Photo: screengrab/x.com/INCIndia

ವಿಡಂಬನಾತ್ಮಕ ಲೇಖನ, ವ್ಯಂಗ್ಯ ಚಿತ್ರ, ರಾಜಕೀಯ ನಾಯಕರ ಅಣಕ (ಮಿಮಿಕ್ರಿ)-ಇವುಗಳೆಲ್ಲ ಪ್ರಬುದ್ಧ ಪ್ರಜಾತಂತ್ರದ ಲಕ್ಷಣಗಳು. ಅವುಗಳು, ಚುನಾಯಿತ ಸರಕಾರದ ವೈಫಲ್ಯಗಳನ್ನು ರೇಖಾ ಚಿತ್ರ, ದ್ವಂದ್ವಾರ್ಥ ಹೊಂದಿದ ಬರಹ ಅಥವಾ ಮಾತು, ನಾಯಕರ ಸ್ಥಾನಕ್ಕೆ ಗೌರವ ನೀಡದ ಹಾವಭಾವ ಮತ್ತು ವರ್ತನೆಗಳ ಅಣಕದ ಮೂಲಕ ಮತದಾರರ ಗಮನಕ್ಕೆ ತರುವ ಕೆಲಸ ಮಾಡುತ್ತವೆ. ವೈಯಕ್ತಿಕ ಹಗೆತನ ಅಥವಾ ದುರುದ್ದೇಶರಹಿತವಾದ ಈ ಮಾಧ್ಯಮಗಳು ಮನುಜನ ಅಗಾಧವಾದ ಸೃಜನಶೀಲತೆಗೆ ದಾರಿಗಳು ಕೂಡ.

ಸಮಕಾಲೀನ ಭಾರತದ ರಾಜಕೀಯ ಪರಿಸ್ಥಿತಿಯಲ್ಲಿ ಉಳಿದ ಮಾಧ್ಯಮಗಳಂತೆ, ವಿಡಂಬನೆ, ವ್ಯಂಗ್ಯಚಿತ್ರ ಮತ್ತು ಅಣಕಗಳು ಸರಕಾರ ಮತ್ತು ಅದರ ಅನುಯಾಯಿಗಳ ಕೆಂಗಣ್ಣಿಗೆ ಗುರಿಯಾಗುತ್ತಿವೆ; ಹಾಗೂ ಅವುಗಳ ಕರ್ತೃಗಳು ಆಳುವ ಪಕ್ಷದ ಕೃಪಾಪೋಷಿತ ಸಂಘಟನೆಗಳು ಮತ್ತು ಅವುಗಳ ‘ಕಾಲಾಳು’ಗಳಿಂದ ಹಿಂಸೆಗೂ ಬಲಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೆ ಇಂದೋರಿನಲ್ಲಿ ಕಾಂಗ್ರೆಸ್ ಪಕ್ಷದ ನೇತಾರ ರಾಹುಲ ಗಾಂಧಿಯವರ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರನ್ನು ಅಣಕಿಸಿದ ವಿಡಂಬನಕಾರ ಪುಲಕಿತ ಮಣಿ ಅವರಿಗೆ ತೀವ್ರವಾದ ಬೆದರಿಕೆಗಳು ಬಂದು ತಮ್ಮ ‘ಶೋ’ಗಳನ್ನು ರದ್ದುಪಡಿಸಿದ್ದಾರೆ.

ಇದು ಕೇವಲ ಒಂದು ಘಟನೆಯಲ್ಲ. ವಿಡಂಬನಾತ್ಮಕ ಮಾತುಗಳಿಗೆ ಪ್ರಸಿದ್ಧರಾದ ಕುಣಾಲ್ ಕಮ್ರಾ ಅವರು ಅನೇಕ ಪ್ರದರ್ಶನಗಳನ್ನು ಈ ಹಿಂದೆ ರದ್ದುಪಡಿಸಿದ್ದಲ್ಲದೆ, ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ವ್ಯಂಗ್ಯ ಚಿತ್ರಕಾರರು, ಯೂಟ್ಯೂಬ್, ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್ ಮುಂತಾದ ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಪ್ರಸ್ತುತ ಪಡಿಸುವ ಅನೇಕ ಸಾಮಾಜಿಕ ಕಾರ್ಯಕರ್ತರು ಇದೇ ತರದ ಮಾನಸಿಕ ಹಾಗೂ ದೈಹಿಕ ಬೆದರಿಕೆಗಳನ್ನು ಎದುರಿಸಬೇಕಾಗಿ ಬಂದಿದೆ. ಮಹಿಳೆಯರಾದರೆ ಅವರಿಗೆ ಅವರ ಚಾರಿತ್ರ್ಯಹರಣ ಮತ್ತು ಮಾನಭಂಗದ ಬೆದರಿಕೆಗಳನ್ನು ನೀಡಲಾಗುತ್ತಿದೆ. ಉದಾಹರಣೆಗೆ ಭೋಜಪುರಿ ಜಾನಪದ ಹಾಡುಗಾರ್ತಿ ನೇಹಾ ಸಿಂಗ್ ಠಾಕೂರರು ತಮ್ಮ ರಾಜಕೀಯ ಮಿಶ್ರಿತ ಹಾಡುಗಳ ಮೂಲಕ ಸರಕಾರಗಳ ವೈಫಲ್ಯಗಳನ್ನು ಬಿತ್ತರಿಸಿದ್ದಕ್ಕೆ ಕ್ರಿಮಿನಲ್ ಮೊಕದ್ದಮೆಗಳನ್ನು ಮಾತ್ರವಲ್ಲ ಅತ್ಯಾಚಾರದ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ.

