ಸಹೋದರರಾದ ಬಾಬುರಾಯರು ಮತ್ತು ಸುಂದರರಾಯರು. ಈ ಸಂಘಕ್ಕೆ ಬಂದ ನೂರಾರು ಕಲಾವಿದರಿಗೆ ತರಬೇತಿ ನೀಡಿ ನಾಟಕ ಆಡಿಸಿದರು. ಹೈದರಾಬಾದ್‌ನಲ್ಲಿ ಮಾತ್ರವಲ್ಲದೆ, ಬೀದರ್, ಬಳ್ಳಾರಿ, ಬೆಂಗಳೂರು, ಹೊಸಪೇಟೆ, ಗುಲ್ಬರ್ಗ, ಮೈಸೂರು, ರಾಯಚೂರು, ಸಿಂಧನೂರು ಅಲ್ಲದೆ ಮುಂಬೈ, ಪುಣೆಯಲ್ಲಿ ಒಟ್ಟು 16 ನಾಟಕ ಪ್ರದರ್ಶನಗಳನ್ನಿತ್ತು ನಾಟ್ಯರಂಗದ ಸಾಧನೆ ಗಮನಾರ್ಹವಾಯಿತು. ಇದರಲ್ಲಿ ಗುಂಡೂರಾಯರ ಸ್ವರಚಿತ, ನಿರ್ದೇಶಿತ ‘ವಿಷಕನ್ಯೆ’ ಒಂಭತ್ತು ಪ್ರದರ್ಶನಗಳನ್ನು ಕಂಡಿತು. ‘ಸತೀ ತುಲಸೀ’, ಕುರುಡು ಕಾಂಚಾಣ, ಅಕ್ಷಯಾಂಬರ ಮೊದಲಾದ ನಾಟಕಗಳು ಕೀರ್ತಿ ಕೊಟ್ಟವು. ಆದರೆ ಕಲಾವಿದರ ತಂಡ ಕಟ್ಟುವುದರಲ್ಲಿ ಹಲವಾರು ಅಡ್ಡಿ, ಆತಂಕಗಳು ಎದುರಾದರೂ ನಾಟಕಗಳು ಮರೆಸಿದವು.