ಈ ಬೆಳವಣಿಗೆಯ ಹಿಂದೆ ಸರಕಾರದ ವೈಫಲ್ಯಗಳ ಕುರಿತು ಬರುವ ಟೀಕೆಯ ಬಗ್ಗೆ ತೀವ್ರವಾದ ಅಸಹಿಷ್ಣುತೆ ಅಡಕವಾಗಿದೆ. ಇದಕ್ಕೆ ರಾಜಕೀಯ ನಾಯಕರ ಮೇಲಿನ ಅಂಧಭಕ್ತಿ, ನಾಯಕರು ತಮಗೇ ಎಲ್ಲ ತಿಳಿದಿದೆ ಮತ್ತು ತಾವು ಮಾಡಿದ್ದೇ ಸರಿ, ಟೀಕೆಗಳು ದುರುದ್ದೇಶದಿಂದ ಕೂಡಿವೆ ಎಂಬ ಪೂರ್ವಾಗ್ರಹಗಳು ಪ್ರಮುಖ ಕಾರಣಗಳೆಂದರೆ ತಪ್ಪಲ್ಲ. ಟೀಕೆಗಳು ಬಂದಾಗ ಅವುಗಳಿಗೆ ನ್ಯಾಯಯುತವಾಗಿ ತರ್ಕಬದ್ಧವಾಗಿ ಉತ್ತರಿಸಬೇಕಾದ್ದು ಪ್ರಬುದ್ಧ ನಾಯಕರ ಹೊಣೆಗಾರಿಕೆ. ನಿಖರ ಮಾಹಿತಿ ಮತ್ತು ತಾರ್ಕಿಕ ವಿಶ್ಲೇಷಣೆಗೆ ಅವಕಾಶವಿಲ್ಲದ ಈಗಿನ ಕಾಲಘಟ್ಟದಲ್ಲಿ ತಮ್ಮ ವಿಮರ್ಶಕರನ್ನು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಗುರಿಪಡಿಸುವುದು ಈ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಮುಖ್ಯ ಮಾರ್ಗ.

ವ್ಯಂಗ್ಯ, ಹಾಸ್ಯ, ವಿಡಂಬನೆಗಳ ಉದ್ದೇಶ ಆಡಳಿತವರ್ಗದವರನ್ನು ಎಚ್ಚರಿಸುವುದು. ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಲಕ್ಷಣ. ಈ ಪ್ರವೃತ್ತಿ ಭಾರತದಲ್ಲಿ ಅನಾದಿಕಾಲದಲ್ಲಿ ವಾಡಿಕೆಯಲ್ಲಿತ್ತು ಎಂಬುದಕ್ಕೆ ಅಕ್ಬರ್-ಬೀರಬಲ್ ಜೋಡಿ, ಶ್ರೀಕೃಷ್ಣದೇವರಾಯ-ತೆನಾಲಿ ರಾಮಕೃಷ್ಣರ ಸಂವಾದಗಳು ನಿದರ್ಶನಗಳು. ನಾವು ಬ್ರಿಟಿಷರ ವಸಾಹತು ರಾಜ್ಯವಾಗಿದ್ದಾಗಲೂ ಪ್ರಾದೇಶಿಕ ವೃತ್ತಪತ್ರಿಕೆಗಳಲ್ಲಿ ರಾಜಶಾಹಿಯನ್ನು ಟೀಕಿಸುವ ವ್ಯಂಗ್ಯಚಿತ್ರಗಳು ಪ್ರಕಟವಾಗುತ್ತಿದ್ದವು. ಆಂಗ್ಲ ಸರಕಾರವು ತೀವ್ರವಾದ ಕಾನೂನುಕ್ರಮಗಳನ್ನು ಅವರ ಮೇಲೆ ಕೈಗೊಳ್ಳುತ್ತಿರಲಿಲ್ಲ.

ಸ್ವಾತಂತ್ರ್ಯೋತ್ತರ ದಿನಗಳಲ್ಲಿ ಪ್ರಸಿದ್ಧ ವ್ಯಂಗ್ಯಚಿತ್ರ ಕಲಾವಿದ ಶಂಕರ್ಸ್ ವೀಕ್ಲಿಯ ಸ್ಥಾಪಕ ಶಂಕರ ಪಿಳ್ಳೆಯವರು ಪ್ರಧಾನಿ ನೆಹರೂ ಅವರ ಆಪ್ತಮಿತ್ರರಾಗಿದ್ದರೂ ತಮ್ಮ ತೀಕ್ಷ್ಣವಾದ ರೇಖಾಚಿತ್ರಗಳ ಮೂಲಕ ಪ್ರಧಾನಿಯನ್ನು ಹಂಗಿಸುತ್ತಿದ್ದರು. ಆರ್.ಕೆ. ಲಕ್ಷ್ಮಣರೂ ತಮ್ಮ ‘ಕಾಮನ್ ಮ್ಯಾನ್’ ಅಥವಾ ‘ಶ್ರೀಸಾಮಾನ್ಯ’ನ ಮೂಲಕ ಆಡಳಿತ ವರ್ಗದವರ ವೈಫಲ್ಯಗಳನ್ನು ಜನರ ಮುಂದಿಡುತ್ತಿದ್ದರು. ಮುಂದೆ ಇಂದಿರಾ ಗಾಂಧಿಯವರು ಹೇರಿದ ಎಮರ್ಜೆನ್ಸಿಯ ಕಾಲದಲ್ಲಿಯೂ ಇನ್ನೊಬ್ಬ ಖ್ಯಾತ ಕಲಾವಿದ ಅಬು ಅಬ್ರಹಾಂ ಸ್ನಾನಗೃಹದಲ್ಲಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಸುಗ್ರೀವಾಜ್ಞೆಗೆ ಹಸ್ತಾಕ್ಷರ ಮಾಡುವ ತಮ್ಮ ವ್ಯಂಗ್ಯಚಿತ್ರದ ಮೂಲಕ ಸಾಂವಿಧಾನಿಕ ಹುದ್ದೆಗಳಲ್ಲಿರುವ ಇಬ್ಬರ ಕಾರ್ಯವೈಖರಿಯನ್ನು ಟೀಕಿಸಿದ್ದರು. ಅಬ್ರಹಾಂ ಅವರನ್ನು ಇಂದಿರಾ ಆಗಲೀ ಅವರ ‘ಕಾಲಾಳು’ಗಳಾಗಲೀ ಬೆದರಿಸಿರಲಿಲ್ಲ; ಅವರ ಮೇಲೆ ಯಾವುದೇ ಮೊಕದ್ದಮೆಯನ್ನು ಹೂಡಲಿಲ್ಲ.

ಆದರೆ 2012ರಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್‌ಸಿಪಿಯ ಸಮ್ಮಿಶ್ರ ಸರಕಾರವು ಭ್ರಷ್ಟಾಚಾರದ ಬಗ್ಗೆ ವ್ಯಂಗ್ಯಚಿತ್ರ ಬರೆದ ಕಲಾವಿದ ಅಸೀಮ ತ್ರಿವೇದಿಯವರನ್ನು ಬಂಧಿಸಿ ಮುಂದೆ ಬರಬಹುದಾದ ತೀವ್ರವಾದ ಅಸಹಿಷ್ಣುತೆಗೆ ನಾಂದಿ ಹಾಡಿತ್ತು ಎಂದರೆ ತಪ್ಪಾಗಲಾರದು. 2014ರ ನಂತರ ಈಗ ವ್ಯವಸ್ಥಿತ ರೂಪದಲ್ಲಿ ಅಧಿಕಾರದ ದುರುಪಯೋಗದ ಮೂಲಕ ಮತ್ತು ಆಳುವ ಪಕ್ಷದ ಸಹಸಂಸ್ಥೆಗಳ ಸಹಾಯದಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ನಿರಂತರ ನಡೆಯುತ್ತಿದೆ. ವಿಪರ್ಯಾಸವೆಂದರೆ ಹಕ್ಕುಗಳನ್ನು ರಕ್ಷಿಸಬೇಕಾದ ನ್ಯಾಯಾಂಗವು ಸರಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ.