ಗುಂಡೂರಾಯರು ಕೇವಲ ನಾಟಕ ರಚಿಸದೆ, ಅವುಗಳನ್ನು ಪ್ರದರ್ಶಿಸಿದರು. ಹೀಗೆ ಹೈದರಾಬಾದಿನಲ್ಲಿ ತಮ್ಮ ಬದುಕಿನ ಕೊನೆಯ ದಿನಗಳವರೆಗೂ ನಾಟಕಗಳನ್ನು ಆಡುತ್ತಾ, ಆಡಿಸುತ್ತಾ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಮುಖ್ಯವಾಗಿ ಗುಂಡೂರಾಯರು ನಾಟಕಗಳ ರಚನೆಗೆ ತೊಡಗಿದ್ದು ತಮ್ಮ 10-12ನೆಯ ವಯಸ್ಸಿನಲ್ಲಿ. ಪುರಾಣ, ಇತಿಹಾಸ ಹಾಗೂ ಸಾಮಾಜಿಕ ವಿಷಯಗಳನ್ನು ನಾಟಕದ ಸಾಹಿತ್ಯಕ್ಕೆ ಬಳಸಿಕೊಂಡಿದ್ದರು. ಸಂಗೀತ ಮತ್ತು ನೃತ್ಯಗಳು ನಾಟಕದ ಅವಿಭಾಜ್ಯ ಅಂಗಗಳೆಂದುಕೊಂಡಿದ್ದ ಅವರು ದ್ರೌಪದೀ ಸ್ವಯಂವರ, ದೀಪಾವಳಿ (ನರಕಾಸುರ ವಧೆ), ವಜ್ರಾಯುಧ (ವೃತ್ರಾಸುರ ವಧೆ) ಮುಂತಾದ ಪೌರಾಣಿಕ ನಾಟಕಗಳು, ಹೊಯ್ಸಳ ವೀರ ಎರೆಯಂಗ, ವಿಷಕನ್ಯೆ ಮುಂತಾದ ಐತಿಹಾಸಿಕ ನಾಟಕಗಳು ಅಲ್ಲದೆ ಮೈಸೂರ ಮಲ್ಲಿ, ಪವಿತ್ರ ಪ್ರೇಮ, ವಿಚಿತ್ರ ಸಮಾಜ (ಮನೆ ಅಳಿಯ), ಧನಪ್ರಭಾವ ಮುಂತಾದ ಸಾಮಾಜಿಕವಾದ ಸಂಗೀತ ಪ್ರಧಾನ ನಾಟಕಗಳನ್ನು ರಚಿಸಿದ್ದರು. ಷೇಕ್ಸ್‌ಪಿಯರ್‌ನ ‘ಟೇಮಿಂಗ್ ಆಫ್ ದಿ ಶೂ’ ಕನ್ನಡ ರೂಪಾಂತರವಾಗಿ ‘ಬಹಾದ್ದೂರ ಗಂಡ’ ನಾಟಕವಾಯಿತು. ಬರ್ನಾಡ್ ಷಾರ ಪಿಗ್ಮೇಲಿಯನ್ ನಾಟಕದ ಭಾವಾನುವಾದ ‘ಮೈಸೂರ ಮಲ್ಲಿ’ ನಾಟಕವಾಯಿತು. ಈ ನಾಟಕದಲ್ಲಿ ಅವರು ವಿಧ ವಿಧವಾದ ಕನ್ನಡಗಳನ್ನು ಬಳಸಿದ್ದಾರೆ. ಇದರಿಂದ ಗುಂಡೂರಾಯರ ಭಾಷಾ ಪಾಂಡಿತ್ಯ ಅರ್ಥವಾಗುವುದು. ಆದರೆ ಭಾಷೆಯು ನಾಟಕದಲ್ಲಿ ಜೀವಾಳವಾಗಬಲ್ಲದು ಎಂಬುದನ್ನು ಸಾಬೀತುಪಡಿಸಿ ತೋರಿಸಿಕೊಟ್ಟರು.

ಹೀಗೆ 1968 -2023ರ ಅವಧಿಯಲ್ಲಿ ನಾಟ್ಯರಂಗದ ವತಿಯಿಂದ ಸುಮಾರು 45 ನಾಟಕಗಳು ಪ್ರದರ್ಶಶನಗೊಂಡವು. ಇವುಗಳಲ್ಲಿ 39 ನಾಟಕಗಳ ನಿರ್ದೇಶನ ಸ್ವತಃ ಗುಂಡೂರಾಯರದ್ದೇ ಆಗಿದೆ. ಎಲ್ಲ ನಾಟಕಗಳಿಗೂ ಗುಂಡೂರಾಯರೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಎಂಭತ್ತರ ಹರೆಯದಲ್ಲೂ ಅತ್ಯತ್ಸಾಹದಿಂದ ನಾಟಕ ನಿರ್ದೇಶನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 2001ರಲ್ಲಿ ದೇವಯಾನಿ, 2002ರಲ್ಲಿ ಅಕ್ಕಪಕ್ಕ, 2003ರಲ್ಲಿ ಹೊಯ್ಸಳೇಶ್ವರ ವಿಷ್ಣುವರ್ಧನ, ಹವಳ ಹಬ್ಬದ ಸಂಭ್ರಮದ ಪ್ರಯುಕ್ತ 2003ರಲ್ಲಿ ಭಕ್ತ ವಿದುರ, 2004ರಲ್ಲಿ ವಸಂತಸೇನೆ, 2006ರಲ್ಲಿ ಗಾಂಪರ ಗುಂಪು, 2008ರಲ್ಲಿ ನಾಟ್ಯರಂಗದ 40ನೇ ವರ್ಷದ ರನ್ನ ಕೆಂಪಿನ ಹಬ್ಬದಲ್ಲಿ ಅಮೋಘ ವರ್ಷ ನೃಪತುಂಗ ನಾಟಕಗಳು ಅವರ ನಿರ್ದೇಶನದಲ್ಲಿ ಪ್ರದರ್ಶಿಸಲ್ಪಟ್ಟವು. 2010ರಲ್ಲಿ ಪ್ರದರ್ಶಿತವಾದದ್ದು ಸನ್ಮಾನ.

ಗುಂಡೂರಾಯರ ಅಜ್ಜ ಕೆರೋಡಿ ಸುಬ್ಬರಾಯರ ಕೃತಿಗಳ ಕುರಿತು ವಿಚಾರ ಸಂಕಿರಣ 2007ರಲ್ಲಿ ಹೈದರಾಬಾದಿನ ಕರ್ನಾಟಕ ಸಾಹಿತ್ಯ ಮಂದಿರದಲ್ಲಿ ಆಯೋಜಿಸಿದಾಗ ಮೈಸೂರಿನ ರಂಗಾಯಣ ತಂಡವು ಸುಬ್ಬರಾಯರ ವಿಡಂಬನಾತ್ಮಕ ಯಕ್ಷಗಾನ ಬ್ಯಾಲೆ ಪಲಾಂಡು ಚರಿತ್ರೆಯು ಪ್ರೇಕ್ಷಕರ ಮನಸೂರೆಗೊಂಡಿತ್ತು.

ರಂಗಭೂಮಿಯು ಬದ್ಧತೆ ಮತ್ತು ನಿಷ್ಠೆಯನ್ನು ಬಯಸುತ್ತದೆ ಎಂದು ನಂಬಿದ್ದ ಅವರು, ಆಲಸ್ಯಕ್ಕೆ ಅವಕಾಶ ಕೊಡಲಿಲ್ಲ. ಇದರಿಂದ ಶಿಸ್ತು ಹಾಗೂ ಸಮಯ ಪಾಲನೆಗೆ ಆದ್ಯತೆ ನೀಡಿದರು. ಹೈದರಾಬಾದಿನ ಕೋಠಿಯ ತಮ್ಮ ಸಣ್ಣ ಮನೆಯಲ್ಲಿಯೇ ಕೇವಲ ಕನ್ನಡಿಗರನ್ನಲ್ಲದೆ, ಕೆಲವು ತೆಲುಗು ನಟನಟಿಯರನ್ನು ಕೂಡಾ ಕಲೆ ಹಾಕಿ, ತೆಲುಗಿನಲ್ಲಿ ಕನ್ನಡ ಸಂಭಾಷಣೆಯನ್ನು ಬರೆದುಕೊಟ್ಟು ಬಾಯಿ ಪಾಠ ಮಾಡಿಸಿ, ನಾಟಕ ಆಡಿಸಿದರು.

ಗುಂಡೂರಾವ್, ಸುಕನ್ಯಾ ದಂಪತಿಯಲ್ಲದೆ ಅವರ ಪುತ್ರರು, ಸೊಸೆಯಂದಿರೂ ನಾಟಕ ಪ್ರದರ್ಶನದ ವೇಳೆ ರಂಗಸಜ್ಜಿಕೆ, ನೆರಳು ಬೆಳಕು, ಸಂಯೋಜನೆಗೆ ದುಡಿದಿದ್ದಾರೆ.

ಅವರು ರಚಿಸಿದ ನಾಟಕ ಕೃತಿಗಳಲ್ಲಿ ಲಭ್ಯವಿರುವ 9 ನಾಟಕಗಳನ್ನು ‘ದೀಪಾವಳಿ ಮತ್ತು ಇತರ ನಾಟಕಗಳು’ ಎನ್ನುವ ಹೆಸರಿನಲ್ಲಿ ನಾಟಕಗಳ ಬೃಹತ್ ಸಂಪುಟವನ್ನು ಗುಂಡೂರಾಯರ ಪುತ್ರ ಕೆರೋಡಿ ನಿರಂಜನ್ ರಾವ್ ಮತ್ತು ಸೊಸೆ ಸುಮತಿ ನಿರಂಜನ್ ರಾವ್ ಅವರು ಪ್ರಕಟಿಸಿದ್ದಾರೆ. ಈ ನಾಟಕ ಸಂಪುಟವನ್ನು ರಾಷ್ಟ್ರ ಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದವರು ಪ್ರಕಟಿಸಿದ್ದಾರೆ. ಇದರ ಬಿಡುಗಡೆ ಸಂದರ್ಭದಲ್ಲಿ ಗುಂಡೂರಾಯರು ಅನುವಾದಿಸಿದ ಮೈಸೂರ ಮಲ್ಲಿ ನಾಟಕವನ್ನು ಧಾರವಾಡದ ಪ್ರಕಾಶ ಗರೂಡ ಅವರ ಗೊಂಬೆ ಮನೆ ತಂಡ ಪ್ರದರ್ಶಿಸಿದೆ.

ಇದಲ್ಲದೆ 2016ರಲ್ಲಿ ಗುಂಡೂರಾಯರು ತಮ್ಮ ನಾಟಕಗಳಿಗಾಗಿ ಸಂಯೋಜಿಸಿದ ಆಯ್ದ ಭಕ್ತಿ ಗೀತೆಗಳ ಎರಡು ಸಿ.ಡಿ. ‘ಭಕ್ತಿ ಭಾವ ಸುಧಾ’ ಬಿಡುಗಡೆಯಾಗಿವೆ.

ಅವರು ರಚಿಸಿದ ನಾಂದಿಗೀತೆ ‘ಸ್ವಾಗತಂ ನೆರೆದ ಸುಜನರಿಗೆ ಸ್ವಾಗತಂ’ ಮತ್ತು ಮಂಗಳಗೀತೆ ‘ಜಯ ಜಯ ಗುರುವರ’ಗಳನ್ನು ನಾಟ್ಯರಂಗದ ಪ್ರತೀ ನಾಟಕದ ಆರಂಭದಲ್ಲಿ ಮತ್ತು ಅಂತ್ಯದಲ್ಲಿ ಸಂಗೀತಗಾರರು ಹಾಡುತ್ತಿದ್ದರು ಎನ್ನುವುದು ಗಮನಾರ್ಹ.

1978ರಲ್ಲಿ ದಶವಾರ್ಷಿಕ ಮಹೋತ್ಸವ, 1993 ರಲ್ಲಿ ರಜತ ಮಹೋತ್ಸವ, 1999ರಲ್ಲಿ ಮುತ್ತಿನ ಹಬ್ಬ, 2003ರಲ್ಲಿ ಹವಳದ ಹಬ್ಬ, 2008ರಲ್ಲಿ ರನ್ನ ಕೆಂಪಿನ ಹಬ್ಬ, 2018ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿದೆ ಕನ್ನಡ ನಾಟ್ಯರಂಗ.

ಸದ್ಯ ಕನ್ನಡ ನಾಟ್ಯರಂಗದ ಅಧ್ಯಕ್ಷ ಮಾರಣಕಟ್ಟೆ ಕೃಷ್ಣಮೂರ್ತಿ ಅವರು ಆದರಾತಿಥ್ಯಕ್ಕೂ ಹೆಸರಾದವರು. ಅವರ ಹಾಗೂ ಕಾರ್ಯದರ್ಶಿ ರಾಮಚಂದ್ರ ದಿಡ್ಗಿ ಅವರ ನೇತೃತ್ವದಲ್ಲಿ ರಂಗ ಚಟುವಟಿಕೆಗಳು ಮುಂದುವರಿದಿವೆ. ಸಂಘಕ್ಕೆ ಗುಂಡೂರಾಯರ ಪುತ್ರ ನಿರಂಜನರಾವ್ ಮತ್ತು ಅವರ ಪತ್ನಿ ಸುಮತಿ ಬೆನ್ನೆಲುಬಾಗಿ ನಿಂತಿದ್ದಾರೆ.

ಸದಾ ರಂಗ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಸಾಮೂಹಿಕ ಬೆಳವಣಿಗೆಗೆ ಒತ್ತು ಕೊಟ್ಟ ಸಂಘವು, ರಂಗಭೂಮಿಯು ಮನುಷ್ಯರನ್ನು ಒಂದಾಗಿಸುತ್ತದೆ ಜೊತೆಗೆ ಮಾನವೀಯ ಸಂಬಂಧಗಳನ್ನು ಬೆಸೆಯುತ್ತದೆ ಎಂಬುದನ್ನು ಸಾಬೀತುಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಣೇಶ ಅಮೀನಗಡ

contributor

Similar News