ಯಾವ ತರದ ವಿಡಂಬನೆ, ಅಣಕ ಅಥವಾ ವ್ಯಂಗ್ಯಚಿತ್ರ ಆಕ್ಷೇಪಕಾರಿ ಎಂಬುದನ್ನು ಸಾರ್ವಜನಿಕರು ನಿರ್ಧರಿಸಬೇಕು. ಅದರಲ್ಲಿ ದುರುದ್ದೇಶ ಮತ್ತು ವ್ಯಕ್ತಿಗತ ಹಗೆತನವಿರಬಾರದು. ಸರಕಾರದ ನಿರ್ಧಾರಗಳನ್ನು, ಅವುಗಳಿಂದ ಜನರ ಮೇಲೆ ಆಗುವ ದುಷ್ಪರಿಣಾಮಗಳನ್ನು, ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಚುನಾಯಿತ ಗಣ್ಯರ ವರ್ತನೆ, ಹಾವಭಾವ ಮತ್ತು ವೇಷಭೂಷಣಗಳ ಬಗ್ಗೆ ಕಲಾವಿದರು ತಮ್ಮ ಅಭಿಪ್ರಾಯವನ್ನು ಬರಹಕ್ಕಿಳಿಸುವುದು ಅಥವಾ ಚಿತ್ರಕಾರ ರೇಖೆಗಳ ಮೂಲಕ ಬಿಂಬಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವಾಗುವುದಿಲ್ಲ.

ಅಭಿವ್ಯಕ್ತಿ ಮತ್ತು ವ್ಯಕ್ತಿ ಸ್ವಾತಂತ್ರ್ಯಗಳು ಆರೋಗ್ಯವಂತ ಪ್ರಬುದ್ಧ ಪ್ರಜಾತಂತ್ರದ ಲಕ್ಷಣ. ಪ್ರಜಾತಂತ್ರಕ್ಕೆ ಬದ್ಧವಾಗಿರುವ ದೇಶಗಳ ಸಂಸತ್ತಿನ ಒಳಗೆ ಚುನಾಯಿತ ಸದಸ್ಯರು ಸರಕಾರದ ನಡೆಯನ್ನು ಟೀಕಿಸುವ ಹಕ್ಕನ್ನು ಹೊಂದಿದ್ದಾರೆ. ಸಂಸತ್ತಿನ ಹೊರಗಡೆ, ಸರಕಾರವನ್ನು ವಿವಿಧ ದಾರಿಗಳಲ್ಲಿ ವಿಮರ್ಶೆಗೆ ಗುರಿಮಾಡುವ ಹಕ್ಕನ್ನು ಜನರು ಅಂದರೆ ಮತದಾರರು ಹೊಂದಿದ್ದಾರೆ; ಆ ಮೂಲಕ ಅವರು ಸರಕಾರದ ಉತ್ತರದಾಯಿತ್ವವನ್ನು ಕೇಳಬಹುದು. ಈ ಹಕ್ಕು ಇದ್ದಾಗ ಮಾತ್ರ ಪ್ರಜಾತಂತ್ರ ಭದ್ರವಾಗುತ್ತದೆ.

ಶತಮಾನಗಳ ದಾಸ್ಯದ ಬಿಡುಗಡೆಗೆ ಹೋರಾಡಿ 1947ರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪಡೆದು 1950ರ ಸಂವಿಧಾನದ ಮೂಲಕ ಅದನ್ನು ಮೂಲಭೂತ ಹಕ್ಕು ಎಂದು ಸಾರ್ವಜನಿಕವಾಗಿ ದೇಶವು ಸ್ವೀಕರಿಸಿ 75 ವರ್ಷಗಳ ಸುದೀರ್ಘ ಅನುಭವದ ಬಳಿಕವೂ ಮತ್ತೆ ಅದೇ ಸ್ವಾತಂತ್ರ್ಯದ ಅಸ್ತಿತ್ವಕ್ಕೆ ವ್ಯವಸ್ಥಿತ ಹೊಡೆತ ಬೀಳುತ್ತಿರುವುದು ಇಂದಿನ ರಾಜಕೀಯ ಸನ್ನಿವೇಶದ ಆಘಾತಕಾರಿ ವಿಪರ್ಯಾಸ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor